ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು | ತೀವ್ರ ಬಿಸಿಲು; ಭತ್ತದ ಹುಲ್ಲಿಗೆ ಹೆಚ್ಚಿದ ಬೇಡಿಕೆ

Published 9 ಮೇ 2024, 8:20 IST
Last Updated 9 ಮೇ 2024, 8:20 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ದೇವರ ಬೆಳೆಕೆರೆ ಪಿಕಪ್‌, ಹೊಳೆಸಾಲಿನಲ್ಲಿ ನಾಟಿ ಮಾಡಿದ್ದ ಭತ್ತದ ಕಟಾವು ಭರದಿಂದ ಸಾಗಿದ್ದು ಭತ್ತದ ಹುಲ್ಲಿಗೂ ಬೇಡಿಕೆ ಹೆಚ್ಚಾಗಿದೆ. ಆದರೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತದ ನಾಟಿ ಮಾಡದ ಕಾರಣ ಹುಲ್ಲಿಗೆ ವಿಪರೀತ ಬೇಡಿಕೆ ಬಂದಿದೆ.

ಬೇಸಿಗೆ ಹಂಗಾಮಿನ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಭತ್ತ ಕಟಾವು ಮಾಡಿದ 2-3 ದಿನದಲ್ಲಿ ಹುಲ್ಲು ಸಂಪೂರ್ಣವಾಗಿ ಒಣಗಿದ ಕಾರಣ ಉತ್ತಮ ದರ್ಜೆಯ ಹುಲ್ಲಿನ ಲಭ್ಯತೆ ಕಡಿಮೆಯಾಗಿದೆ. ಹರಪನಹಳ್ಳಿ, ರಾಣೆಬೆನ್ನೂರು, ಹಿರೇಕೆರೂರು, ಹಾವೇರಿ ಭಾಗದ ರೈತರು ಟ್ರ್ಯಾಕ್ಟರ್‌ಗೆ ಟ್ರೈಲರ್‌ಗಳನ್ನು ಕಟ್ಟಿಕೊಂಡು ಈ ಭಾಗದ ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದಾರೆ.

ಪ್ರತೀ ಟ್ರ್ಯಾಕ್ಟರ್‌ ಲೋಡ್‌ ಒಣಹುಲ್ಲನ್ನು ₹6,000ರಿಂದ ₹7,000ಕ್ಕೆ ರೈತರು ಕೊಂಡೊಯ್ಯುತ್ತಿದ್ದಾರೆ. ಪೆಂಡಿ ಕಟ್ಟಿದ ಹುಲ್ಲು, ಪ್ರತೀ ಟ್ರ್ಯಾಕ್ಟರ್‌ ಲೋಡ್‌ಗೆ ₹10,000ಕ್ಕೆ ಬಿಕರಿಯಾಗುತ್ತಿದೆ. ಟ್ರ್ಯಾಕ್ಟರ್‌ಗೆ ಲೋಡ್ ಮಾಡುವುದು, ಬಾಡಿಗೆ ಇನ್ನಿತರ ಚಿಕ್ಕಪುಟ್ಟ ಖರ್ಚು ಪ್ರತ್ಯೇಕ ಎಂದು ಉಕ್ಕಡಗಾತ್ರಿ ರೈತ ಸಣ್ಣ ಸಂಜೀವರೆಡ್ಡಿ ಮಾಹಿತಿ ನೀಡಿದರು. 

‘ಬೀಗರು, ಸ್ನೇಹಿತರಿಗೆ ಸ್ವಲ್ಪ ಹುಲ್ಲು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ದನಕರುಗಳಿಗೆ ಹುಲ್ಲು ಬೇಕಿದೆ’ ಎನ್ನುತ್ತಾರೆ ‌ಗುಳದಳ್ಳಿ ರೈತ ನಾಗರಾಜ್.

ಬೇಸಿಗೆ ಹಂಗಾಮಿನ ಒಣಗಿದ ಹುಲ್ಲು ಒಂದು ವರ್ಷ ಬಣವೆ ಹಾಕಿಟ್ಟರೂ ಕೊಳೆಯುವುದಿಲ್ಲ ಹಾಗೂ ಕೆಡುವುದಿಲ್ಲ. ಮುಂಗಾರಿನ ಅನಿಶ್ಚಿತತೆಯ ಕಾರಣ ಮುಂದಿನ ಒಂದು ವರ್ಷದ ಅವಧಿಗೆ  ಜಾನುವಾರಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. 

ವೈಜ್ಞಾನಿಕ ಸಂಗ್ರಹಣೆ: ಭತ್ತವನ್ನು ಯಾಂತ್ರೀಕೃತ ವಿಧಾನದಲ್ಲಿ ಕಟಾವು ಮಾಡುವುದರಿಂದ ಹುಲ್ಲು ಪುಡಿಯಾಗುತ್ತದೆ. ಸರಿಯಾಗಿ ರೀತಿ ವೈಜ್ಞಾನಿಕ ಮಾದರಿಯಲ್ಲಿ ಸಂಗ್ರಹಣೆ ಮಾಡಬೇಕು. ಭತ್ತದ ಬೆಳೆಗಾರರಿಗೆ ಒಂದಿಷ್ಟು ಹಣ ಹುಲ್ಲಿನ ಸ್ವರೂಪದಲ್ಲಿ ಸಿಗುತ್ತದೆ ಎಂದು ನಂದಿತಾವರೆ ಭತ್ತದ ಬೆಳೆಗಾರ ಗದ್ದಿಗೆಪ್ಪ ಪೂಜಾರ್, ಶರಣ ಮುದ್ದಣ ಸಾವಯವ ಕೃಷಿಕ ಬಳಗದ ಸಂಚಾಲಕ ಕುಂಬಳೂರು ಅಂದನೂರು ಆಂಜನೇಯ ಹಾಗೂ ಚಂದ್ರು ಅಭಿಪ್ರಾಯಪಟ್ಟಿದ್ದಾರೆ. 

ಸಾಗಣೆ ಮೇಲೆ ನಿಗಾ: ಸಾಗಣೆ ವೆಚ್ಚ ಉಳಿಸಲು ಟ್ರ್ಯಾಕ್ಟರ್ ಮೂಲಕ ಎರಡು ಟ್ರೈಲರ್ ಬಳಸಿ ಹುಲ್ಲು ಸಾಗಣೆ ಮಾಡುವುದು ಸಾಮಾನ್ಯವಾಗಿದೆ. ಹೀಗೆ ಸಾಗಣೆ ಮಾಡುವ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರ ಕಷ್ಟಕರ ಎನ್ನುತ್ತಾರೆ ವಾಹನ ಸವಾರರು. 

ಹುಲ್ಲು ಸಾಗಣೆ ವೇಳೆ ಟ್ರ್ಯಾಕ್ಟರ್ ಚಾಲಕರು ಕರ್ಕಶವಾಗಿ ಹಾಡು ಹಾಕಿಕೊಂಡು ಚಾಲನೆ ಮಾಡುತ್ತಾರೆ. ಬೇರೆ ವಾಹನ ಮುಂದೆ ಹೋಗಲು ಅವಕಾಶ ನೀಡುವುದಿಲ್ಲ. ಇದರಿಂದ ಅಪಘಾತದ ಸಾಧ್ಯತೆ ಹೆಚ್ಚಿರುತ್ತದೆ. ಚೆಕ್‌ಪೋಸ್ಟ್ ಸ್ಥಾಪಿಸಿ, ಚಾಲನೆ ನಿಯಮ ಪಾಲಿಸಲು ತಾಕೀತು ಮಾಡಬೇಕು ಎಂದು ಲಾರಿ ಹಾಗೂ ಬಸ್ ಚಾಲಕರು ಸಲಹೆ ನೀಡುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT