ಮಂಗಳವಾರ, ಸೆಪ್ಟೆಂಬರ್ 22, 2020
25 °C

ಆರ್ಥಿಕ ಹಿಂಜರಿತ ನಮ್ಮ ಹಿತ್ತಲಿನಲ್ಲಿದೆ: ಸಹಾಯಕ ಸಂಪಾದಕ ಕೇಶವ ಜಿ. ಜಿಂಗಾಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ದೇಶದ ಆರ್ಥಿಕ ಹಿಂಜರಿತ ಸದ್ಯ ನಮ್ಮ ಹಿತ್ತಲಿನಲ್ಲಿದೆ. ಮುಂದೆ ನಮ್ಮ ಜಗುಲಿಗೂ ಬರಬಹುದು. ಆರ್ಥಿಕತೆ ಎಳೆದುಕೊಂಡು ಹೋಗುವ ಎಂಜಿನ್‌ ಈಗ ನಿಧಾನವಾಗಿದೆ. ಹಳ್ಳ, ದಿಣ್ಣೆಗಳಿರುವ ಕಾರಣ ಅದರ ವೇಗ ಕಡಿಮೆಯಾಗಿದೆ’ ಎಂದು ‘ಪ್ರಜಾವಾಣಿ’ಯ ಸಹಾಯಕ ಸಂಪಾದಕ, ವಾಣಿಜ್ಯ ವಿಭಾಗದ ಮುಖ್ಯಸ್ಥ ಕೇಶವ ಜಿ. ಜಿಂಗಾಡೆ ಹೇಳಿದರು.

ನಗರದ ಬಾಪೂಜಿ ಬಿ ಸ್ಕೂಲ್‌ನಲ್ಲಿ ಶುಕ್ರವಾರ ಬಿಐಇಟಿ ಕಾಲೇಜು, ಬಾಪೂಜಿ ಅಕಾಡೆಮಿ ಆಫ್‌ ಮ್ಯಾನೇಜ್‌ಮೆಂಟ್‌ ಅಂಡ್‌ ರೀಸರ್ಚ್‌ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾರತದ ಆರ್ಥಿಕ ಹಿಂಜರಿತ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಉತ್ಪಾದನೆ, ಮಾರಾಟ, ಆಟೊಮೊಬೈಲ್‌, ಜವಳಿ ಕ್ಷೇತ್ರ ಹೀಗೆ ಎಲ್ಲ ವಲಯಗಳಲ್ಲಿ ಆರ್ಥಿಕ ಸಂಕಷ್ಟ ಇದೆ. ಬಿಎಸ್‌ಎನ್‌ಎಲ್ ಉದ್ಯೋಗಿಗಳಿಗೆ ವೇತನ ಬರುತ್ತದೆಯೋ ಇಲ್ಲವೋ ಎಂಬ ಬಗ್ಗೆ ಖಾತರಿ ಇಲ್ಲ. ಆದರೆ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸಚಿವ ಅಮಿತ್‌ ಶಾ ಹಿಂದಿ ಹೇರಿಕೆ ವಿಷಯ ಮಾತನಾಡುತ್ತಿದ್ದಾರೆ. ಆದರೆ ಆರ್ಥಿಕ ಹಿಂಜರಿತ ಸುಲಭವಾಗಿ ಮರೆಯುವ ವಿಷಯವಲ್ಲ ಎಂದು ಅಭಿಪ್ರಾಯಪಟ್ಟರು.

ಐದು ತ್ರೈಮಾಸಿಕದಲ್ಲಿ ಆರ್ಥಿಕ‌ ವೃದ್ಧಿ ದರ (ಜಿಡಿಪಿ) ಬೆಳವಣಿಗೆ ಆಗಿಲ್ಲ. ಈ ಮೊದಲು ಶೇ 7.5 ಇತ್ತು. ಆದರೆ ಈಗ ಶೇ 5ರಷ್ಟಿದೆ. ಇದು ಸರ್ಕಾರವೇ ನೀಡುವ ಅಂಕಿ ಅಂಶ. ನಿರುದ್ಯೋಗ ಹೆಚ್ಚಿದೆ. 10 ತಿಂಗಳಲ್ಲಿ ಕಾರುಗಳ ಮಾರಾಟ ಆಗಿಲ್ಲ. ಜನರು ವೋಲಾ, ಉಬರ್‌ ಬಳಸುತ್ತಿರುವುದರಿಂದ ಕಾರು ಮಾರಾಟ ಆಗುತ್ತಿಲ್ಲ ಎಂದು ಹಣಕಾಸು ಸಚಿವರು ಹೇಳುತ್ತಾರೆ. ಆದರೆ ಲಾರಿ, ಬೈಕ್‌ಗಳೂ ಮಾರಾಟ ಆಗಿಲ್ಲ. ಇವು ಯಾಕೆ ಮಾರಾಟ ಆಗಿಲ್ಲ ಎಂಬ ಬಗ್ಗೆ ಸ್ಪಷ್ಟ ಉತ್ತರ ಅವರಲ್ಲೇ ಇಲ್ಲ. ದಾವಣಗೆರೆಯ ಜವಳಿ ಉದ್ಯಮದಲ್ಲೂ ಸಂಕಷ್ಟ ಇದೆ. ಬೆಂಗಳೂರಿನ ಪೀಣ್ಯದ ಹಲವು ಉದ್ಯಮದಲ್ಲಿ ಉತ್ಪಾದನೆ ಕುಸಿತ ಕಂಡಿದೆ ಎಂದು ಹೇಳಿದರು.

ಆರ್ಥಿಕ ಹಿಂಜರಿತ ಸೈಕ್ಲಿಕಲ್‌ ಅಥವಾ ಸ್ಟ್ರಕ್ಚರಲ್‌ ಎಂಬ ಬಗ್ಗೆ ಎಲ್ಲರಲ್ಲೂ ಅನುಮಾನ ಇದೆ. ಈಗಿನ ಹಿಂಜರಿತ ಸೈಕ್ಲಿಕಲ್‌. ಹಲವು ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ. ಎನ್‌ಬಿಎಫ್‌ಸಿ (ನಾನ್‌ ಬ್ಯಾಂಕಿಂಗ್‌ ಫೈನಾನ್ಶಿಯಲ್‌ ಕಂಪನಿ)ಯಲ್ಲೂ ದುಡ್ಡಿಲ್ಲ. ಕೇಂದ್ರದಲ್ಲಿ ಹೊಸ ಸರ್ಕಾರ ಬಂದಾಗ ಷೇರುಪೇಟೆಯ ಮಾರುಕಟ್ಟೆ ಮೌಲ್ಯ ₹ 151 ಲಕ್ಷ ಕೋಟಿ ಇತ್ತು. ಈಗ ₹ 131 ಲಕ್ಷ ಕೋಟಿಗೆ ಇಳಿದಿದೆ. ರಫ್ತು ಇಲ್ಲ. ರೂಪಾಯಿ ಮೌಲ್ಯ, ಎಫ್‌ಡಿಎ ಕುಸಿದಿದೆ. ತೆರಿಗೆ ಸಂಗ್ರಹ ಆಗಿಲ್ಲ. ಜಿಎಸ್‌ಟಿ, ನೋಟು ರದ್ದತಿ ಎಲ್ಲವೂ ಇದಕ್ಕೆ ಕಾರಣ. ಆರ್ಥಿಕತೆಯಲ್ಲಿ ಕಾಯಿಲೆ ಲಕ್ಷಣಗಳಿವೆ. ಇದು ತೀವ್ರಗೊಳ್ಳಬಹುದು ಎಂದು ವಿಶ್ಲೇಷಿಸಿದರು.

ಸೆಂಟರ್‌ ಫಾರ್‌ ಎಕಾನಮಿಕ್‌ ಸ್ಟಡೀಸ್‌ ಅಂಡ್‌ ಪಾಲಿಸಿ ಇನ್‌ಸ್ಟಿಟ್ಯೂಟ್‌ ಫಾರ್‌ ಸೋಷಿಯಲ್‌ ಅಂಡ್‌ ಎಕಾನಮಿಕ್‌ ಚೇಂಜ್‌ನ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಜೀವ್‌, ‘ಭಾರತೀಯ ಆರ್ಥಿಕತೆ 1991ರ ಉದಾರೀಕರಣದ ಬಳಿಕ ಹಲವು ಬದಲಾವಣೆ ಕಂಡಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಏರಿಳಿತ ಕಂಡಿದೆ. ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ದೇಶದಲ್ಲೂ ಅದರ ಪರಿಣಾಮ ಆಗಿದೆ’ ಎಂದು ಹೇಳಿದರು.

ಜಗತ್ತಿನ 5ನೇ ದೊಡ್ಡ ಆರ್ಥಿಕತೆ ದೇಶವಾಗಿದ್ದ ಭಾರತ ಈಗ 7ನೇ ಸ್ಥಾನಕ್ಕೆ ಕುಸಿದಿದೆ. ಸಣ್ಣ ಕೈಗಾರಿಕೆಗಳು, ಕಿರಾಣಿ ಅಂಗಡಿ, ಸಣ್ಣ ವ್ಯಾಪಾರ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ನೋಟು ರದ್ದತಿ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಕೈಗಾರಿಕೆ, ಆಟೊಮೊಬೈಲ್‌ ಕ್ಷೇತ್ರಗಳಲ್ಲೂ ಉತ್ಪಾದನೆ ಕುಸಿದಿದೆ. ಇದು ಸಣ್ಣ ಬಿಡಿಭಾಗಗಳ ಕೈಗಾರಿಕೆ ಮೇಲೆ ನೇರ ಪರಿಣಾಮ ಬೀರಿದೆ ಎಂದು ವಿವರಿಸಿದರು.

ಕೃಷಿ ಕ್ಷೇತ್ರವೂ ಸಂಕಷ್ಟದಲ್ಲಿದೆ. ರೈತರ ಆತ್ಮಹತ್ಯೆ ಹೆಚ್ಚಿದೆ. ಉದ್ಯೋಗ ಖಾತರಿಯಲ್ಲೂ ಉದ್ಯೋಗ ಸಿಗುತ್ತಿಲ್ಲ. ಬ್ಯಾಂಕ್‌ಗಳು ದೊಡ್ಡ ಉದ್ಯಮಕ್ಕೆ ಸಾಲ ನೀಡುತ್ತಿಲ್ಲ ಎಂದು ಹೇಳಿದರು.

ಬಾಪೂಜಿ ಬಿ ಸ್ಕೂಲ್‌ನ ಅಧ್ಯಕ್ಷ ಅಥಣಿ ವೀರಣ್ಣ, ‘ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ಬಳಿಕ ದೇಶದ ಆರ್ಥಿಕತೆಯಲ್ಲಿ ಹಲವು ಬದಲಾವಣೆಗಳಾಗಿವೆ. ಹಲವು ವರ್ಷಗಳಲ್ಲಿ ಅಭಿವೃದ್ಧಿ ಕಂಡಿದ್ದ ಆರ್ಥಿಕತೆ ಇಂದು ಸಂಕಷ್ಟದಲ್ಲಿದೆ. ಒಂದು ಕಾಲದಲ್ಲಿ ಮ್ಯಾಂಚೆಸ್ಟರ್‌ ಆಫ್‌ ಕರ್ನಾಟಕ ಆಗಿದ್ದ ದಾವಣಗೆರೆಯಲ್ಲಿ ಈಗ ಬೆರಳೆಣಿಕೆಯಷ್ಟು ಕಾರ್ಖಾನೆಗಳಿವೆ. ರಿಯಲ್‌ ಎಸ್ಟೇಟ್‌ ಉದ್ಯಮ ಸಂಕಷ್ಟದಲ್ಲಿರುವುದರಿಂದ ಸ್ಟೀಲ್‌ ಉದ್ಯಮ ಕಷ್ಟದಲ್ಲಿದೆ ಎಂದರು.

ಸರ್ಕಾರಗಳ ತಪ್ಪು ನೀತಿಯಿಂದ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರಗಳು ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ನಂತಹ ಯೋಜನೆ ಜಾರಿ ಮಾಡಿದ್ದರಿಂದ ಜನರು ಸೋಮಾರಿಗಳಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಬಾಪೂಜಿ ಬಿ ಸ್ಕೂಲ್‌ನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಎಚ್‌.ವಿ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ. ರತ್ನಾ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು