ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತ | ರಿಯಲ್‌ ಎಸ್ಟೇಟ್‌, ಆಟೊಮೊಬೈಲ್‌ಗೆ ಹೊಡೆತ : ಸಮೀಕ್ಷೆ

ಬಾಪೂಜಿ ಬಿ–ಸ್ಕೂಲ್‌ ಸಮೀಕ್ಷೆ: ಶೇ 74 ಜನರಲ್ಲಿದೆ ಉದ್ಯೋಗ ಕಡಿತ ಆತಂಕ
Last Updated 20 ಸೆಪ್ಟೆಂಬರ್ 2019, 14:26 IST
ಅಕ್ಷರ ಗಾತ್ರ

ದಾವಣಗೆರೆ: ಬಾಪೂಜಿ ಬಿ–ಸ್ಕೂಲ್‌ನ ವಿದ್ಯಾರ್ಥಿಗಳು ನಗರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲಿನ ಆರ್ಥಿಕ ಹಿಂಜರಿತದಿಂದ ರಿಯಲ್‌ ಎಸ್ಟೇಟ್‌ (ಶೇ 26) ಹಾಗೂ ಆಟೊಮೊಬೈಲ್‌ (ಶೇ 22) ಕ್ಷೇತ್ರಗಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿದೆ ಎಂಬ ಜನಾಭಿಪ್ರಾಯ ಮೂಡಿಬಂದಿದೆ.

ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲು ಬಾಪೂಜಿ ಬಿ–ಸ್ಕೂಲ್‌ನ 40 ವಿದ್ಯಾರ್ಥಿಗಳು, ‘ರ‍್ಯಾಂಡಮ್‌ ಸ್ಯಾಂಪಲ್‌ ಸರ್ವೆ’ ಮಾದರಿಯಡಿ ನಗರದ ವಿವಿಧ ವಯೋಮಾನದ, ಬೇರೆ ಬೇರೆ ಆದಾಯ ಹೊಂದಿರುವ 250 ಜನರ ಅಭಿಪ್ರಾಯಗಳನ್ನು 26 ಬಗೆಯ ಪ್ರಶ್ನೆಗಳ ಮೂಲಕ ಸಂಗ್ರಹಿಸಿದ್ದಾರೆ. ಜೀವನಾವಶ್ಯಕ ವಸ್ತುಗಳ ಮೇಲೆ ಪರಿಣಾಮ ಬೀರಿದೆ ಎಂದು ಶೇ 21ರಷ್ಟು ಜನ ಪ್ರತಿಪಾದಿಸಿದರೆ, ವಿದ್ಯುನ್ಮಾನ ಉಪಕರಣಗಳ (ಶೇ 4) ಮೇಲೆ ಕನಿಷ್ಠ ಪರಿಣಾಮ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಹಿಂಜರಿತದಿಂದ ಖಂಡಿತವಾಗಿಯೂ ಉದ್ಯೋಗ ಕಡಿತಗೊಳ್ಳಲಿದೆ ಎಂದು ಶೇ 25ರಷ್ಟು ಜನ ಪ್ರತಿಪಾದಿಸಿದ್ದರೆ, ಶೇ 49ರಷ್ಟು ಜನ ‘ಹೌದು’ ಎಂದಿದ್ದಾರೆ.

ಪ್ರತಿಕ್ರಿಯಿಸಿದ ಶೇ 95ರಷ್ಟು ಜನರಲ್ಲಿ ಶೇ 40ರಷ್ಟು ಜನ ಆರ್ಥಿಕ ಹಿಂಜರಿತ ತಮ್ಮ ಮೇಲೆ ಪರಿಣಾಮ ಬೀರಿದೆ ಎಂದಿದ್ದರೆ, ಶೇ 55ರಷ್ಟು ಜನ ತಮ್ಮ ಮೇಲೆಯೂ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ದಿನನಿತ್ಯ ಜೀವನದ ಮೇಲೆ ಇದು ಪರಿಣಾಮ ಬೀರಿದೆ ಎಂದು ಶೇ 52ರಷ್ಟು ಜನ ಪ್ರತಿಪಾದಿಸಿದ್ದಾರೆ.

ಆರ್ಥಿಕ ಹಿಂಜರಿತವು ಇನ್ನೂ ಒಂದರಿಂದ ಎರಡು ವರ್ಷಗಳ ಕಾಲ ಮುಂದುವರಿಯಲಿದೆ ಎಂದು ಶೇ 42ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಹಿಂಜರಿತ ನಿವಾರಣೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮ ತೃಪ್ತಿಕರವಾಗಿದೆಯೇ ಎಂಬ ಪ್ರಶ್ನೆಗೆ ಒಟ್ಟು ಶೇ 57ರಷ್ಟು ಜನ ‘ತಟಸ್ಥ’, ‘ಇಲ್ಲ’ ಹಾಗೂ ‘ಖಂಡಿತವಾಗಿಯೂ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಆರ್ಥಿಕ ಹಿಂಜರಿತ ಸಂದರ್ಭದಲ್ಲಿ ನೀವು ಕೈಗೊಳ್ಳುವ ಕಾರ್ಯಯೋಜನೆಗಳೇನು ಎಂಬ ಪ್ರಶ್ನೆಗೆ ಶೇ 47ರಷ್ಟು ಜನ ವೆಚ್ಚಕ್ಕೆ ಕಡಿವಾಣ ಹಾಕುವುದಾಗಿ ಪ್ರತಿಕ್ರಿಯಿಸಿದ್ದಾರೆ. ಶೇ 16ರಷ್ಟು ಜನ ಆಸ್ತಿ ಖರೀದಿಸುವುದಾಗಿ ಹೇಳಿದ್ದರೆ, ಶೇ 12ರಷ್ಟು ಜನ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಆಸಕ್ತಿ ಹೊಂದಿದ್ದಾರೆ.

ಬಾಪೂಜಿ ಬಿ–ಸ್ಕೂಲ್‌ನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ನಿರ್ದೇಶನ ಹಾಗೂ ಸಹ ಪ್ರಾಧ್ಯಾಪಕ ಡಾ. ಪ್ರಕಾಶ್‌ ಅಳಲಗೆರೆ, ಸಹಾಯಕ ಪ್ರಾಧ್ಯಾಪಕರಾದ ವಿಜಯ್‌ ಕೆ.ಎಸ್‌, ರತ್ನಾ ಎನ್‌. ಮಾರ್ಗದರ್ಶನದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT