ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ | ಈದ್‌ ಉಲ್‌ ಫಿತ್ರ್‌: ಮಳೆ, ಬೆಳೆ, ವಿಶ್ವ ಶಾಂತಿಗೆ ಸಾಮೂಹಿಕ ಪ್ರಾರ್ಥನೆ

ಸಂಭ್ರಮದಿಂದ ಈದ್‌ ಉಲ್‌ ಫಿತ್ರ್‌ ಆಚರಣೆ
Published 11 ಏಪ್ರಿಲ್ 2024, 14:32 IST
Last Updated 11 ಏಪ್ರಿಲ್ 2024, 14:32 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ಈದ್ ಉಲ್ ಫಿತ್ರ್ ಅನ್ನು ಗುರುವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

ಅಹ್ಲೆ ಸುನ್ನತ್ ಪಂಗಡದವರು ಅಂಜುಮನ್ ಶಾಲೆ ಸಮೀಪದ ಈದ್ಗಾ ಮೈದಾನದಲ್ಲಿ ಹಾಗೂ ಅಹ್ಲೆ ಹದೀಸ್ ಪಂಗಡದವರು ಜೈ ಭೀಮನಗರ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಜೈ ಭೀಮನಗರ ಸಮೀಪದ ಈದ್ಗಾ ಮೈದಾನದಲ್ಲಿ ಮಹಿಳೆಯರೂ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಪ್ರಾರ್ಥನೆ ನಂತರ ಪ್ರವಚನ ನೀಡಿದ ಧರ್ಮ ಗುರುಗಳು, ‘30 ದಿನಗಳ ಕಠಿಣ ಉಪವಾಸದ ನಂತರ ಈದ್ ಉಲ್ ಫಿತ್ರ್  ಬಂದಿದೆ. ಉಪವಾಸದ ಮೂಲಕ ಹಸಿದವರ ನೋವನ್ನು ಅರಿತು ದಾನ, ಧರ್ಮ ಮಾಡಬೇಕು’ ಎಂದರು.

ಮಳೆ, ಶಾಂತಿಗಾಗಿ ಕೋರಿಕೆ: ಮಳೆ ಕೊರತೆ, ಬಿರು ಬಿಸಲಿನಿಂದ ಜನಸಾಮಾನ್ಯರು, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳು ಸಂಕಷ್ಟ ಎದುರಿಸುವಂತಾಗಿದೆ. ಈ ಬಾರಿ ಉತ್ತಮ ಮಳೆ, ಬೆಳೆಯಾಗಿ, ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಪ್ರವಚನಕಾರರು ಕೋರಿದರು.

ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಮನೆಗಳಲ್ಲಿ ವಿಶೇಷ ಅಡುಗೆ ಮಾಡಿ ಸವಿಯಲಾಯಿತು. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಅಹ್ಲೆ ಸುನ್ನತ್ ಈದ್ಗಾ ಮೈದಾನದಲ್ಲಿ ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಸಾಬ್ ಬರ್ಕಾತಿ, ಅಹ್ಲೆ ಹದೀಸ್ ಈದ್ಗಾ ಮೈದಾನದಲ್ಲಿ ಮೌಲಾನಾ ಬರ್ಕತ್‌ವುಲ್ಲಾ ಜಾಮಯಿ ಪ್ರವಚನ ನೀಡಿದರು. ತಾಲ್ಲೂಕಿನ ಮಲೆಬೆನ್ನೂರು, ಭಾನುವಳ್ಳಿ, ಬೆಳ್ಳೂಡಿ, ರಾಜನಹಳ್ಳಿ, ಕರಲಹಳ್ಳಿ ಸೇರಿ ಹಲವು ಗ್ರಾಮಗಳ ಮಸೀದಿ, ಈದ್ಗಾ ಮೈದಾನಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯದ್ ಏಜಾಜ್, ಉಪಾಧ್ಯಕ್ಷ ಫಾರೂಖ್ ಎಂ. (ಎಂಎಂಡಿ), ಕಾರ್ಯದರ್ಶಿ ಸೈಯದ್ ಆಸಿಫ್ ಅಹಮ್ಮದ್ ಜುನೈದಿ, ಖಜಾಂಚಿ ಫಯಾಜ್ ಅಹಮ್ಮದ್, ನಿರ್ದೇಶಕರಾದ ಆರ್.ಸಿ. ಜಾವೀದ್, ಫಕ್ರುಲ್ಲಾ ಖಾನ್ ಎಚ್., ಸೈಯದ್ ಅಶ್ಫಾಖ್, ನಾಸಿರ್ ಸಾಬ್ ಪೈಲ್ವಾನ್, ಮೊಹಮ್ಮದ್ ಸಿಗ್ಬತ್‌ ಉಲ್ಲಾ ಬಿ., ಸೈಯದ್ ಸನಾವುಲ್ಲಾ ಎಂ.ಆರ್., ಮುಜಮ್ಮಿಲ್ ಎಂ.ಆರ್. (ಬಿಲ್ಲು), ರೋಷನ್ ಜಮೀರ್ ಟಿ., ನೂರ್ ಉಲ್ಲಾ ಎಚ್., ಸೈಯದ್ ರಹಮಾನ್, ಸೈಯದ್ ಬಷೀರ್ ಬಿ., ಸಾದಿಖ್ ಉಲ್ಲಾ ಎಸ್.ಎಂ., ಮೊಹಮ್ಮದ್ ಅಲಿ ಎನಪೋಯ, ಅಫ್ರೋಜ್ ಖಾನ್, ಹಾಜಿ ಅಲಿ ಖಾನ್, ಸರ್ಫರಾಜ್ ಅಹಮ್ಮದ್ ಕೆ., ಗೌಸ್ ಪೀರ್ ಹಾಗೂ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT