ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯದ ಜತೆಗೆ ಆರೋಗ್ಯಕ್ಕೆ ಒತ್ತು ನೀಡಿ: ನ್ಯಾಯಾಧೀಶರಾದ ಗೀತಾ ಕೆ.ಬಿ. ಸಲಹೆ

ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶರಾದ ಗೀತಾ ಕೆ.ಬಿ.
Last Updated 21 ಅಕ್ಟೋಬರ್ 2020, 7:44 IST
ಅಕ್ಷರ ಗಾತ್ರ

ದಾವಣಗೆರೆ: ಯಾವುದೇ ಕ್ಷಣದಲ್ಲಿ ಏನಾದರೂ ಆಗಬಹುದು ಎಂದು ಸದಾ ಸನ್ನದ್ದರಾಗಿರಬೇಕಾದ ಕೆಲಸ ಪೊಲೀಸರದ್ದು. ಹಾಗಾಗಿ ಅವರು ಆರೋಗ್ಯದ ಕಡೆಗೆ ಕಡಿಮೆ ಗಮನ ಹರಿಸುತ್ತಾರೆ. ಇದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಗೀತಾ ಕೆ.ಬಿ. ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪೊಲೀಸರು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಕೆಲಸ ಮಾಡುತ್ತಿರುತ್ತಿರುವುದರಿಂದ ಸಮಾಜದಲ್ಲಿ ನಾವು ನೆಮ್ಮದಿಯಾಗಿ ಜೀವಿಸಲು ಸಾಧ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪೂರ್ವ ವಲಯ ಐಜಿ‍ಪಿ ರವಿ ಎಸ್‌. ಮಾತನಾಡಿ, ‘ಸೈನಿಕರು ಗಡಿಗಳನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳನ್ನು ನಮಗೆ ನೀಡಿದ್ದಾರೆ. ಅದರ ಅರಿವಿಲ್ಲದೇ ನಾವು ಮೆರೆಯುತ್ತಿದ್ದೇವೆ. ಸ್ವಾತಂತ್ರ್ಯ ಮತ್ತು ಮುಕ್ತ ಸಮಾಜ ಅಂದರೆ ಏನು ಎಂಬುದು ಅರ್ಥವಾಗುತ್ತಿಲ್ಲ’ ಎಂದು ತಿಳಿಸಿದರು.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳನ್ನೊಳಗೊಂಡ ಪೂರ್ವ ವಲಯದಲ್ಲಿ ಈವರೆಗೆ 978 ಪೊಲೀಸರಿಗೆ ಕೊರೊನಾ ಸೋಂಕು ಬಂದಿದೆ. 9 ಮಂದಿ ಸತ್ತಿದ್ದಾರೆ. 99 ಮಂದಿ ಈಗಲೂ ಆಸ್ಪತ್ರೆಯಲ್ಲಿದ್ದಾರೆ. ನಾವು ಸಮಾಜಕ್ಕಾಗಿ ಹುತಾತ್ಮರಾಗಬೇಕು. ಕೊರೊನಾದಿಂದ ಅಲ್ಲ. ಹಾಗಾಗಿ ಕೊರೊನಾ ಬಗ್ಗೆ ಎಚ್ಚರಿಕೆ ಇರಬೇಕು. ನನಗೆ ಏನಾಗುವುದಿಲ್ಲ ಎಂಬ ಮನಃಸ್ಥಿತಿಯಿಂದ ಎಲ್ಲರೂ ಹೊರಬರಬೇಕು. ಶಿಸ್ತಿನ ಇಲಾಖೆ ಎಂಬುದು ಮಾತಿನಲ್ಲಿ ಹೇಳಿದರೆ ಸಾಲದು. ಅದನ್ನು ಅಳವಡಿಸಿಕೊಳ್ಳಬೇಕು. ಜವಾಬ್ದಾರಿಯನ್ನು ಕ್ಷಣಕ್ಷಣಕ್ಕೂ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.

ಮತ್ತೆ ಐದು ಸೋಂಕು: ಕೊರೊನಾ ಎಂಬ ಒಂದು ಸೋಂಕು ಬಂದು ಏನೆಲ್ಲ ಆಯಿತು ಎಂಬುದನ್ನು ನೋಡಿದ್ದೇವೆ. ಉಳಿದವರಿಗೆ ವರ್ಕ್‌ ಫ್ರಮ್‌ ಹೋಂ ಮಾಡುವ ಅವಕಾಶವಾದರೂ ಸಿಕ್ಕಿದೆ. ಪೊಲೀಸ್‌ ಇಲಾಖೆಗೆ ಅದಿಲ್ಲ. ಜನರ ಮಧ್ಯೆ ಹೋಗಿಯೇ ಕೆಲಸ ಮಾಡಬೇಕು. ವರ್ಷದಲ್ಲಿ ಇನ್ನೂ ಐದು ಇಂಥ ಮಾರಕ ಸೋಂಕುಗಳು ಬರಲಿವೆ ಎಂದು ವಿಜ್ಞಾನಿಗಳ ಸಂಶೋಧನೆ ಹೇಳುತ್ತಿದೆ. ಪರಿಸರ ಮತ್ತು ಮನುಷ್ಯನ ನಡುವೆ ತಪ್ಪಿದ ಸಮತೋಲನ, ಪ್ರಕೃತಿ ಮೇಲೆ ಮನುಷ್ಯ ಮಾಡಿದ ಅನ್ಯಾಯ ಇದಕ್ಕೆ ಕಾರಣ ಎಂದು ಅವರು ಕಾರಣ ಹುಡುಕಿದ್ದಾರೆ ಎಂದು ತಿಳಿಸಿದರು.

ಈ ವರ್ಷ ದೇಶದಲ್ಲಿ 264, ರಾಜ್ಯದಲ್ಲಿ 17, ಜಿಲ್ಲೆಯಲ್ಲಿ 4 ಹುತಾತ್ಮ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯ ಸ್ಮರಣೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾಡಿದರು.

ಪೊಲೀಸ್‌ ಕವಾಯತು, ಗೌರವವಂದನೆ ನಡೆಯಿತು. ಹುತಾತ್ಮ ಪೊಲೀಸರಿಗೆ ಹೂಗುಚ್ಛ ಅರ್ಪಿಸಲಾಯಿತು. ಬಳಿಕ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸೂಚಿಸಲಾಯಿತು. ಪೊಲೀಸ್‌ ಧ್ವಜ ಅರ್ಧಕ್ಕೆ ಇಳಿಸಿ ಮೌನ ಪ್ರಾರ್ಥನೆ ಮಾಡಲಾಯಿತು.

ಜಿಲ್ಲೆಯಲ್ಲಿ ಹುತಾತ್ಮರಾದ ಎಆರ್‌ಎಸ್‌ಐ ಪರಶುರಾಮ್‌, ಎಚ್‌ಸಿ ರವಿ, ಎಚ್‌ಸಿ ಗೋಣಿಬಸಪ್ಪ, ಎಎಚ್‌ಸಿ ಶಿವರಾಜ್‌ ಅವರ ಕುಟುಂಬದವರನ್ನು ಗೌರವಿಸಲಾಯಿತು.

ಆರ್‌ಪಿಐ ಎಸ್‌.ಎನ್‌. ಕಿರಣ್‌ಕುಮಾರ್‌ ನೇತೃತ್ವದಲ್ಲಿ ಕವಾಯತು, ಎಆರ್‌ಎಸ್‌ಐ ಹೊನ್ನೂರಪ್ಪ ನೇತೃತ್ವದಲ್ಲಿ ಪೊಲೀಸ್‌ ಬ್ಯಾಂಡ್‌ ವಾದನ ನಡೆಯಿತು.

ಗ್ರಾಮಾಂತರ ಪೊಲೀಸ್‌ ಠಾಣೆಯ ಶೈಲಜಾ ಕೆ.ಸಿ. ಮತ್ತು ಸಿಇಎನ್‌ ಪೊಲೀಸ್‌ ಠಾಣೆಯ ದೇವರಾಜ್‌ ಸಂಗೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT