ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂವಿಧಾನಿಕ ಹಕ್ಕು ನೀಡುವ ಕಾಯ್ದೆ ಜಾರಿಗೊಳಿಸಿ: ನಂದಿನಿ

Published 5 ಮಾರ್ಚ್ 2024, 5:22 IST
Last Updated 5 ಮಾರ್ಚ್ 2024, 5:22 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊಳೆಗೇರಿ ನಿವಾಸಿಗಳು ನಗರಗಳನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಅವರನ್ನು ಹುಣ್ಣಿನಂತೆ ಕಾಣುವ ಇಲ್ಲವೇ ಅವರ ಬಗ್ಗೆ ಕರುಣೆ ತೋರುವ ಧೋರಣೆ ಬೇಕಾಗಿಲ್ಲ. ಬದಲಾಗಿ ಸಾಂವಿಧಾನಿಕ ಹಕ್ಕುಗಳನ್ನು ನೀಡುವ ಕಾಯ್ದೆ ರೂಪಿಸಬೇಕಾಗಿದೆ’ ಎಂದು ಬೆಂಗಳೂರಿನ ಆಕ್ಷನ್ ಏಡ್ ಅಸೋಸಿಯೇಷನ್ ಇಂಡಿಯಾದ ಮುಖ್ಯಸ್ಥೆ ನಂದಿನಿ ಆಗ್ರಹಿಸಿದರು.

ಸ್ಲಂ ಜನರ ಸಂಘಟನೆ, ಆ್ಯಕ್ಷನ್ ಏಡ್ ಅಸೋಸಿಯೇಷನ್, ನೆರಳು ಬೀಡಿ ಕಾರ್ಮಿಕರ ಯೂನಿಯನ್, ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಸ್ಲಂ ಕಾಯ್ದೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂದಿನ 10–20 ವರ್ಷಗಳಲ್ಲಿ ಭಾರತ ಜಿಡಿಪಿಯಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ದೇಶವಾಗಲಿದೆ. ಪ್ರಗತಿಯಲ್ಲಿ ಕೊಳೆಗೇರಿ ನಿವಾಸಿಗಳು ಹಾಗೂ ಶ್ರಮಿಕರ ಕೊಡುಗೆ ಹೆಚ್ಚಾಗಿದೆ. ಆದರೆ ಸರ್ಕಾರಗಳು ಅವರನ್ನು ಪರಿಗಣಿಸುತ್ತಿಲ್ಲ. ಐ.ಟಿ. ಬಿ.ಟಿ. ಉದ್ಯಮದಲ್ಲಿರುವವರನ್ನೇ ತೆರಿಗೆದಾರರು ಎಂದು ಪರಿಗಣಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಲಂ ನಿವಾಸಿಗಳಿಗೆ ವಸತಿ ಹಕ್ಕು ನೀಡಲು ಹೊಸ ಕಾಯ್ದೆ ರೂಪಿಸಬೇಕಿದೆ. ಎಲ್ಲರ ರೀತಿಯಲ್ಲೇ ಸ್ಲಂ ನಿವಾಸಿಗಳು ನಿವಾಸದ ಹಕ್ಕುಗಳನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ಬಳಸಿಕೊಳ್ಳಲು ಹಾಗೂ ತಮಗೆ ಸೂಕ್ತವೆನಿಸಿದವರಿಗೆ ಹಸ್ತಾಂತರಿಸಲು ಅವಕಾಶ ಇರಬೇಕು’ ಎಂದು ಪ್ರತಿಪಾದಿಸಿದರು.

ಸ್ಲಂ ಜನರ ಸಂಘಟನೆಯ ಮುಖ್ಯಸ್ಥ ಐಸಾಕ್ ಅಮೃತ್‌ರಾಜ್ ಮಾತನಾಡಿ, ‘ಕೊಳಗೇರಿ ನಿವಾಸಿಗಳಿಗೆ ಭೂಮಿ ಹಕ್ಕು ನೀಡಬೇಕು ಎಂದು ಒತ್ತಾಯಿಸಿ 2009ರಲ್ಲಿ ಹೋರಾಟ ಪ್ರಾರಂಭಿಸಿದ್ದರಿಂದ ಅಲ್ಲಲ್ಲಿ ಭೂಮಿ ನೀಡಲಾಗುತ್ತಿದೆ. ಕಾನೂನಾತ್ಮಕವಾಗಿಯೇ ಕೊಳಗೇರಿ ನಿವಾಸಿಗಳಿಗೆ ಭೂಮಿ, ಮೂಲ ಸೌಲಭ್ಯಗಳು, ದಿಢೀರ್ ಒಕ್ಕಲೆಬ್ಬಿಸುವುದಕ್ಕೆ ತಡೆ, ಮರುಸ್ಥಾಪನೆ ಒಳಗೊಂಡಂತೆ 13 ಅಂಶಗಳ ಸ್ಲಂ ಕಾಯ್ದೆಯನ್ನು ಕೊಳಗೇರಿ ನಿವಾಸಿಗಳು, ಅವರ ಪರ ಹೋರಾಟಗಾರರು, ಪ್ರಗತಿಪರ ಚಿಂತಕರೇ ರೂಪಿಸಿದ್ದಾರೆ. ಕರಡು ಬಗ್ಗೆ ಎಲ್ಲೆಡೆ ಸಂವಾದ ನಡೆಸಲಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಸ್ಲಂ ಕಾಯ್ದೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕೊಳಗೇರಿ ನಿವಾಸಿಗಳಿಗೆ ದೊರೆಯಬೇಕಾದ ಕನಿಷ್ಠ ಮೂಲಸೌಲಭ್ಯಗಳು ದೊರಕದ ವ್ಯವಸ್ಥೆ ಇದೆ. ಕೊಳಗೇರಿ ನಿವಾಸಿಗಳು, ಆರ್ಥಿಕವಾಗಿ ಹಿಂದುಳಿದವರಿಗೆ ನಿವೇಶನ, ಮನೆಗೆ ಸರ್ಕಾರಕ್ಕೆ ಜಾಗ ದೊರಕುವುದೇ ಇಲ್ಲ. ಅದೇ ಖಾಸಗಿಯವರಿಗೆ ಸುಲಭವಾಗಿ ಭೂಮಿ ದೊರೆಯುತ್ತದೆ. ರಿಯಲ್ ಎಸ್ಟೇಟ್ ಮಾಫಿಯಾ ಸರ್ಕಾರವನ್ನೇ ನಿಯಂತ್ರಣ ಮಾಡುವಂತಿದೆ. ಸರ್ಕಾರ ಸ್ಲಂ ಕಾಯ್ದೆ ಜಾರಿಗೆ ತರುವ ಮೂಲಕ ಗೌರವಯುತ ಬದುಕನ್ನು ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ. ಕರಿಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಬೀನಾಖಾನಂ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ, ಎಲ್.ಆರ್. ಚಂದ್ರಪ್ಪ, ರೇಷ್ಮಾಬಾನು, ಫರೀದಾ ಬಾನು, ಸರೋಜಾ, ಶಿರೀನ್ ಬಾನು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT