ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯದ ವಿರುದ್ಧ ಸಿಡಿದೆದ್ದ ಸಮಾನ ಮನಸ್ಕರು

ನೋವು ನೀಡಿದವರಿಗೆ ಮತ್ತೆ ನೋವು ನೀಡುವ ಮೂಲಕ ಪಾಠ ಕಲಿಸಲು ನಿರ್ಧಾರ
Last Updated 30 ಏಪ್ರಿಲ್ 2019, 15:37 IST
ಅಕ್ಷರ ಗಾತ್ರ

ದಾವಣಗೆರೆ: ರಾಜಕೀಯ ಅನ್ಯಾಯದ ವಿರುದ್ಧ ಸಿಡಿದೇಳಲು ಸಮಾನ ಮನಸ್ಕರು ಮುಂದಾಗಿದ್ದಾರೆ. ಯಾರನ್ನು ಬೆಂಬಲಿಸಬೇಕು. ಯಾರನ್ನು ಸೋಲಿಸಬೇಕು ಎಂಬುದನ್ನು ಇನ್ನೆರಡು ದಿನಗಳಲ್ಲಿ ನಿರ್ಧರಿಸಲು ತೀರ್ಮಾನಿಸಿದ್ದಾರೆ.

ಇಲ್ಲಿನ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಗುರುವಾರ ಸುದೀರ್ಘವಾಗಿ ನಡೆದ ಪಂಚಮಸಾಲಿ ಸಮಾಜದ ಹಾಗೂ ಇತರ ಸಮಾಜದ ಸಮಾನ ಮನಸ್ಕರ ವೇದಿಕೆಯ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಬಳಸಿ ಬಿಸಾಕಿದ ಪಕ್ಷಗಳು:‘25 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂದೂ ಅಧಿಕಾರ ರಾಜಕಾರಣ ನಡೆಸದೇ ಸಂಬಂಧದ ರಾಜಕಾರಣ ಮಾಡಿಕೊಂಡು ಬಂದೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡೆ. ನನ್ನ ಈ ದೌರ್ಬಲ್ಯವನ್ನೇ ಬಳಸಿಕೊಂಡು 10 ವರ್ಷಗಳ ಹಿಂದೆ ಬಿಜೆಪಿ ನನ್ನ ಮನೆ ಬಾಗಿಲಿಗೆ ಬಂದಿತ್ತು. ನಾನು ಅವರ ಮನೆಗೆ ಹೋಗಿರಲಿಲ್ಲ. ಆಗ ಆಡಿದ ಮಾತುಗಳನ್ನೇ ಮರೆತು ಅವರ ಲಾಭಕ್ಕೆ, ಅನುಕೂಲಕ್ಕಷ್ಟೇ ಬಳಸಿಕೊಂಡರು. ಯಾವುದೇ ಗೌರವವನ್ನು ನೀಡಲಿಲ್ಲ’ ಎಂದು ಈ ಕಾರ್ಯಕ್ರಮದ ರೂವಾರಿಗಳಲ್ಲಿ ಒಬ್ಬರಾದ ಎಚ್‌.ಎಸ್‌. ನಾಗರಾಜ್‌ ಟೀಕಿಸಿದರು.

‘ರಾಜಕೀಯದಲ್ಲಿ ನಂಬಿಕೆ ಮುಖ್ಯ. ನಿನ್ನನ್ನೇ ನಂಬಿ ಬಂದವರನ್ನು ಕೈಬಿಡಬಾರದು ಎಂದು ಹಾಸಿಗೆ ಹಿಡಿದಿದ್ದ ತಂದೆ ಎಚ್‌. ಶಿವಪ್ಪ ಅವರು ನನಗೆ ಹೇಳಿದ್ದರು. ಮನೆ–ಮಠವನ್ನೆಲ್ಲ ಛಿದ್ರ ಮಾಡಿಕೊಂಡು ನಿಮ್ಮ ಜತೆ ಬರುತ್ತಿದ್ದಾನೆ ಎಂದು ಬಿಜೆಪಿಯವರಿಗೆ ಹೇಳಿದ್ದರು. ತಂದೆಯ ಮಾತಿಗೂ ಅವರು ಬೆಲೆ ಕೊಡಲಿಲ್ಲ’ ಎಂದು ಗದ್ಗದಿತರಾದರು.

ಈ ಕಾರ್ಯಕ್ರಮ ನಡೆಯದಂತೆ ಮಾಡಲು ಬಹಳ ಪ್ರಯತ್ನಪಟ್ಟರು. ಅಡ್ಡಗಾಲಿಟ್ಟರು. ನಾವು ಅಣ್ಣತಮ್ಮಂದಿರು ಸುಖ–ದುಃಖ ಹಂಚಿಕೊಳ್ಳಲು ಇವರ ಅಪ್ಪಣೆ ಪಡೆಯಬೇಕೇ? ನಾವೆಲ್ಲ ಜೆ.ಎಚ್‌. ಪಟೇಲ್‌– ಶಿವಪ್ಪ ಗರಡಿಯಲ್ಲಿ ಪಳಗಿದವರು. ಪಟೇಲ್‌– ಶಿವಪ್ಪ ಪ್ರವಾಹವನ್ನು ತಡೆಯಲು ಇವರಿಂದ ಸಾಧ್ಯವೇ ಎಂದು ಪ್ರಶ್ನಿಸಿದರು.

‘ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಲು ಶಿವಶಂಕರಪ್ಪ ನಿರ್ಧರಿಸಿದ ಮೇಲೆ ಕೆಪಿಸಿಸಿ ನನ್ನನ್ನು, ತೇಜಸ್ವಿ ಪಟೇಲರನ್ನು ಕರೆಸಿ ಮಾತನಾಡಿತ್ತು. ಹೇಗೆ ಗೆಲ್ಲಬಹುದು ಎಂಬುದನ್ನು ನಾವು ಕೆಪಿಸಿಸಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಆದರೆ ಯಾರು ಟಿಕೆಟ್‌ ತಪ್ಪಿಸಿದರು ಎಂಬುದು ಎಲ್ಲರಿಗೂ ಗೊತ್ತು. ಇವತ್ತು ನಡೆಯುತ್ತಿರುವ ಸಮಾನ ಮನಸ್ಕರ ಸಭೆ ಏನಾದರೂ ಒಂದು ತಿಂಗಳ ಹಿಂದೆ ನಡೆಯುತ್ತಿದ್ದರೆ ನಮ್ಮಿಬ್ಬರಲ್ಲಿ ಒಬ್ಬರು ಅಭ್ಯರ್ಥಿ ಆಗಿರುತ್ತಿದ್ದೆವು’ ಎಂದು ಇನ್ನೊಬ್ಬ ರೂವಾರಿ ಎಂ.ಪಿ. ಸುಭಾಸ್‌ಚಂದ್ರ ಹೇಳಿದರು.

ದಾವಣಗೆರೆಯಲ್ಲಿ ಎ ಮತ್ತು ಬಿ ಎಂಬ ಎರಡು ಪಕ್ಷಗಳಿವೆ. ಈ ಎರಡು ತಂಡಗಳಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಗಾದವರಲ್ಲಿ ಮೊದಲ ಸ್ಥಾನದಲ್ಲಿ ಪಂಚಮಸಾಲಿಗಳಿದ್ದರೆ, ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದಾರೆ. ಈ ಎರಡು ತಂಡಗಳಿಗೆ ನಮ್ಮ ಶಕ್ತಿಯನ್ನು ತೋರಿಸಬೇಕು. ಜಿಲ್ಲೆಯಲ್ಲಿ 2.5 ಲಕ್ಷ ಪಂಚಮಸಾಲಿಗಳಿದ್ದಾರೆ. ಜತೆಗೆ ಇಷ್ಟೇ ಸಂಖ್ಯೆಯಲ್ಲಿ ಬೇರೆಯವರನ್ನು ಒಟ್ಟಿಗೆ ಒಯ್ಯುವ ಶಕ್ತಿ ಈ ಸಮುದಾಯಕ್ಕಿದೆ. ಈ ಶಕ್ತಿಯನ್ನು ತೋರಿಸಬೇಕು ಎಂದು ತಿಳಿಸಿದರು.

ನಿರ್ಧಾರಕ್ಕೆ ಬದ್ಧರಾಗಿ

‘ಸಮಾನ ಮನಸ್ಕರ ಸಭೆಯು ಮುಂದಿನ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತುಗಳು ಈಗಾಗಲೇ ಹೊರಗಡೆ ಚರ್ಚೆಯಾಗುತ್ತಿದೆ. ಈ ಸಭೆಯ ಪರಿಣಾಮವನ್ನು ನೋಡಲು ಇನ್ನೆರಡು ದಿನ ಕಾದು ನೋಡೋಣ. ಯಾರಿಗೆ ಓಟು ಹಾಕಬೇಕು ಎಂದು ನಿರ್ಧಾರ ಮಾಡಲಾಗುತ್ತದೋ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಅದು ನೋಟಾ ಎಂದು ತೀರ್ಮಾನವಾದರೂ ಬದ್ಧತೆ ಬದಲಾಗಬಾರದು’ ಎಂದು ಮತ್ತೊಬ್ಬ ರೂವಾರಿ ತೇಜಸ್ವಿ ಪಟೇಲ್‌ ತಿಳಿಸಿದರು.

‘ಜೆ.ಎಚ್‌. ಪಟೇಲರು, ಎಚ್‌. ಶಿವಪ್ಪ ಅವರ ಹಿಂದೆ ಎಲ್ಲ ಸಮುದಾಯಗಳು ಗಟ್ಟಿಯಾಗಿ ನಿಂತಿದ್ದರಿಂದ ಅವರಿಗೆ ಸಾಧನೆ ಮಾಡಲು ಸಾಧ್ಯವಾಯಿತು. ಅಂಥ ಬೆಂಬಲ ನಮಗೆ ಸಿಕ್ಕಿದರೆ ನಾವೂ ಅದೇ ಸಾಧನೆ ಮಾಡಲು ಮುಂದಾಗುತ್ತೇವೆ. ನಾವು ಕೈಗೊಳ್ಳುವ ನಿರ್ಧಾರಗಳು ಒಂದು ಜಾತಿಗೆ ಸೀಮಿತವಾಗಿರುವುದಿಲ್ಲ. ಅದು ಸಮಾಜವಾದಿ ಹಿನ್ನೆಲೆಯಲ್ಲಿಯೇ ಇರುತ್ತದೆ’ ಎಂದರು.

ದಾವಣಗೆರೆಯಲ್ಲಿ ರಾಜಕೀಯ ಕೆಟ್ಟು ಹೋಗಿರುವುದರಿಂದಲೇ ನಾನು ಈ ಸಭೆಗೆ ಬರಬೇಕಾಯಿತು. ಹೆಚ್ಚು ಹಣ ಹಂಚುವವರನ್ನು ಸೋಲಿಸಬೇಕು. ಆಗ ಚುನಾವಣೆಯ ದರ ಕಡಿಮೆಯಾಗುತ್ತದೆ. ಇದರಿಂದ ತಹಶೀಲ್ದಾರ್‌ ಕಚೇರಿಯ ದರವೂ ಇಳಿಯುತ್ತದೆ. ಸೂಚಿತ ವೆಚ್ಚದಲ್ಲೇ ಚುನಾವಣೆ ಮುಗಿಸುವವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಇಲ್ಲದೇ ಇದ್ದರೂ, ಟಿಕೆಟ್‌ ಕೇಳದೇ ಇದ್ದರೂ, ಬ್ಯಾಂಕ್‌ ಬ್ಯಾಲೆನ್ಸ್‌ ಇಲ್ಲದೇ ಇದ್ದರೂ ಈ ಚುನಾವಣೆಯಲ್ಲಿ ಬಿ.ಫಾರ್ಮ್‌ ನೀಡಲು ನನ್ನನ್ನು ಕರೆಸಿದ್ದರು ಎಂದರೆ ಅದುವೇ ನಮ್ಮ ಶಕ್ತಿ ಎಂದರು.

ಟಿ.ಬಿ. ಗಂಗಾಧರ, ಆಂಜನೇಯ, ಆರ್‌. ಪ್ರತಾಪ್‌, ತ್ಯಾವಣಿಗೆ ಕುಬೇರಪ್ಪ, ಬಸವರಾಜಪ್ಪ, ಬಿ. ವೀರಣ್ಣ, ಎಚ್‌. ವಿಶ್ವನಾಥ್‌, ಹಾಲಾಸಿದ್ದಪ್ಪ, ಪಿ. ರಾಜ್‌ಕುಮಾರ್‌, ಹೇಮಣ್ಣ, ಮೋತಿ ರಾಮಚಂದ್ರ, ಶಂಕರಪ್ಪ, ಕಾಳಪ್ಪ, ಮಿಟ್ಲಕಟ್ಟೆ ಚಂದ್ರಪ್ಪ ಮಾತನಾಡಿದರು.

ಎಸ್‌.ಪಿ. ಚಂದ್ರಶೇಖರ ಗೌಡ್ರು, ಲತಾ ಕೊಟ್ರೇಶ್‌, ಗುಂಡಪ್ಪ, ಕಿತ್ತೂರು ವೀರಣ್ಣ, ತೆಲಗಿ ಈಶಣ್ಣ, ಮಾಯಕೊಂಡ ರುದ್ರೇಶ, ಶೇಖರಪ್ಪ, ಇಬ್ರಾಹಿಂ ಅವರೂ ಇದ್ದರು. ಕೆ.ಎಸ್‌. ಗಂಗಾಧರ ಕಾರ್ಯಕ್ರಮ ನಿರೂಪಿಸಿದರು.

ಗ್ಲಾಸ್‌ಹೌಸ್‌ ಹೆಸರು:ಗ್ಲಾಸ್‌ಹೌಸ್‌ಗೆ ಹೆಸರು ಇಡುವುದರ ಬಗ್ಗೆ ಇತ್ತೀಚೆಗೆ ವಿವಾದ ಉಂಟಾಗಿತ್ತು. ಜೆ.ಎಚ್‌.ಪಟೇಲರು ಲಿಂಗಾಯತರಲ್ಲೇ ಇನ್ನೊಂದು ಸಮುದಾಯವಾಗಿದ್ದರೆ ಅವರ ಹೆಸರನ್ನು ಇಡುವ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ ಆ ಸಮುದಾಯವಲ್ಲದ ಕಾರಣ ಚರ್ಚೆಗೆ ಬರಲಿಲ್ಲ. ಜಾತಿ ರಾಜಕಾರಣ ಮಾಡಬಾರದು. ಅಷ್ಟೇ ಅಲ್ಲ ಜಾತಿಯೆ ಹೆಸರಲ್ಲಿ ಯಾರಿಗೂ ಅನ್ಯಾಯ ಮಾಡಬಾರದು ಎಂದು ತೇಜಸ್ವಿ ಪಟೇಲ್‌ ಹೇಳಿದರು.

ಕೇಳಿ ಬಂದ ಅಭಿಪ್ರಾಯಗಳು

* ಪಾರ್ಟಿ ವಿತ್‌ ಡಿಫೆರೆಂಟ್ ಎಂದು ಹೇಳಿಕೊಂಡು ಬಂದು ಯುವಸಮುದಾಯವನ್ನು ನಿಕೃಷ್ಟರನ್ನಾಗಿ ಮಾಡಿದವರಿಗೆ ಪಾಠ ಕಲಿಸಿ– ಡಾ. ರಾಜಕುಮಾರ್‌

* ತೇಜಸ್ವಿ ಪಟೇಲ್‌– ನಾಗರಾಜ್‌ ಜೋಡೆತ್ತುಗಳು ಇದ್ದಂತೆ. ಈ ಬಾರಿ ಚುನಾವಣೆಯಲ್ಲಿ ಯಾರು ಬೇಕಾದರೂ ಗೆಲ್ಲಲಿ. ಆದರೆ ಯಾರು ಸೋಲಬೇಕು ಎಂಬುದು ಸ್ಪಷ್ಟ ಇರಬೇಕು– ರವಿ ಬಳ್ಳೂರು

* ಕಾಲಕಾಲಕ್ಕೆ ನಿರ್ಧಾರಗಳು ಬದಲಾಗಬಾರದು. ಅಚಲವಾದ, ಸ್ಪಷ್ಟವಾದ, ಸರಿಯಾದ ನಿರ್ಧಾರ ಕೈಗೊಂಡರೆ ನಾವು ಎಂದೆಂದಿಗೂ ನಿಮ್ಮ ಜತೆ ಇರುತ್ತೇವೆ– ಜಯಕುಮಾರ್‌

* ತತ್ವ– ಸಿದ್ಧಾಂತಗಳನ್ನು ಒಪ್ಪಿ ಜನ ಗೆಲ್ಲಿಸುತ್ತಾರೆ ಎಂದು ಗುಡ್ಡದಲ್ಲಿ ಕೂತಿದ್ದರಿಂದಲೇ ಮಹಿಮಾಪಟೇಲ್‌ ಸೋಲುವಂತಾಯಿತು– ಸಿರಿಗೆರೆ ಪರಮೇಶ್ವರ ಗೌಡ

* ಈ ಸಭೆ ಮುಂದಿನ ಎಲ್ಲ ಚುನಾವಣೆಗಳಿಗೆ ದಿಕ್ಸೂಚಿಯಾಗಲಿ– ಶಂಕ್ರಳ್ಳಿ ಪ್ರಭು

* ಯಾರನ್ನು ಗೆಲ್ಲಿಸಬೇಕು ಎಂದು ಕರೆ ಕೊಡಿ. ಅವರನ್ನು ಗೆಲ್ಲಿಸುತ್ತೇವೆ– ಅಣ್ಣೋಜಿ ರಾವ್‌

* ಯಡಿಯೂರಪ್ಪರ ಕಷ್ಟದ ಕಾಲದಲ್ಲಿ ನೆರವಾಗಿ, ಕೆಜೆಪಿಗೂ ಹೋಗಿದ್ದ ಹರಪನಹಳ್ಳಿಯ ಕೊಟ್ರೇಶ್‌ರನ್ನು ಗೆಲ್ಲಿಸಲಿಲ್ಲ. ಕಳೆದ ಚುನಾವಣೆಯಲ್ಲಿ ಬೇರೆ ಸಮುದಾಯದವರು ಬೆಂಬಲಿಸಿದರೂ ಪಂಚಮಸಾಲಿಗಳ ಬೆಂಬಲ ಅವರಿಗೆ ಸಿಗಲಿಲ್ಲ– ಹರಪನಹಳ್ಳೀ ಗಣೇಶ್‌

* ಸುಭಾಸ್‌ಚಂದ್ರ ಅವರಿಗೆ ಬರ್ರಿ ಕಾಂಗ್ರೆಸ್‌ಗೆ ಚುನಾವಣೆಗೆ ನಿಂತುಕೊಳ್ಳಿ. ಮುಸ್ಲಿಮ್‌ ಸಮುದಾಯದ 1.23 ಲಕ್ಷ ಮತ ನಿಮಗೆ ಎಂದು ಹಿಂದೆಯೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ– ಸಾದಿಕ್‌ ಪೈಲ್ವಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT