ಮಂಗಳವಾರ, ಸೆಪ್ಟೆಂಬರ್ 21, 2021
28 °C
ರಸ್ತೆ ಸುರಕ್ಷತಾ ವಲಯ ಯೋಜನೆ ಅಡಿ ರಸ್ತೆ ವಿಸ್ತರಣೆ ಕಾರ್ಯ

ಚನ್ನಗಿರಿ: ಸೂಳೆಕೆರೆ ರಸ್ತೆಗೆ ವಿಸ್ತರಣೆ ಭಾಗ್ಯ

ಎಚ್.ವಿ. ನಟರಾಜ್ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಸೂಳೆಕೆರೆ ಮಾರ್ಗದಿಂದ ಚನ್ನಗಿರಿಗೆ ಹೋಗುವ ರಸ್ತೆ ಕಿರಿದಾದ ಕಾರಣ ಅಪಘಾತ ಸಂಭವಿಸುತ್ತಿತ್ತು. ಸದ್ಯ ರಸ್ತೆಗೆ ಸಿಕ್ಕಿದೆ ವಿಸ್ತರಣೆ ಭಾಗ್ಯ.

ಸೂಳೆಕೆರೆ ಏರಿಯ ಮೇಲೆ ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಪ್ರತಿ ದಿನ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ತಡೆಗೋಡೆ ಇಲ್ಲದೇ ಇರುವುದು ಹಾಗೂ ಕಿರಿದಾದ ರಸ್ತೆಯಿಂದಾಗಿ ಹಲವು ವಾಹನಗಳು ಅಪಘಾತಕ್ಕೆ ಈಡಾಗಿ ಕೆರೆಯಲ್ಲಿ ಬಿದ್ದಿ‌ದ್ದವು.

2010ರಿಂದ 2021ವರೆಗೆ ಮಾರ್ಗದಲ್ಲಿ ರಸ್ತೆ ಅಪಘಾತದ 68 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಮೂರು ಖಾಸಗಿ ಬಸ್‌ಗಳು ಕೆರೆಗೆ ಬಿದ್ದು, 10ಕ್ಕಿಂತ ಹೆಚ್ಚು ಪ್ರಯಾಣಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ನೂರಾರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದರು. ಈ ರಸ್ತೆ ವಿಸ್ತರಣೆ ಮಾಡುವಂತೆ ಹಲವರಿಂದ ಒತ್ತಾಯ ಕೇಳಿಬಂದಿತ್ತು. ಆದರೂ ಲೋಕೋಪಯೋಗಿ ರಸ್ತೆ ವಿಸ್ತರಣೆಗೆ ಮುಂದಾಗಿರಲಿಲ್ಲ.

ಸೂಳೆಕೆರೆಯಲ್ಲಿ ಆಗುತ್ತಿರುವ ಅಪಘಾತಗಳನ್ನು ತೀವ್ರತೆ ಮನಗಂಡು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ರಸ್ತೆ ವಿಸ್ತರಣೆಗೆ ಮುಂದಾದರು. ಈ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಗೆ ಅವರು ಒಟ್ಟು ₹ 4.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರ ಫಲವಾಗಿ ಸೂಳಕೆರೆಯ ಕಿರಿದಾದ ರಸ್ತೆಗಳು ವಿಸ್ತರಣೆಯಾಗುತ್ತಿವೆ.

ಕೆರೆಯ ಒಂದು ಬದಿಯಲ್ಲಿ ಕಬ್ಬಿಣದ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಇನ್ನು ಎರಡು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಲೋಕಾರ್ಪಣೆಯಾಗಲಿದೆ.

ಈ ಹಿಂದೆ 7 ಮೀಟರ್ ಅಗಲವಾದ ರಸ್ತೆಯಿತ್ತು. ರಸ್ತೆಯ ಒಂದು ಬದಿಗೆ ಬಂಡೆಗಳು ತುಂಬಿರುವ ಗುಡ್ಡ ಇತ್ತು. ಸದ್ಯ ಈ ರಸ್ತೆಯನ್ನು 700 ಮೀಟರ್ ದೂರದವರೆಗೆ ನಿರ್ಮಿಸಿದ್ದು, 15 ಮೀಟರ್‌ವರೆಗೆ ವಿಸ್ತರಿಸಲಾಗಿದೆ. ರಸ್ತೆ ಮಾಡಲು ಅಡ್ಡಿಯಾಗಿದ್ದ ಬಂಡೆಗಳನ್ನು ಲಘು ಸ್ಫೋಟಕಗಳನ್ನು ಬಳಸಿ ಒಡೆದು, ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ.

ಏಕಕಾಲದಲ್ಲಿ ಎರಡು ಬಸ್ ಅಥವಾ ವಾಹನಗಳು ಸುಗಮವಾಗಿ ಸಂಚರಿಸುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಸ್ತೆ ಬದಿಯಲ್ಲಿ ಬಣ್ಣದ ಸಿಮೆಂಟ್ ಹಾಸುಗಳನ್ನೂ ಹಾಕಲಾಗಿದೆ. ಈಗಾಗಲೇ ಬಸವರಾಜಪುರ ಗ್ರಾಮದಿಂದ ಸೇವಾನಗರ ಗ್ರಾಮದವರೆಗೆ ₹ 1.5 ಕೋಟಿ ವೆಚ್ಚದಲ್ಲಿ ಮೊದಲನೇ ಹಂತದ ರಸ್ತೆಯನ್ನು ಪೂರ್ಣಗೊಳಿಸಲಾಗಿದೆ. ಈಗ ಎರಡನೇ ಹಂತದ 700 ಮೀಟರ್ ರಸ್ತೆ ಕಾಮಗಾರಿಯನ್ನು ₹ 3 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಎರಡು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಶಿವಕುಮಾರ್ ಮಾಹಿತಿ ನೀಡಿದರು.

‘ಹಿಂದೆಂದೂ ಕಾಣದಂತಹ ಹೊಸ ರಸ್ತೆ ಸೂಳೆಕೆರೆಯಲ್ಲಿ ನಿರ್ಮಾಣವಾಗುತ್ತಿದೆ. ಈ ಕೆರೆಯ ಏರಿಯ ಮೇಲೆ ಪ್ರತಿದಿನ ವಾಹನಗಳು ಅಪಘಾತಕ್ಕೆ ಈಡಾಗುವುದನ್ನು ಕಂಡಿದ್ದೆವು. ಈಗ ರಸ್ತೆ ವಿಸ್ತರಣೆ ಮಾಡಲು ಮುಂದಾಗಿರುವುದು ಖುಷಿಯ ಸಂಗತಿ’ ಎಂದು ಕೆರೆಬಿಳಚಿ ಗ್ರಾಮದ ಅಲ್ಪಾಫ್ ಸಂತಸ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.