ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನಹೊಳೆಯಲ್ಲಿ ಜಾತ್ರೆ ಸಂಭ್ರಮ

Last Updated 3 ಮಾರ್ಚ್ 2022, 4:42 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನ ಮಾವಿನಹೊಳೆ ಗ್ರಾಮದ ಐತಿಹಾಸಿಕ ಪ್ರಸಿದ್ಧ ಮಹಾರುದ್ರ ಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು.

ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಬಂದು ದೇವರ ದರ್ಶನ ಪಡೆದು ಪುನೀತರಾದರು.

ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನದಿಂದ ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಶಿವರಾತ್ರಿ ಜಾಗರಣೆ ದಿನ ಮಹಾರುದ್ರಸ್ವಾಮಿಯ ಸನ್ನಿದಾನದಲ್ಲಿ ಅಹೋರಾತ್ರಿ ಧ್ಯಾನ ಹಾಗೂ ಮಹಾರುದ್ರಾಭಿಷೇಕ, ಅಷ್ಟೋತ್ತರ, ದೀಪೋತ್ಸವ, ಸಹಸ್ರ ಬಿಲ್ವಾರ್ಚನೆ, ಶತನಾಮಾವಳಿ ಸ್ತೋತ್ರ, ಪಾದಾಪೂಜಾ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಿತು.

ಬೆಳಿಗ್ಗೆ 4.30ರ ಸಮಯಕ್ಕೆ ಸರಿಯಾಗಿ ಮಹಾರುದ್ರಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ವೀರಗಾಸೆ, ಜುಂಜುಂ ಮೇಳ, ಡೊಳ್ಳು, ಕೋಲಾಟ ಮುಂತಾದ ಕಲಾ ತಂಡಗಳ ಮೇಳದೊಂದಿಗೆ ಸಂಭ್ರಮ, ಸಡಗರದಿಂದ ನಡೆಯಿತು.

ಬುಧವಾರ ಬೆಳಿಗ್ಗೆ 8ಕ್ಕೆ ಸ್ವಾಮಿಯ ಮಹಾಪೂಜೆಯೊಂದಿಗೆ, ಮಹಾರುದ್ರಸ್ವಾಮಿ ಜಾತ್ರೆ ಆರಂಭ ಗೊಂಡಿತು. ಮಾ.3ರಂದು ಭದ್ರಕಾಳಿ ಅಮ್ಮನವರ ಜಾತ್ರೆಯೊಂದಿಗೆ ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಹೊನ್ನಾಳಿ ಹಿರೇಕಲ್ಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಎಡೆಯೂರು ಮಠದ ಡಾ. ರೇಣುಕ ಶಿವಾಚಾರ್ಯ ಸ್ವಾಮೀಜಿ ಹಾಗೂ ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಿತು.

ಜಾತ್ರೆಯ ಅಂಗವಾಗಿ ಬಳೆಗಳು, ಮಂಡಕ್ಕಿ ಕಾರ, ಬೆಂಡು ಬತ್ತಾಸು, ಮೈಸೂರು ಪಾಕ್, ಬೊಂಬೆಗಳ ಅಂಗಡಿಗಳ ಮುಂದೆ ದೇವರ ದರ್ಶನ ಪಡೆಯಲು ಬಂದಿದ್ದ ಭಕ್ತರು ತಮಗೆ ಬೇಕಾದ ತಿಂಡಿ ತಿನಿಸು ಹಾಗೂ ಇತರೆ ಆಟದ ಸಾಮಗ್ರಿಗಳನ್ನು ಖರೀದಿಸಿದರು. ಮಠದ ಟ್ರಸ್ಟ್‌ನಿಂದ ಉಚಿತ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಂಗಳವಾರ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಪ್ರತಿ ವರ್ಷ ಶಿವರಾತ್ರಿ ಜಾಗರಣೆ ದಿನ ಈ ದೇವಸ್ಥಾನಕ್ಕೆ ತಪ್ಪದೇ ಭೇಟಿ ಕೊಡುವುದು ವಾಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT