ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ರೈತ ಸಂಘಟನೆ ಪ್ರಬಲ: ಎಚ್.ಆರ್. ಬಸವರಾಜಪ್ಪ

ನೀತಿಗೆರೆ ಗ್ರಾಮದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮ
Published 18 ಜೂನ್ 2024, 14:22 IST
Last Updated 18 ಜೂನ್ 2024, 14:22 IST
ಅಕ್ಷರ ಗಾತ್ರ

ನೀತಿಗೆರೆ (ಚನ್ನಗಿರಿ): ‘ತಾಲ್ಲೂಕಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಉತ್ತಮ ಸಂಘಟನೆಯಾಗಿ ಬೆಳೆಯುತ್ತಿರುವುದು ಅದ್ಭುತ ಬೆಳವಣಿಗೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ತಾಲ್ಲೂಕಿನ ನೀತಿಗೆರೆ ಗ್ರಾಮದಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗ್ರಾಮ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಗರ್‌ಹುಕುಂ ಜಮೀನುಗಳು ಉಳಿದಿವೆ ಎಂದರೆ ಅದಕ್ಕೆ ರೈತ ಸಂಘ ಕಾರಣ. ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣರು ಹಾಗೂ ರೈತಾಪಿ ವರ್ಗದ ಜನರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸುತ್ತಾರೆ. ಆದರೆ, ಯೋಜನೆಗಳ ಪ್ರಯೋಜನವನ್ನು ಅರ್ಹರಿಗೆ ತಲುಪಿಸುವಲ್ಲಿ ಮತ್ತು ರೈತರ ಸಮಸ್ಯೆ ಆಲಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ರಾಜ್ಯ ರೈತ ಸಂಘ 44 ವರ್ಷಗಳಿಂದ ರಾಜ್ಯ ನೊಂದ ರೈತರಿಗೆ ನೆರವು ನೀಡುತ್ತ ಬಂದಿದೆ’ ಎಂದರು.

‘ರೈತರ ಬಗ್ಗೆ ಯಾರಿಗೂ, ಯಾವ ಪಕ್ಷಗಳಿಗೂ ಕಾಳಜಿ ಇರುವುದಿಲ್ಲ. ರೈತರನ್ನು ಯಾವ ಸರ್ಕಾರವೂ ಉದ್ಧಾರ ಮಾಡುವುದಿಲ್ಲ. ಸರ್ಕಾರ ಬಿತ್ತನೆ ಬೀಜ, ಗೊಬ್ಬರ, ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ. ವಿದ್ಯುತ್ ಶಕ್ತಿ ಖಾಸಗೀಕರಣ ಆಗುತ್ತಿರುವುದನ್ನು ತಪ್ಪಿಸಲು ರೈತ ಸಂಘ ಸಾಕಷ್ಟು ರೂಪುರೇಷೆಗಳನ್ನು ತಯಾರಿಸಿದೆ. ಬ್ಯಾಂಕ್‌ನವರು ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದರೆ, ಅದರ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ಹೇಳಿದರು.

‘ಬರಗಾಲ ಇರುವುದರಿಂದ ಬ್ಯಾಂಕ್‌ನವರು ರೈತರ ಸಾಲ ವಸೂಲಿ ಬಗ್ಗೆ ಬಲವಂತ ಮಾಡಬಾರದು. ರೈತರ ಖಾತೆಗೆ ಬರುವ ಪರಿಹಾರ ಹಣ, ವೃದ್ಧಾಪ್ಯ ವೇತನ, ಹಾಲಿನ ಹಣವನ್ನು ಸಾಲಕ್ಕೆ ಜಮೆ ಮಾಡಬಾರದು ಎಂದು ಸರ್ಕಾರ ಆದೇಶಿಸಬೇಕು. ರೈತರೇ ಸ್ವಯಂ ವೆಚ್ಚ ಯೋಜನೆ ಅಡಿ ಐಪಿ ಸೆಟ್‌ಗಳನ್ನು ಹಾಕಿಸಿಕೊಳ್ಳುವ ಆದೇಶವನ್ನು ಹಿಂಪಡೆಯಬೇಕು. ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು. ಬಿತ್ತನೆ ಬೀಜ, ರಸಗೊಬ್ಬರಗಳ ದರ ಏರಿಕೆಯಾಗಿದ್ದು, ದರ ಏರಿಕೆಯನ್ನು ಸರ್ಕಾರ ಕೂಡಲೇ ಕಡಿಮೆ ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಹೊನ್ನೂರು ಮುನಿಯಪ್ಪ, ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಅಭಿಲಾಷ್, ಕಾರ್ಯದರ್ಶಿ ಅಣ್ಣಪ್ಪ, ಸಂತೋಷ್ ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್.ತಿಪ್ಪೇಶಪ್ಪ, ಗ್ರಾಮ ಘಟಕದ ಅಧ್ಯಕ್ಷ ಎಂ.ವಿ.ಮಂಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ಸಿದ್ಧರಾಮಪ್ಪ, ಪ್ರಕಾಶ್, ಪರಮೇಶ್ವರಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT