ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಅಡಿಕೆಯೊಂದಿಗೆ ಸಮೃದ್ಧಿ ನೀಡಿದ ಬಹುಬೆಳೆ ಕೃಷಿ

ಪಶುಪಾಲನೆ, ಹೈನುಗಾರಿಕೆಗೂ ಮಹತ್ವ ನೀಡಿದ ಬಸವರಾಜಪ್ಪ
Last Updated 23 ಫೆಬ್ರುವರಿ 2022, 2:19 IST
ಅಕ್ಷರ ಗಾತ್ರ

ಮೇದುಗೊಂಡನಹಳ್ಳಿ (ಚನ್ನಗಿರಿ): ಕೃಷಿಯಲ್ಲಿ ಹೆಚ್ಚಿನ ಆದಾಯ ಬರುವುದಿಲ್ಲ ಎಂದುಕೊಂಡು ಕೆಲವು ರೈತರು ಕೃಷಿಯನ್ನು ಬಿಟ್ಟು ಹೆಚ್ಚು ಆದಾಯ ತರುವ ಉದ್ಯೋಗಗಳತ್ತ ಆಸಕ್ತಿ ತೋರುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಇಲ್ಲೊಬ್ಬ ರೈತರು ಇರುವ ಅಲ್ಪಭೂಮಿಯಲ್ಲಿಯೇ ಸಾವಯವ ಕೃಷಿ ಪದ್ಧತಿ ಅನುಸರಿಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ತಾಲ್ಲೂಕಿನ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ 15 ಕಿ.ಮೀ. ದೂರ ಸಾಗಿದರೆ ಮೇದುಗೊಂಡನಹಳ್ಳಿ ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮದಲ್ಲಿ ಎಂ.ಡಿ. ಬಸವರಾಜಪ್ಪ ಅವರ ನಾಲ್ಕು ಎಕರೆ ಎಂಟು ಗುಂಟೆ ಅಡಿಕೆ ತೋಟವಿದೆ. ಸಾವಯವ ಕೃಷಿ ಪದ್ಧತಿ ಅನುಸರಿಸಿ 2020-21ನೇ ಸಾಲಿನಲ್ಲಿ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

10ನೇ ತರಗತಿ ಓದುತ್ತಿರುವಾಗ ತಂದೆಯನ್ನು ಕಳೆದುಕೊಂಡ ಬಸವರಾಜಪ್ಪ ಅವರು ಸಂಸಾರದ ಹೊರೆ ಹೊರಬೇಕಾದ ಕಾರಣ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡಬೇಕಾಯಿತು. ಒಬ್ಬ ತಮ್ಮ ಹಾಗೂ ಇಬ್ಬರು ಸಹೋದರಿಯರನ್ನು ಸಾಕುವ ಹೊಣೆಯೂ ಹೆಗಲೇರಿತು. ಆಗ ಇದ್ದದ್ದು 8 ಎಕರೆ ಮಳೆಯಾಶ್ರಿತ ಭೂಮಿ. 1981ನೇ ಸಾಲಿನಲ್ಲಿ ಈ ಭಾಗದಲ್ಲಿ ನೀರಾವರಿ ಸೌಲಭ್ಯ ಇಲ್ಲದೇ ಹನಿ ನೀರಿಗೂ ಪರದಾಡಬೇಕಾಗಿತ್ತು. ಅಂತಹ ಸಮಯದಲ್ಲಿ 8 ಎಕರೆ ಪ್ರದೇಶದಲ್ಲಿ ಅಡಿಕೆ ತೋಟ ಮಾಡಿದರು. ಆಸ್ತಿ ವಿಭಜನೆಯ ನಂತರ 4 ಎಕರೆ 8 ಗುಂಟೆ ಜಮೀನು ಇವರ ಪಾಲಿಗೆ ಬಂದಿತು. ಕೇವಲ ಅಡಿಕೆಯೊಂದನ್ನೇ ಬೆಳೆದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಬಸವರಾಜಪ್ಪ ಅವರು ಅಡಿಕೆ ತೋಟದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾದರು.

ಈಗ 4 ಎಕರೆ ಅಡಿಕೆ ತೋಟದಲ್ಲಿ ಕಾಳುಮೆಣಸು, ತೆಂಗು, ಸಾಗವಾನಿ ಮರ, ಬಾಳೆ, ಪಪ್ಪಾಯಿ, ಕೊಕ್ಕೊ, ವೀಳ್ಯದೆಲೆ ಮುಂತಾದ ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾದರು. ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಯನ್ನು ಕೈಗೊಂಡರು. ಆಡು, ಕುರಿ, ಮೊಲ ಇತ್ಯಾದಿ ಪ್ರಾಣಿಗಳನ್ನು ಕೂಡ ಸಾಕಿದರು. ಅವುಗಳನ್ನು ಪೋಷಿಸಿ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸಿದ್ದಾರೆ.

ಇವರು ಸರ್ಕಾರಿ ರಾಸಾಯನಿಕ ರಸಗೊಬ್ಬರವನ್ನು ಬಳಸದೇ ಎರೆಹುಳು ಗೊಬ್ಬರ, ಕುರಿ ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗ ಬೇವಿನ ಹಿಂಡಿಯನ್ನು ತೋಟಕ್ಕೆ ಬಳಸುತ್ತಿದ್ದಾರೆ. ಹಾಗೆಯೇ ರಾಸಾಯನಿಕ ಕೀಟನಾಶಕಗಳನ್ನು ಸಹ ಬಳಸುತ್ತಿಲ್ಲ. ಬೇವಿನ ಸೊಪ್ಪು, ಎಕ್ಕೆಎಲೆ, ಪಾರ್ಥೇನಿಯಂ ಗಿಡದ ಸೊಪ್ಪು, ಸೇವಂತಿಗೆ ಗಿಡದ ಎಲೆ, ಚೆಂಡು ಹೂವಿನ ಎಲೆಗಳನ್ನು ಸಂಗ್ರಹಿಸಿ ಅವುಗಳನ್ನು ನೀರಿನಲ್ಲಿ ನೆನೆ ಹಾಕಿ ಕಷಾಯ ಮಾಡಿ ಸಿಂಪಡಿಸುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ಯಾವುದೇ ರೋಗಗಳು ಬರುವುದಿಲ್ಲ ಹಾಗೂ ಹೆಚ್ಚಿನ ಇಳುವರಿ ಕೂಡಾ ಬರುತ್ತದೆ ಎಂದು ಸಾಧಿಸಿ ತೋರಿಸಿದ್ದಾರೆ.

2019-20ನೇ ಸಾಲಿನಲ್ಲಿ ₹ 10 ಲಕ್ಷ ಮೌಲ್ಯದ ಅಡಿಕೆ, ₹ 12 ಸಾವಿರ ಮೌಲ್ಯದ ತೆಂಗು, ₹ 25 ಸಾವಿರ ಮೌಲ್ಯದ ಬಾಳೆ, ₹ 1.90 ಲಕ್ಷ ಮೌಲ್ಯದ ಕಾಳುಮೆಣಸು, ₹ 4.25 ಲಕ್ಷ ಮೌಲ್ಯದ ಕೊಕ್ಕೊ ಸೇರಿ 1 ವರ್ಷದಲ್ಲಿ 4 ಎಕರೆ ಅಡಿಕೆ ತೋಟದಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆದು ಒಟ್ಟು ₹ 16.27 ಲಕ್ಷ ಆದಾಯ ಪಡೆದಿದ್ದೇನೆ. ಸಾವಯವ ಕೃಷಿ ಪದ್ಧತಿ ಬಳಸಿದರೆ ಸಮೃದ್ಧ ಬೆಳೆ ಖಚಿತವಾಗಿ ಸಿಕ್ಕೇ ಸಿಗುತ್ತದೆ. ಓಬಿರಾಯನ ಕೃಷಿ ಪದ್ಧತಿಯನ್ನು ನಮ್ಮ ರೈತರು ಕೈ ಬಿಡಬೇಕು. ಹೈನುಗಾರಿಕೆ, ಮೀನುಗಾರಿಕೆ, ಸಾಕು ಪ್ರಾಣಿಗಳನ್ನು ಸಾಕಿ ಮಾರಾಟ ಮಾಡಿದರೂ ಹೆಚ್ಚಿನ ಆದಾಯ ಪಡೆಯಬಹುದು. ಸಮಯಕ್ಕೆ ತಕ್ಕಂತೆ ಕೃಷಿ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡು ಸಾವಯವ ಕೃಷಿಯಲ್ಲಿ ತೊಡಗಿದರೆ ಹೆಚ್ಚಿನ ಆದಾಯ ಪಡೆಯಬಹುದು.

– ಎಂ.ಡಿ. ಬಸವರಾಜಪ್ಪ, ರೈತ, ಮೇದುಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT