ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಕಾಲುವೆಗೆ ಇಳಿದು ರೈತರ ಪ್ರತಿಭಟನೆ

ಅವೈಜ್ಞಾನಿಕ ವೇಳಾಪಟ್ಟಿಯಿಂದ ಕಾಲುವೆಗಳಿಗೆ ನೀರು ಬರುತ್ತಿಲ್ಲ: ಆಕ್ರೋಶ
Published 25 ಮಾರ್ಚ್ 2024, 8:33 IST
Last Updated 25 ಮಾರ್ಚ್ 2024, 8:33 IST
ಅಕ್ಷರ ಗಾತ್ರ

ದಾವಣಗೆರೆ: ‘ಭದ್ರಾ ನೀರು ಹರಿಸಲು ಪ್ರಾರಂಭಿಸಿ 4 ದಿನಗಳಾದರೂ, ಕಾಲುವೆಗಳಿಗೆ ನೀರು ಬಂದಿಲ್ಲ’ ಎಂದು ಭಾನುವಾರ ಕುಂದುವಾಡ ಬಳಿ ಇರುವ ಕಾಲುವೆಗೆ ಇಳಿದು ರೈತರು ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ಮಾತನಾಡಿ, ‘ಭದ್ರಾ ನೀರಾವರಿ ಸಲಹಾ ಸಮಿತಿಯು (ಐಸಿಸಿ) ಅವೈಜ್ಞಾನಿಕ ವೇಳಾಪಟ್ಟಿಯಿಂದ ಕಾಲುವೆಗಳಿಗೆ ನೀರು ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಜಿಲ್ಲೆಯಲ್ಲಿ ಶೇಕಡ 70 ರಷ್ಟು ಅಚ್ಚುಕಟ್ಟು ಪ್ರದೇಶ ಇದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕು ಎಂಬುದನ್ನು ಐಸಿಸಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾಗವಹಿಸಿ ಅಂಕಿ ಅಂಶಗಳ ಸಹಿತ ವಾದ ಮಂಡಿಸಬೇಕಿತ್ತು. ಆದರೆ, ಅವರು ನಿರ್ಲಕ್ಷ್ಯ ತೋರಿ ಐಸಿಸಿ ಸಭೆಗೆ ಗೈರಾಗುವ ಮೂಲಕ ನೀರಿನ ಹಾಹಾಕಾರಕ್ಕೆ ಕಾರಣವಾಗಿದ್ದಾರೆ’ ಎಂದು ಆರೋಪಿಸಿದರು.

‘ಹತ್ತಿಪ್ಪತ್ತು ವರ್ಷಗಳಿಂದ ಕಷ್ಟಪಟ್ಟು ತೋಟಗಳನ್ನು ಕಾಪಾಡಿಕೊಂಡಿದ್ದೇವೆ. ಇದೀಗ ತೋಟದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ನೀರಿಲ್ಲದೆ ಕಂಗಾಲಾಗಿರುವ ರೈತರ ಸಂಕಷ್ಟಕ್ಕೆ ಸರ್ಕಾರ ಧಾವಿಸಬೇಕು’ ಎಂದು ರೈತ ಕುಂದುವಾಡದ ಜಿಮ್ಮಿ ಹನುಮಂತಪ್ಪ ಆಗ್ರಹಿಸಿದರು.

‘ಭದ್ರಾ ನೀರು ಬರದಿರುವುದರಿಂದ ತೋಟಗಳು ಒಣಗಿವೆ. ಕೊಳವೆಬಾವಿಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಪಶು ಪಕ್ಷಿಗಳಿಗೂ ನೀರಿಲ್ಲ’ ಎಂದು ಯುವ ರೈತ ಕುಂದುವಾಡದ ಪುನೀತ್ ಕಳವಳ ವ್ಯಕ್ತಪಡಿಸಿದರು.

‘ನೀರು, ಮೇವು ಇಲ್ಲದೆ ಕಡಿಮೆ ದರಕ್ಕೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದೇವೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿರ್ಲಕ್ಷ್ಯದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ ಹೇಳಿದರು.

ರೈತ ಮುಖಂಡ ಬೆಳವನೂರು ನಾಗೇಶ್ವರರಾವ್, ಮಾಜಿ ಮೇಯರ್ ಎಚ್.ಎನ್.ಗುರುನಾಥ್, ಮುಖಂಡರಾದ ಭಾಸ್ಕರ್ ರೆಡ್ಡಿ, ಅಣ್ಣಪ್ಪ, ಬಿ.ಮಹೇಶಪ್ಪ, ಗದಿಗೇಶ ಹಂಚಿನಮನೆ, ತಿಪ್ಪಣ್ಣ ಹರಿಹರ, ಎಚ್.ಎನ್.ಮಹಾಂತೇಶ, ಎಚ್.ಎಸ್.ಸೋಮಶೇಖರ, ಕ್ಯಾಂಪ್ ನಾಗೇಶ್ವರರಾವ್, ರಾಮಕೃಷ್ಣಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT