ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸ್ಥಳೀಯ ವಾಹನಗಳಿಗೆ ಸಿಗದ ರಿಯಾಯಿತಿ

ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ನಿಂದ ಪೂರ್ಣ ಪ್ರಮಾಣದ ಶುಲ್ಕ ಕಡಿತ
Last Updated 9 ಜನವರಿ 2020, 10:58 IST
ಅಕ್ಷರ ಗಾತ್ರ

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಕೇಂದ್ರಗಳಲ್ಲಿ ಕಳೆದ ಡಿಸೆಂಬರ್‌ನಿಂದ ‘ಫಾಸ್ಟ್ಯಾಗ್‌’ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ಸ್ಥಳೀಯ ವಾಹನಗಳಿಗೆ ಶೇ 50ರಷ್ಟು ರಿಯಾಯಿತಿ ನೀಡದೇ ಪೂರ್ಣ ಪ್ರಮಾಣದ ಶುಲ್ಕ ಕಡಿತಗೊಳ್ಳುತ್ತಿದೆ.

ಟೋಲ್‌ ಕೇಂದ್ರದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ನೆಲೆಸಿರುವ ವಾಹನ ಮಾಲೀಕರು ಈ ಮೊದಲು ನಗದು ಪಾವತಿಸುತ್ತಿದ್ದಾಗ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ, ‘ಫಾಸ್ಟ್ಯಾಗ್‌’ ವ್ಯವಸ್ಥೆ ಬಂದ ಬಳಿಕ ಪೂರ್ಣ ಪ್ರಮಾಣದ ಶುಲ್ಕ ಖಾತೆಯಿಂದ ಕಡಿತಗೊಳ್ಳುತ್ತಿರುವುದರಿಂದ ನಷ್ಟವಾಗುತ್ತಿದೆ ಎಂದು ವಾಹನ ಮಾಲೀಕರು ದೂರುತ್ತಿದ್ದಾರೆ.

‘ಈ ಮೊದಲು ಜಿಲ್ಲೆಯಲ್ಲಿ ನೋಂದಣಿ ಮಾಡಿದ ಲಾರಿಗಳಿಗೆ ಹೆಬ್ಬಾಳು ಟೋಲ್‌ ಕೇಂದ್ರದಲ್ಲಿ ಅರ್ಧ ಪ್ರಮಾಣದ ಶುಲ್ಕವನ್ನು ಮಾತ್ರ ಪಡೆಯಲಾಗುತ್ತಿತ್ತು. ಈಗ ನಮ್ಮ ವಾಹನಗಳಿಗೆ ಫಾಸ್ಟ್ಯಾಗ್‌ ಖಾತೆಯಿಂದ ಪೂರ್ಣ ಪ್ರಮಾಣದ ಶುಲ್ಕ ಕಡಿತಗೊಳ್ಳುತ್ತಿದೆ. ಮೊದಲಿನಂತೆ ಸ್ಥಳೀಯ ವಾಹನಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು ಎಂದು ಟೋಲ್‌ ಕೇಂದ್ರಕ್ಕೆ ಸಂಘದ ನಿಯೋಗವನ್ನು ಒಯ್ದು ಮನವಿ ಮಾಡಲಾಗುವುದು’ ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಕೆ. ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಾಸ್ಟ್ಯಾಗ್‌ ಸರಿಯಾಗಿ ಸ್ಕ್ಯಾನ್‌ ಆಗದೇ ಇರುವುದರಿಂದ ಮ್ಯಾನುವಲ್‌ ಆಗಿಯೂ ಸ್ಕ್ಯಾನ್‌ ಮಾಡುತ್ತಿದ್ದಾರೆ. ಸ್ಕ್ಯಾನರ್‌ ಸಮಸ್ಯೆಯಾದಾಗ ಉಚಿತವಾಗಿ ಬಿಡಿ ಎಂದರೂ ಕೇಳುತ್ತಿಲ್ಲ. ಫಾಸ್ಟ್ಯಾಗ್‌ನಲ್ಲಿ ಹಣವಿಲ್ಲ ಎಂದು ನಮ್ಮ ಚಾಲಕರನ್ನೇ ದಬಾಯಿಸಿ ನಗದು ಕಟ್ಟಿಸಿಕೊಳ್ಳುತ್ತಿದ್ದಾರೆ’ ಎಂದೂ ಅವರು ದೂರಿದರು.

ಸ್ಕ್ಯಾನರ್‌ ಸಮಸ್ಯೆಯಿಂದಾಗಿ ಕೆಲ ಬಾರಿ ಒಂದೇ ಪ್ರಯಾಣಕ್ಕೆ ಎರಡು ಬಾರಿ ಹಣ ಕಡಿತಗೊಳ್ಳುತ್ತಿದೆ. ಹೆಚ್ಚುವರಿಯಾಗಿ ಕಡಿತಗೊಂಡ ಹಣ ವಾಪಸ್‌ ಪಡೆಯಲು ವಾಹನ ಮಾಲೀಕರು ಪರದಾಡುವಂತಾಗಿದೆ.

ಕೆಎಸ್‌ಆರ್‌ಟಿಸಿಯ ದಾವಣಗೆರೆ ಡಿಪೊದ ಬಸ್‌ಗಳಿಗೆ ಹೆಬ್ಬಾಳು ಟೋಲ್‌ ಕೇಂದ್ರದಲ್ಲಿ ಏಕಮುಖ ಪ್ರಯಾಣಕ್ಕೆ ₹ 100 ಶುಲ್ಕ ಕಡಿತಗೊಳ್ಳಬೇಕಾಗಿತ್ತು. ಆದರೆ, ಸ್ಥಳೀಯ ವಾಹನ ಎಂದು ಪರಿಗಣಿಸದೇ ಫಾಸ್ಟ್ಯಾಗ್‌ನಲ್ಲಿ ₹ 195 ಶುಲ್ಕ ಕಡಿತಗೊಂಡಿದೆ. ಸುಮಾರು ₹ 14 ಸಾವಿರ ಹೆಚ್ಚುವರಿ ಶುಲ್ಕ ಕಡಿತಗೊಂಡಿದೆ.

‘ಈ ಮೊದಲು ದಾಖಲೆ ಪರಿಶೀಲಿಸಿ ಸ್ಥಳೀಯ ವಾಹನಗಳಿಗೆ ಶುಲ್ಕದಲ್ಲಿ ಅರ್ಧದಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ನಮ್ಮ ಸಿಸ್ಟಮ್‌ನಲ್ಲಿ ಮೊದಲೇ ಸ್ಥಳೀಯ ವಾಹನಗಳ ದಾಖಲೆಗಳನ್ನು ಅಪ್‌ಡೇಟ್‌ ಮಾಡಿಸಿಕೊಂಡಿದ್ದರೆ ಮಾತ್ರ ಫಾಸ್ಟ್ಯಾಗ್‌ನಲ್ಲಿ ರಿಯಾಯಿತಿ ಸಿಗಲಿದೆ. ಸ್ಥಳೀಯ ವಾಹನಗಳ ಮಾಲೀಕರು ಆರ್‌ಸಿ ಬುಕ್‌ ತಂದು ನೋಂದಾಯಿಸಿಕೊಂಡರೆ, ಫಾಸ್ಟ್ಯಾಗ್‌ ಸಂಪರ್ಕ ಜಾಲದ ಜೊತೆಗೆ ಲಿಂಕ್‌ ಮಾಡಿಕೊಡುತ್ತೇವೆ. ಆಗ ನೋಂದಾಯಿಸಿಕೊಂಡ ಸ್ಥಳೀಯ ವಾಹನಗಳಿಗೆ ಶುಲ್ಕದಲ್ಲಿ ರಿಯಾಯಿತಿ ಸಿಗಲಿದೆ. ತಿಂಗಳ ಪಾಸ್‌ ಪಡೆದವರಿಗೂ ಫಾಸ್ಟ್ಯಾಗ್‌ ಜೊತೆ ಲಿಂಕ್‌ ಮಾಡಿಕೊಡಲು ಅವಕಾಶವಿದೆ’ ಎಂದು ಹೆಬ್ಬಾಳು ಟೋಲ್‌ ಕೇಂದ್ರದ ವ್ಯವಸ್ಥಾಪಕ ಟಿ. ಉಮಾಕಾಂತ ಪ್ರತಿಕ್ರಿಯಿಸಿದರು.

*

ಫಾಸ್ಟ್ಯಾಗ್‌ ಸ್ಕ್ಯಾನ್‌ ಆಗದಿದ್ದರೆ ಉಚಿತವಾಗಿ ವಾಹನ ಬಿಡಬೇಕು ಎಂಬ ನಿಯಮವನ್ನು ಟೋಲ್‌ ಕೇಂದ್ರದವರು ಪಾಲಿಸುತ್ತಿಲ್ಲ. ಗಲಾಟೆ ಮಾಡಿ ನಗದು ಶುಲ್ಕವನ್ನು ಪಡೆಯುತ್ತಿದ್ದಾರೆ.

- ಎಸ್‌.ಕೆ. ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ಲಾರಿ ಮಾಲೀಕರ ಸಂಘ

ಸ್ಥಳೀಯ ಬಸ್‌ಗಳಿಗೆ ಹೆಚ್ಚುವರಿ ಪಡೆದಿರುವ ಶುಲ್ಕದ ಹಣವನ್ನು ಮರಳಿಸುವಂತೆ ಹೆಬ್ಬಾಳು ಟೋಲ್‌ ಕೇಂದ್ರದವರಿಗೆ ಹಾಗೂ ಹೆದ್ದಾರಿ ಪ್ರಾಧಿಕಾರದವರಿಗೆ ಪತ್ರ ಬರೆದಿದ್ದೇವೆ.

– ಸಿದ್ದೇಶ್ವರ ಹೆಬ್ಬಾಳ್‌, ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ, ಕೆ.ಎಸ್‌.ಆರ್‌.ಟಿ.ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT