ಗುರುವಾರ , ಆಗಸ್ಟ್ 11, 2022
21 °C
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ

ಜಿಲ್ಲೆಯಲ್ಲಿ ಶೀಘ್ರ ‘ಸುಭಾಹು’ ಇ–ಬೀಟ್ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮನೆ ಕಳ್ಳತನ ಸೇರಿ ಇನ್ನಿತರೆ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ‘ಸುಭಾಹು’ ನೂತನ ಇ-ಬೀಟ್ ಪದ್ಧತಿಯನ್ನು ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

‘ಹಲವು ತಿಂಗಳುಗಳಿಂದ ‘ಸುಭಾಹು’ ಆ್ಯಪ್ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಕೊನೆಯ ಹಂತಕ್ಕೆ ಬಂದಿದೆ. ಒಂದು ವಾರದಲ್ಲಿ ಪಟ್ಟಿ ಮಾಡಿ ಕಾರ್ಯಗತಗೊಳಿಸುತ್ತೇವೆ. ಈ ಆ್ಯಪ್ ಜಾರಿಗೆ ಬಂದರೆ ರಾತ್ರಿಯ ಗಸ್ತು ಇನ್ನಷ್ಟು ಪರಿಣಾಮಕಾರಿಯಾಗಲಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ. ನಮ್ಮ ಜಿಲ್ಲೆಯಲ್ಲೂ ಮಾಡುತ್ತೇವೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ
ತಿಳಿಸಿದರು.

‘ಸಾರ್ವಜನಿಕರು ದೀರ್ಘ ಅವಧಿಗೆ ಮನೆಯನ್ನು ಬಿಟ್ಟು ತೆರಳುವಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಬೆಲೆ ಬಾಳುವ ಆಭರಣವನ್ನು ಮನೆಯಲ್ಲಿ ಇಡಬಾರದು. ಮನೆಯ ಒಳ ಕೀಯನ್ನು ಹಾಕಬೇಕು. ರಾತ್ರಿ ವೇಳೆ ಮನೆಯಲ್ಲಿ ಒಂದು ವಿದ್ಯುತ್ ದೀಪ ಇರುವಂತೆ ವ್ಯವಸ್ಥೆ ಮಾಡಬೇಕು. ಶೇ 90ರಷ್ಟು ಕಳ್ಳತನ ಬೀಗ ಹಾಕಿದ ಮನೆಯಲ್ಲೇ ನಡೆಯುತ್ತಿದ್ದು, ಆದ್ದರಿಂದ ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

‘ನಿವೇಶನ ಕೊಡಿಸುವುದಾಗಿ ಪ್ರೀತಿ ಎಂಬ ಮಹಿಳೆ ವಂಚನೆ ಮಾಡಿದ ಪ್ರಕರಣ ಸಂಬಂಧ ಬಡಾವಣೆ ಹಾಗೂ ವಿದ್ಯಾನಗರ ಠಾಣೆಗಳಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ತನಿಖೆ ಮಾಡುತ್ತಿದ್ದೇವೆ. ಹಲವು ಮಂದಿ ಮೋಸ ಹೋಗಿದ್ದು. ಆಯಾ ಠಾಣೆಗಳಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸುತ್ತೇವೆ. ಮೋಸ ಹೋದ ಮಹಿಳೆಯರಿಂದ ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದು, ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ವೀಸಾ ನಿಮಯ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವಧಿ ಮುಗಿದರೂ ಇಲ್ಲಿ ವಾಸ ಮಾಡುವವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಹೇಳಿದರು. 

ಐಟಿಸಿ ಸಿಗರೇಟ್ ಕಳ್ಳತನ ಹಾವೇರಿ ಜಿಲ್ಲೆಯಲ್ಲೂ ಆಗಿದೆ. ಮಂಗಳವಾರ ನಡೆದ ಕಳವು ಪ್ರಕರಣದಲ್ಲಿ ಸಿಸಿಟಿವಿ ಕ್ಯಾಮೆರಾದ ಸಿಡಿಆರ್ ಕದ್ದೊಯ್ದಿದ್ದಾರೆ. ಕಳ್ಳತನದ ಬಗ್ಗೆ ಸುಳಿವು ಸಿಕ್ಕಿದ್ದು ಶೀಘ್ರ ಪತ್ತೆ ಮಾಡುತ್ತೇವೆ’
ಎಂದರು.

ಅಪರಾಧ ತಡೆ ಮಾಸಾಚರಣೆ: ಡಿಸೆಂಬರ್ ತಿಂಗಳು ಪೂರ್ತಿ ಅಪರಾಧ ತಡೆ ಮಾಸಾಚರಣೆ ನಡೆಯಲಿದ್ದು, ಡಿಸೆಂಬರ್ 4ರಂದು ಶುಕ್ರವಾರ ಜಯದೇವ ವೃತ್ತದಿಂದ ಸೈಕಲ್ ಜಾಥಾ ಆರಂಭಿಸಲಾಗುವುದು. ಆರ್‌ಟಿಒ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ಜಾಥಾವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ಎಂ.ರಾಜೀವ್, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ದೇವರಾಜ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.