ಶುಕ್ರವಾರ, ಫೆಬ್ರವರಿ 28, 2020
19 °C
ಸಂಸದ, ಇಬ್ಬರು ಶಾಸಕರು, 14 ಎಂಎಲ್ಸಿಗಳ ಜತೆಗೆ ಪಕ್ಷೇತರರು, ಜೆಡಿಎಸ್‌ನ ಸದಸ್ಯರಿಗೂ ಬಂತು ಪ್ರಾಮುಖ್ಯ

19ಕ್ಕೆ ಮೇಯರ್‌ ಚುನಾವಣೆ: ಸಂಖ್ಯಾಬಲಕ್ಕೆ ಕಸರತ್ತು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮೂರು ತಿಂಗಳ ಹಿಂದೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದವರ ಹೆಸರು ಗೆಜೆಟ್‌ನಲ್ಲಿ ಪ್ರಕಟಗೊಂಡಿದೆ. ಮೇಯರ್‌, ಉಪ ಮೇಯರ್‌ ಚುನಾವಣೆ ಫೆ.19ರಂದು ನಡೆಯಲಿದೆ. ಅಧಿಕಾರ ಹಿಡಿಯಲು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಲೆಕ್ಕಾಚಾರ ಆರಂಭಗೊಂಡಿದೆ. ‘ನಾವೇ ಅಧಿಕಾರ ಹಿಡಿಯುತ್ತೇವೆ’ ಎಂದು ಎರಡೂ ಪಕ್ಷಗಳು ಹೇಳಿಕೊಂಡಿವೆ.

ಕಳೆದ ನವೆಂಬರ್‌ 12ರಂದು ಪಾಲಿಕೆ ಚುನಾವಣೆ ನಡೆದಿತ್ತು. ನ.14ರಂದು ಫಲಿತಾಂಶ ಹೊರಬಿದ್ದಿತ್ತು. ಕಾಂಗ್ರೆಸ್‌ 22, ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದಿದ್ದವು. ಐವರು ಪಕ್ಷೇತರರು, ಜೆಡಿಎಸ್‌ನ ಒಬ್ಬರು ಆಯ್ಕೆಯಾಗಿದ್ದರು. ಈ 45 ಸದಸ್ಯರ ಜತೆಗೆ ಒಬ್ಬರು ಸಂಸದರು, ಇಬ್ಬರು ಶಾಸಕರು, 14 ಮಂದಿ ವಿಧಾನ ಪರಿಷತ್ತ್‌ ಸದಸ್ಯರು ಕೂಡ ಮೇಯರ್‌ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇದೆ. ಅಲ್ಲಿಗೆ ಒಟ್ಟು ಸಂಖ್ಯೆ 62ಕ್ಕೆ ಏರಿದ್ದು, ಯಾರು ಯಾವ ಪಕ್ಷ ಎಂಬ ಹುಡುಕಾಟ
ಆರಂಭಗೊಂಡಿದೆ.

ಫಲಿತಾಂಶ ಹೊರಬಿದ್ದು ಕೆಲವೇ ದಿನಗಳಲ್ಲಿ ನಾಲ್ವರು ಪಕ್ಷೇತರರು ಬಿಜೆಪಿ ಜತೆ, ಒಬ್ಬರು ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದರು. ಸಂಸದರು, ಒಬ್ಬರು ಎಂಎಲ್‌ಎ, 8 ವಿಧಾನ ಪರಿಷತ್‌ ಸದಸ್ಯರ ಬೆಂಬಲ ಬಿಜೆಪಿಗಿದೆ. ಅಲ್ಲಿಗೆ ಬಿಜೆಪಿ ಪಾಳಯದಲ್ಲಿ ಇರುವವರ ಸಂಖ್ಯೆ 31ಕ್ಕೆ ಏರಿದೆ. ಒಬ್ಬರು ಎಂಎಲ್‌ಎ, 6 ವಿಧಾನ ಪರಿಷತ್‌ ಸದಸ್ಯರ ಬೆಂಬಲದಿಂದ ಕಾಂಗ್ರೆಸ್‌ ಸಂಖ್ಯೆ 30ಕ್ಕೆ ತಲುಪಿದೆ. ಜೆಡಿಎಸ್‌ ಸದಸ್ಯರೂ ತಮ್ಮ ಜತೆ ಇದ್ದಾರೆ ಎಂದು ಕಾಂಗ್ರೆಸ್‌ನವರು ಹೇಳಿಕೊಳ್ಳುತ್ತಿರುವುದರಿಂದ ಅಲ್ಲಿಗೆ ಕಾಂಗ್ರೆಸ್‌– ಬಿಜೆಪಿ ಸಮಬಲ ಹೊಂದಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ಆದರೆ ಆಳದಲ್ಲಿ ಲೆಕ್ಕ ಇಷ್ಟು ಸರಳವಾಗಿಲ್ಲ. ಪಕ್ಷೇತರರಾಗಿ ಗೆದ್ದಿರುವವರನ್ನು ಎರಡೂ ಪಕ್ಷಗಳು ಮತ್ತೆ ಸಂಪರ್ಕಿಸಲು ಪ್ರಯತ್ನಿಸುತ್ತಿವೆ. ಜೆಡಿಎಸ್‌ ಸದಸ್ಯರು ತಮ್ಮ ಬೆಂಬಲವನ್ನು ಇನ್ನೂ ಯಾರಿಗೂ ತಿಳಿಸಿಲ್ಲ.

‘ಮೇಯರ್‌ ಅಭ್ಯರ್ಥಿ ಯಾರು ಎಂಬುದನ್ನು ಅಧಿಕೃತವಾಗಿ ಫೆ.19ರಂದೇ ಬೆಳಿಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಘೋಷಿಸಲಿದ್ದಾರೆ. ಕಾಂಗ್ರೆಸ್‌ಗೆ 33 ಮತಗಳು ಬೀಳಲಿವೆ. ಹೇಗೆ ಎಂಬುದನ್ನು ಕಾದು ನೋಡಿ’ ಎಂದು ಪಾಲಿಕೆ ಸದಸ್ಯ ಎ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಜೆಪಿ ನೂರಕ್ಕೆ ನೂರು ಅಧಿಕಾರ ಹಿಡಿಯಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅದರ ಸ್ಪಷ್ಟ ಚಿತ್ರಣ ನಿಮಗೆ ಫೆ.19ರಂದೇ ಸಿಗಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಎರಡೂ ಪಕ್ಷಗಳ ಮುಂದೆ ಅಭಿವೃದ್ಧಿ ಬಗ್ಗೆ ಬೇಡಿಕೆಗಳನ್ನು ಇಡುತ್ತೇವೆ. ಯಾರು ಸ್ಪಂದಿಸುತ್ತಾರೆ ಎಂಬುದನ್ನು ನೋಡುತ್ತೇವೆ. ಪಕ್ಷದ ಜಿಲ್ಲಾ ಮತ್ತು ರಾಜ್ಯ ಮಟ್ಟದ ನಾಯಕರ ಜತೆ ಚರ್ಚಿಸುತ್ತೇವೆ. ಅವರು ತಿಳಿಸಿದವರಿಗೆ ಬೆಂಬಲ ಕೊಡುತ್ತೇವೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ದಾವಣಗೆರೆ ದಕ್ಷಿಣ ಅಧ್ಯಕ್ಷ ಅಮಾನುಲ್ಲಾ ಖಾನ್‌ ತಿಳಿಸಿದ್ದಾರೆ.

‘ನಮ್ಮ ನಾಯಕರು ಸೂಚಿಸಿದವರಿಗೆ ಬೆಂಬಲ ನೀಡುತ್ತೇವೆ. ಸದ್ಯ ಯಾವ ಪಕ್ಷಕ್ಕೂ ಬೆಂಬಲ ಸೂಚಿಸಿಲ್ಲ’ ಎಂದು ಜೆಡಿಎಸ್‌ನಿಂದ ಆಯ್ಕೆಯಾಗಿರುವ ನೂರ್‌ಜಹಾನ್‌ ಬಿ ಪರವಾಗಿ ಅವರ ಮಗ ದಾದಾಪೀರ್‌ ಹೇಳಿದ್ದಾರೆ.

ಮೇಯರ್‌ ಆಕಾಂಕ್ಷಿಗಳು ಯಾರು?
ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್‌ನಿಂದ ದೇವರಮನೆ ಶಿವಕುಮಾರ್‌, ಬಿಜೆಪಿಯಿಂದ ಬಿ.ಜಿ. ಅಜಯಕುಮಾರ್‌ ಅವರ ಹೆಸರು ಆಯಾ ಪಕ್ಷದೊಳಗೆ ಚಾಲ್ತಿಯಲ್ಲಿವೆ. ಆದರೆ ಅಧಿಕೃತವಾಗಿ ಘೋಷಿಸಿಲ್ಲ.

ಉಪ ಮೇಯರ್‌ ಸ್ಥಾನ ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿದೆ. ಎರಡು ಪಕ್ಷಗಳಲ್ಲಿಯೂ ಹಲವರು ಅರ್ಹರಿದ್ದಾರೆ. ಸಾಲದ್ದಕ್ಕೆ ಪಕ್ಷೇತರರು, ಜೆಡಿಎಸ್‌ ಸದಸ್ಯೆ ಕೂಡ ಇದೇ ಕೆಟಗರಿಯಲ್ಲಿ ಬರುವುದರಿಂದ ಎರಡೂ ಪಕ್ಷಗಳು ಉಪ ಮೇಯರ್‌ ಯಾರು ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ.

ಇದರ ಜತೆಗೆ ತೆರಿಗೆ ನಿರ್ಧಾರ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ, ಸಾರ್ವಜನಿಕರ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಯೂ ನಡೆಯಲಿದೆ.

ಸಮಬಲವಾದರೆ ಚೀಟಿ ಎತ್ತುವ ಮೂಲಕ ಆಯ್ಕೆ
ಮೇಯರ್‌ ಆಯ್ಕೆಗೆ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ ಕೈ ಎತ್ತುವ ಮೂಲಕ ಚುನಾವಣೆ ನಡೆಸಲಾಗುತ್ತದೆ. ಸಮಬಲಗೊಂಡರೆ ಚೀಟಿ ಎತ್ತಿ ಆಯ್ಕೆ ಮಾಡಲಾಗುತ್ತದೆ. ಉಪ ಮೇಯರ್‌ ಆಯ್ಕೆಗೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೇಯರ್‌, ಉಪಮೇಯರ್‌ ಆಯ್ಕೆಗೆ ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರು ಫೆ.10ರಂದೇ ಅಧಿಸೂಚನೆ ಹೊರಡಿಸಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಫೆ.19ರಂದು ಬೆಳಿಗ್ಗೆ 9.30ರ ಒಳಗೆ ನಾಮಪತ್ರ ಸಲ್ಲಿಕೆಯಾಗಬೇಕು. ಬಳಿಕ ಅವಕಾಶವಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಚುನಾವಣಾಧಿಕಾರಿಯಾಗಿರುತ್ತಾರೆ. ಬೆಳಿಗ್ಗೆ 11.30ರಿಂದ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದು ಪಾಲಿಕೆಯ ಪರಿಷತ್‌ ಕಾರ್ಯದರ್ಶಿ ಜಯಣ್ಣ ಕೆ. ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು