ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅಂಜಲಿ ಹಂತಕನಿಂದ ಹಲ್ಲೆಗೊಳಗಾದ ಮಹಿಳೆಗೆ ಆರ್ಥಿಕ ಸಂಕಷ್ಟ

ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬ
Published 20 ಮೇ 2024, 14:15 IST
Last Updated 20 ಮೇ 2024, 14:15 IST
ಅಕ್ಷರ ಗಾತ್ರ

ದಾವಣಗೆರೆ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಆರೋಪಿಯಿಂದ ಚಲಿಸುತ್ತಿದ್ದ ರೈಲಿನಲ್ಲಿ ಹಲ್ಲೆಗೆ ಒಳಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗದಗ ಜಿಲ್ಲೆ ಮುಳಗುಂದದ ಲಕ್ಷ್ಮಿ (27) ಆರ್ಥಿಕ ಸಂಕಷ್ಟದಲ್ಲಿದ್ದು, ಆಸ್ಪ‍ತ್ರೆಯ ಶುಲ್ಕ ಭರಿಸದಂಥ ಸ್ಥಿತಿಯಲ್ಲಿದ್ದಾರೆ.

ಲಕ್ಷ್ಮಿ ಅವರು ಮಗನನ್ನು ಸಿದ್ದಗಂಗಾ ಶಿಕ್ಷಣ ಸಂಸ್ಥೆಯಲ್ಲಿ ದಾಖಲಿಸಲು ಪತಿ ಮಹಾಂತೇಶ್ ಅವರೊಂದಿಗೆ ತುಮಕೂರಿಗೆ ತೆರಳಿ ಮೇ 16ರಂದು ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ ವಾಪಸಾಗುತ್ತಿದ್ದರು. ಅದೇ ರೈಲಿನಲ್ಲಿದ್ದ ಅಂಜಲಿ ಅಂಬಿಗೇರ ಹತ್ಯೆ ಆರೋಪಿ ಗಿರೀಶ ಸಾವಂತ ಲಕ್ಷ್ಮಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ.

ಈ ಸಂದರ್ಭ ಲಕ್ಷ್ಮಿ ಅವರ ಎಡಗೈ ನರಗಳು ಕತ್ತರಿಸಿದ್ದವು. ಆರಂಭದಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಲಕ್ಷ್ಮಿ, ನಂತರ ಎಸ್.ಎಸ್. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಶಸ್ತ್ರ ಚಿಕಿತ್ಸೆ ಮಾಡಲು ಆರಂಭದಲ್ಲಿ ಆಸ್ಪತ್ರೆಯಿಂದ ₹ 30,000 ಆಗುತ್ತದೆ ಎಂದು ಹೇಳಿದ್ದರು. ₹ 10,000 ಮುಂಗಡ ಪಾವತಿಸಿದ ಬಳಿಕ ವೈದ್ಯರು ಚಿಕಿತ್ಸೆ ಮಾಡಿದ್ದಾರೆ. ಈಗಾಗಲೇ ಔಷಧಿ ಸೇರಿ ₹ 30,000 ಖರ್ಚಾಗಿದೆ. ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ಸಂದರ್ಭ ₹ 80,000 ಶುಲ್ಕ ದಾಟಬಹುದು ಎಂದು ಅಂದಾಜಿಸಿದ್ದಾರೆ. ಕೂಲಿ ಮಾಡಿ ಜೀವನ ನಡೆಸುವ ನಮ್ಮ ಬಳಿ ಅಷ್ಟು ಹಣವಿಲ್ಲ’ ಎಂದು ಮಹಾಂತೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಪತ್ನಿಗೆ ಆರೋಪಿ ಇರಿದ ವೇಳೆ ಚಾಕು ಒಂದೂವರೆ ಇಂಚು ಒಳಗೆ ಚುಚ್ಚಿದ್ದು, ನರಗಳು ಕತ್ತರಿಸಿದ್ದರಿಂದ ಬೆರಳು ಅಲುಗಾಡಿಸಲು ಆಗುತ್ತಿಲ್ಲ. ಡಿಸ್ಚಾರ್ಜ್ ಮಾಡಿದ ಬಳಿಕ ಪತ್ನಿಗೆ 3–4 ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದು, ಆ ಕೈಯಲ್ಲಿ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ನಾನು ಸೆಂಟ್ರಿಂಗ್ (ಕೂಲಿ) ಕೆಲಸ ಮಾಡುತ್ತಿದ್ದು, ಮೂವರು ಮಕ್ಕಳಿದ್ದಾರೆ. ಸಂಸಾರ ಸಲಹುವುದೇ ಕಷ್ಟವಾಗಿದೆ. ಆಸ್ಪತ್ರೆಗೆ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.

‘ಆಸ್ಪತ್ರೆಯಲ್ಲಿ ಊಟ, ತಿಂಡಿ, ಔಷಧಕ್ಕೆ ಹಣವಿಲ್ಲ. ಈಗಾಗಲೇ ಸ್ನೇಹಿತರ ಬಳಿ ಸಾಲ ಮಾಡಿದ್ದೇನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಹೋದರೆ ಸಾಕು. ಹೇಗೋ ಜೀವನ ಮಾಡಬಹುದು. ನಮಗೆ ಕೂಲಿ ಕೆಲಸ ಬಿಟ್ಟರೆ ಬೇರೆ ದಾರಿ ಇಲ್ಲ’ ಎಂದರು.

ನೆರವು ನೀಡಲು ಬಯಸುವವರು ಮೊಬೈಲ್ ಸಂಖ್ಯೆ: 8746895036 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT