ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ | ಕಸದ ರಾಶಿಗೆ ಬೆಂಕಿ: ಅಪಾಯಕ್ಕೆ ಆಹ್ವಾನ

Published 19 ಜನವರಿ 2024, 7:22 IST
Last Updated 19 ಜನವರಿ 2024, 7:22 IST
ಅಕ್ಷರ ಗಾತ್ರ

ಹರಿಹರ: ನಗರದ ಹೊರವಲಯದ ದಾವಣಗೆರೆ ರಸ್ತೆ ಬದಿಯಲ್ಲಿ ಕಸದ ರಾಶಿಗೆ ಬೆಂಕಿ ಹಾಕುತ್ತಿದ್ದು, ಬೆಂಕಿಯ ಜ್ವಾಲೆಗಳು ಸಾಲು ಮರಗಳು ಹಾಗೂ ರೈಲ್ವೆ ವಿದ್ಯುತ್ ಮಾರ್ಗಕ್ಕೆ ಕಂಟಕವಾಗಿ ಪರಿಣಮಿಸಿದೆ.

ನಗರದ ವಿವಿಧ ಅಂಗಡಿಗಳ ವ್ಯಾಪಾರಿಗಳು ತ್ಯಾಜ್ಯವನ್ನು ಹೆದ್ದಾರಿ ಮತ್ತು ರೈಲ್ವೆ ಮಾರ್ಗ ಮಧ್ಯದ ಜಾಗದಲ್ಲಿ ಸುರಿಯುತ್ತಿದ್ದಾರೆ. ಸ್ಥಳೀಯರೂ ತ್ಯಾಜ್ಯವನ್ನು ಇಲ್ಲೇ ಹಾಕುತ್ತಿದ್ದಾರೆ. ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿರುವುದರಿಂದ ಅಪಾಯ ಆಹ್ವಾನಿಸುತ್ತಿದೆ.

ಹಳೆ ಪಿ.ಬಿ. ರಸ್ತೆಗೆ ಪರ್ಯಾಯವಾಗಿ 10 ವರ್ಷಗಳ ಹಿಂದೆ ಬೀರೂರು-ಸಮ್ಮಸಗಿ ಹೆದ್ದಾರಿ ನಿರ್ಮಿಸಲಾಯಿತು. ಈ ಹೆದ್ದಾರಿ ಪಕ್ಕದಲ್ಲೆ ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮಾರ್ಗವಿದೆ. ರೈಲ್ವೆ ಮಾರ್ಗ ಮತ್ತು ಹೆದ್ದಾರಿ ಮಧ್ಯೆ 30–40 ಅಡಿ ಖಾಲಿ ಜಾಗವಿದೆ. ಈ ಖಾಲಿ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಎರಡೂ ಬದಿ ಸಾಲು ಮರಗಳನ್ನು ನೆಡಲಾಗಿದೆ. 

1ನೇ ರೈಲ್ವೆ ಗೇಟಿನಿಂದ 2ನೇ ರೈಲ್ವೆ ಗೇಟಿನವರೆಗಿನ ಹೆದ್ದಾರಿ ಬದಿಯಲ್ಲಿ ಓಡಾಡಿದರೆ ಕಸದ ರಾಶಿಯೇ ಕಣ್ಣಿಗೆ ರಾಚುತ್ತದೆ. ಈ ಕಸದ ರಾಶಿ ಬೆಂಕಿ ಹಾಕುವುದರಿಂದ ಬೆಂಕಿಯ ಜ್ವಾಲೆ 15 ಅಡಿ ಎತ್ತರದವರೆಗೆ ಏರುತ್ತದೆ. ಸಮೀಪದ ಮರಗಳು, ವಿದ್ಯುತ್ ಮಾರ್ಗಕ್ಕೆ ಇದರಿಂದ ಹಾನಿಯಾಗುತ್ತಿದೆ.

ಹೆದ್ದಾರಿ ಬದಿ ಜಾಲಿ ಗಿಡಗಳೂ ಬೆಳೆದಿವೆ. ಬೆಂಕಿ ಆ ಗಿಡಗಳಿಗೂ ವ್ಯಾಪಿಸಿ ದೊಡ್ಡ ದೊಡ್ಡ ಮರಗಳನ್ನು ಆಹುತಿ ಪಡೆಯುತ್ತಿದೆ. ಈಚೆಗೆ ರೈಲ್ವೆ ಮಾರ್ಗವನ್ನು ವಿದ್ಯುತ್ತೀಕರಣ ಮಾಡಲಾಗಿದೆ. ಬೆಂಕಿಯ ಜ್ವಾಲೆಗಳು ಅದರ ಸಮೀಪಕ್ಕೂ ವ್ಯಾಪಿಸುತ್ತಿದ್ದು, ವಿದ್ಯುತ್ ಲೈನ್‌ಗೆ ಬೆಂಕಿ ತಗುಲಿದರೆ ಭಾರಿ ಅನಾಹುತವಾಗುವ ಸಂಭವವಿದೆ.

‘ನಿತ್ಯ ಹರಿಹರ–ದಾವಣಗೆರೆ ಮಾರ್ಗದಲ್ಲಿ ಸಂಚರಿಸುತ್ತಿದ್ದೇನೆ. ವಾರದಲ್ಲಿ 2-3 ಬಾರಿ ಕಸದ ರಾಶಿಗೆ ಬೆಂಕಿ ಹಾಕುತ್ತಿದ್ದು, ದಟ್ಟವಾಗಿ ಏಳುವ ಹೊಗೆ ಏಳುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅನಾಹುತ ಸಂಭವಿಸುವ ಮುನ್ನ ಕಸ ಹಾಕುವವರು ಹಾಗೂ ಕಸಕ್ಕೆ ಬೆಂಕಿ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಬ್ಯಾಂಬೂ ಜಬಿಉಲ್ಲಾ ಒತ್ತಾಯಿಸಿದರು.

ಇಲ್ಲಿ ಕಸ ಹಾಕುವವರ ವಿರುದ್ಧ ನಗರಸಭೆ ದಂಡ ವಿಧಿಸಿ, ಪ್ರಕರಣ ದಾಖಲಿಸಲು ಮುಂದಾಗಬೇಕು. ಕಸ ಹಾಕುವವರನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಇಲ್ಲದಿದ್ದರೆ ಕಸವನ್ನು ನಿಯಮಿತವಾಗಿ ವಿಲೇವಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಹರಿಹರದ ಹೊರವಲಯದ ದಾವಣಗೆರೆ ರಸ್ತೆಯಲ್ಲಿ ಕಸದ ರಾಶಿಗೆ ಬೆಂಕಿ ಹಾಕಿರುವುದು
ಹರಿಹರದ ಹೊರವಲಯದ ದಾವಣಗೆರೆ ರಸ್ತೆಯಲ್ಲಿ ಕಸದ ರಾಶಿಗೆ ಬೆಂಕಿ ಹಾಕಿರುವುದು
ಹರಿಹರದ ಹೊರವಲಯದ ದಾವಣಗೆರೆ ರಸ್ತೆಯಲ್ಲಿ ರೈಲ್ವೆ ವಿದ್ಯುತ್‌ ಮಾರ್ಗದ ಬಳಿ ಕಸದ ರಾಶಿಗೆ ಬೆಂಕಿ ಹಾಕಿರುವುದು
ಹರಿಹರದ ಹೊರವಲಯದ ದಾವಣಗೆರೆ ರಸ್ತೆಯಲ್ಲಿ ರೈಲ್ವೆ ವಿದ್ಯುತ್‌ ಮಾರ್ಗದ ಬಳಿ ಕಸದ ರಾಶಿಗೆ ಬೆಂಕಿ ಹಾಕಿರುವುದು
ಆ ಭಾಗದಲ್ಲಿ ಕಸ ಹಾಕದಂತೆ ಎಚ್ಚರಿಕೆಯ ನಾಮಫಲಕ ಅಳವಡಿಸುತ್ತೇವೆ. ಅಗತ್ಯ ಬಿದ್ದರೆ ದಂಡ ವಿಧಿಸುತ್ತೇವೆ. ಕೂಡಲೇ ಕಸದ ರಾಶಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.
ಐಗೂರು ಬಸವರಾಜ್ ನಗರಸಭೆ ಪೌರಾಯುಕ್ತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT