ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ನಿಷೇಧ: ಮಾರಾಟಗಾರರು ಕಂಗಾಲು

ವ್ಯಾಪಾರಿಗಳಿಗೆ ₹1.50 ಕೋಟಿ ನಷ್ಟ * ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧಾರ
Last Updated 6 ನವೆಂಬರ್ 2020, 16:21 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್ ಇರುವುದರಿಂದ ಪಟಾಕಿ ಸಿಡಿಸಿದರೆ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ಪಟಾಕಿ ನಿಷೇಧಿಸುವುದಾಗಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಜಿಲ್ಲೆಯ ಪಟಾಕಿ ಮಾರಾಟಗಾರರು ಆತಂಕಗೊಂಡಿದ್ದಾರೆ. ಅಲ್ಲದೇ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟಾಕಿ ಮಾರಾಟಕ್ಕೆ ಲೈಸೆನ್ಸ್ ಪಡೆದು ಕೋವಿಡ್ ಮಾರ್ಗಸೂಚಿ ಅನ್ವಯ ಹೈಸ್ಕೂಲ್ ಮೈದಾನದಲ್ಲಿ ಮಳಿಗೆ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ದಿಢೀರ್ ಆದೇಶ ಹೊರಡಿಸಿದ್ದು, ಇದರಿಂದಾಗಿ ಮಾರಾಟಗಾರರು ಕಂಗಾಲಾಗಿದ್ದಾರೆ.

‘ಪಟಾಕಿ ನಿಷೇಧ ಮಾಡಿ ಆದೇಶ ಹೊರಡಿಸಿದ್ದು,ಏನು ಮಾಡಬೇಕು ಎಂದು ತೋಚುತ್ತಿಲ್ಲ. ಜಿಲ್ಲಾಧಿಕಾರಿಗಳೇ ಒಂದು ಮಾರ್ಗಸೂಚಿ ನೀಡಿದ್ದರು. ಪಟಾಕಿ ನಿಷೇಧದಿಂದ ಸಣ್ಣ ವ್ಯಾಪಾರಿ ₹1.50 ಲಕ್ಷದಿಂದ ದೊಡ್ಡ ವ್ಯಾಪಾರಿಗಳಿಗೆ ₹ 5 ಲಕ್ಷದವರೆಗೂ ಸೇರಿ ಜಿಲ್ಲೆಯಲ್ಲಿ 1.50 ಕೋಟಿ ನಷ್ಟವಾಗಲಿದೆ’ ಎಂದುಪಟಾಕಿ ವರ್ತಕರ ಹಾಗೂ ಬಳಕೆದಾರರ ಸಂಘದ ಅಧ್ಯಕ್ಷ ಡಿ.ಎಸ್‌.ಸಿದ್ದಣ್ಣ ಅಳಲು ತೋಡಿಕೊಂಡರು.

‘ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂಬ ಆಸೆಯಿಂದ ಕೈಗಾಡಿಯಲ್ಲಿ ವ್ಯಾಪಾರಿಗಳು ಸಾಲ ಮಾಡಿ ಪಟಾಕಿ ಖರೀದಿಸಿದ್ದಾರೆ. ಈಗ ಅವರು ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಸರ್ಕಾರ ವ್ಯಾಪಾರಿಗಳ ಜೀವನದ ಜೊತೆ ಚೆಲ್ಲಾಟವಾಡುವದು ತಪ್ಪು, ಮುಂಚಿತವಾಗಿ ಹೇಳಿದ್ದರೆ ಸರಿಯಾಗುತ್ತಿತ್ತು’ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

‘ಕೋವಿಡ್ ಕಾರಣದಿಂದ ಮಾಸ್ಕ್, ಸ್ಯಾನಿಟೈಸರ್‌ಗಳ ಜೊತೆ ಅಂತರ ಕಾಯ್ದುಕೊಳ್ಳಲು ಕಟ್ಟಿಗೆಯಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಾಣ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಮಳಿಗೆಗಳ ನಿರ್ಮಾಣಕ್ಕೆ ಹಣ ನೀಡಿದ್ದೆವು. ಕೋವಿಡ್ ನಿಯಂತ್ರಣಕ್ಕೆ ಬರುವವರಿಗೆ ಇಲ್ಲವೇ ಮುಂದಿನ ವರ್ಷದ ತನಕ ಪಟಾಕಿ ಮಾರಾಟ ಮಾಡಲು ಆಗುವುದಿಲ್ಲ. ಕೆಲವು ಪಟಾಕಿಗಳು ಮಾರಾಟವಾಗುವುದಿಲ್ಲ.ಈಗ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ’ ಎಂದು ಸಿದ್ದಣ್ಣ ಹೇಳಿದರು.

‘ಅಗ್ನಿಶಾಮಕ ದಳದ ಕಚೇರಿಗೆ ಒಬ್ಬ ವ್ಯಾಪಾರಿ ₹5 ಸಾವಿರ, ಮಳಿಗೆಗಳ ಆರಂಭಕ್ಕೆ ₹10 ಸಾವಿರ ತುಂಬಿದ್ದೇವೆ. ಮುಂಗಡ ಹಣ ವಾಪಸ್ ಕೊಡುತ್ತಾರೊ ಇಲ್ಲವೊ ಗೊತ್ತಿಲ್ಲ. ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ನೆರವಿಗೆ ಬರಬೇಕು’ ಎಂಬುದು ಅವರ ಆಗ್ರಹ.

‘ಇದೊಂದು ರಾಜಕೀಯ ನಾಟಕ. ಗೌರಿ–ಗಣೇಶ ಹಬ್ಬದಲ್ಲೂ ಇದೇ ರೀತಿಯಾಗಿತ್ತು. ಬೆಳಿಗ್ಗೆ ಮಳಿಗೆ ಆರಂಭಕ್ಕೆ ಪೂಜೆ ಮಾಡಿ, ಡಿಎಸ್‌ಪಿ, ಅಗ್ನಿಶಾಮಕ ದಳದ ಅಧಿಕಾರಿಗಳು ಪರಿಶೀಲಿಸಿ ಹೋಗಿದ್ದರು. ಮಧ್ಯಾಹ್ನದ ವೇಳೆಗೆ ಬಂದ ಆದೇಶದಿಂದ ಏನು ಮಾಡಬೇಕು ಎಂಬುದು ತೋಚದಂತಾಗಿದೆ’ ಎನ್ನುತ್ತಾರೆ ಹಿರಿಯ ಪಟಾಕಿ ವ್ಯಾಪಾರಿ ಜಿ. ರಾಘವೇಂದ್ರರಾವ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT