ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಡಿಕೆಗಿಂತಲೂ ಮೀನು ಸಾಕಣೆ ಲಾಭದಾಯಕ

ಲಾಭದಾಯಕ ಜಾನುವಾರು, ಮತ್ಸ್ಯ ಸಾಕಣೆ ಮಾಹಿತಿ ಕಾರ್ಯಕ್ರಮದಲ್ಲಿ ಕೆ.ಜಿ. ಈಶ್ವರಪ್ಪ
Published : 6 ಡಿಸೆಂಬರ್ 2018, 15:44 IST
ಫಾಲೋ ಮಾಡಿ
Comments

ದಾವಣಗೆರೆ: ವಾಣಿಜ್ಯ ಬೆಳೆ ಅಡಿಕೆಯಲ್ಲಿ ಎರಡು ವರ್ಷಗಳಲ್ಲಿ ಬರುವ ಆದಾಯವನ್ನು ಅಷ್ಟೇ ಪ್ರದೇಶದಲ್ಲಿ ಮೀನು ಸಾಕಣೆ ಮಾಡಿದರೆ ಒಂದೇ ವರ್ಷದಲ್ಲಿ ಪಡೆಯಬಹುದು ಎಂದು ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸದಸ್ಯ ಕೆ.ಜಿ. ಈಶ್ವರಪ್ಪ ತಿಳಿಸಿದರು.

ಐಸಿಆರ್‌– ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಕೃಷಿ ತಂತ್ರಜ್ಞಾನ ಮಾಹಿತಿ ಸಪ್ತಾಹದಲ್ಲಿ ಗುರುವಾರ ‘ಲಾಭದಾಯಕ ಜಾನುವಾರು ಮತ್ತು ಮತ್ಸ್ಯ ಸಾಕಣೆ’ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳೆ ಬೆಳೆಯುವುದಕ್ಕಿಂತ ಕಡಿಮೆ ನೀರು ಮೀನು ಸಾಕಣೆಗೆ ಸಾಕಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಯಾವುದೇ ಬೆಳೆ ಬೆಳೆಯಲು ಬಳಸುವ ನೀರಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಹೊಂಡ ಮಾಡಿ ಮೀನು ಸಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

‘ದೇಸಿ ದನಗಳನ್ನು ಸಾಕುವ ಕಡೆಗೆ ಗಮನ ಹರಿಸಬೇಕು. ನಮ್ಮ ಹಿರಿಯರು ಕೃಷಿ ವಿಜ್ಞಾನಿಗಳಿದ್ದಂತೆ. ಅವರಲ್ಲಿ ಇರುವ ಜ್ಞಾನವನ್ನು ಪಡೆದು ಕೃಷಿ, ಹೈನುಗಾರಿಕೆ ಮಾಡಿದರೆ ಒಳಿತಾಗುತ್ತದೆ. ಆದರೆ ನಾವು ಹಿರಿಯರನ್ನು ದೂರ ಇಡುತ್ತಿದ್ದೇವೆ. ಅವರ ಜ್ಞಾನ ನಮಗೆ ದಕ್ಕುತ್ತಿಲ್ಲ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಕುಂದೂರು ಹನುಮಂತಪ್ಪ, ‘ರೈತರು ಕಾಲಕ್ಕೆ ಸರಿಯಾಗಿ ಬದಲಾಗಬೇಕು. ಹೊಸ ವಿಚಾರ, ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿಯಬೇಕು. ತಿಳಿದ ಬಳಿಕ ಸುಮ್ಮನಿದ್ದರೆ ಪ್ರಯೋಜನವಿಲ್ಲ ಅದನ್ನು ಜಾರಿಗೆ ತರಬೇಕು’ ಎಂದು ತಿಳಿಸಿದರು.

ಕೃಷಿ, ಜಾನುವಾರು ನಿರ್ವಹಣೆಯಲ್ಲಿ ಹೆಣ್ಣು ಮಕ್ಕಳು ಸದಾ ಮುಂದಿರುತ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವಿಕೆ ಬಹಳ ಕಡಿಮೆ ಇದೆ ಎಂದು ವಿಷಾದಿಸಿದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರದೀಪ್‌, ‘ಕೃಷಿ ಜತೆಗೆ ಕೃಷಿಭೂಮಿಗೆ ಅನುಗುಣವಾಗಿ ಕೃಷಿ ಹೊಂಡ ಮಾಡಿ. ಇದರಿಂದ ಅಂತರ್ಜಲ ಪ್ರಮಾಣವು ಶೇ 18ರಿಂದ ಶೇ 30ರವರೆಗೆ ಹೆಚ್ಚಳವಾಗುತ್ತದೆ. ಜತೆಗೆ ಕೃಷಿ ಇಳುವರಿಯೂ ಹೆಚ್ಚಾಗುತ್ತದೆ. ಹೊಂಡದಲ್ಲಿ ಮೀನು ಸಾಕಣೆ ಮಾಡಿದರೆ ಅದೂ ಆದಾಯವನ್ನು ಹೆಚ್ಚಿಸುತ್ತದೆ’ ಎಂದು ಮಾಹಿತಿ ನೀಡಿದರು.

ಕೃಷಿ ಜತೆಗೆ ಕುರಿ, ಮೇಕೆ, ಕುಕ್ಕುಟ, ಮತ್ಸ್ಯ ಸಾಕಣೆ ಮಾಡುವ ಮೂಲಕ ಸಮಗ್ರ ಕೃಷಿಯಿಂದ ಲಾಭ ಪಡೆಯಬಹುದು. ಮೀನು ಸಾಕಲು ಯಾರಾದರೂ ಆಸಕ್ತಿ ವಹಿಸಿ ಮುಂದೆ ಬಂದರೆ ಅವರಿಗೆ ಇಲಾಖೆಯಿಂದ ತಾಂತ್ರಿಕ ಕೌಶಲ ನೀಡಲಾಗುವುದು ಎಂದು ತಿಳಿಸಿದರು.

ಹಾಲು ಉತ್ಪಾದನೆ ಜಾಸ್ತಿ ಮಾಡಿದರೆ ಹಾಲು ದರ ಹೆಚ್ಚಳವಾಗುವುದಿಲ್ಲ. ಉತ್ಪಾದನೆ ಜಾಸ್ತಿ ಮಾಡುವುದರ ಜತೆಗೆ ಬೇಡಿಕೆಯನ್ನೂ ಹೆಚ್ಚಿಸಬೇಕು. ಹಾಲು ಬಳಕೆಯಿಂದ ಆರೋಗ್ಯಕ್ಕೆ ಏನು ಲಾಭ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಚನ್ನಗಿರಿ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್‌ ಮಲ್ಲಾಡದ್‌ ಸಲಹೆ ನೀಡಿದರು.

ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಉಮೇಶ, ರೋಟರಿ ಕ್ಲಬ್‌ ಸದಸ್ಯ ಬಿ.ಜಿ. ವೀರಣ್ಣ, ಚಿತ್ರದುರ್ಗ ಆಕಾಶವಾಣಿಯ ವೇದಮೂರ್ತಿ ಉಪಸ್ಥಿತರಿದ್ದರು. ಲಾಭದಾಯ ಜಾನುವಾರು ಸಾಕಣೆ ಬಗ್ಗೆ ಡಾ. ಗಿರಿರಾಜ್‌, ಹೈನುಗಾರಿಕೆಯಲ್ಲಿ ಸಮತೋಲನ ಆಹಾರ ಬಗ್ಗೆ ಡಾ. ಸಿದ್ದವೀರೇಶ್‌, ಹೈನುರಾಸುಗಳಲ್ಲಿ ಬಂಜೆತನ ನಿವಾರಣೆ ಬಗ್ಗೆ ಶ್ರೀನಿವಾಸ್‌ ಉಪನ್ಯಾಸ ನೀಡಿದರು.

ವಿಷಯ ತಜ್ಞ ಬಿ.ಒ. ಮಲ್ಲಿಕಾರ್ಜುನ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್‌. ದೇವರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಷಯ ತಜ್ಞ ಎಂ.ಜಿ. ಬಸವನ ಗೌಡ ವಂದಿಸಿದರು. ಡಾ. ಜಿ.ಕೆ. ಜಯದೇವಪ್ಪ ಕಾರ್ಯಕ್ರಮ ನೀರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT