ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಮನೆಗಳ್ಳತನ: ಅಂತರ್‌ಜಿಲ್ಲೆಯ ನಾಲ್ವರ ಸೆರೆ

Last Updated 6 ಜನವರಿ 2021, 3:26 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಸಂತೇಬೆನ್ನೂರು, ಮಾಯಕೊಂಡ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಐದು ಮನೆಗಳಿಗೆ ಯಾರೂ ಇಲ್ಲದ ಸಂದರ್ಭದಲ್ಲಿ ನುಗ್ಗಿ ಕಳವು ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ವರನ್ನು ಸಂತೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.

ಚನ್ನಗಿರಿ ತಾಲ್ಲೂಕು ಚಿಕ್ಕಬನ್ನೂರು ಗ್ರಾಮದ ಕೃಷ್ಣ ಅಲಿಯಾಸ್‌ ಖಾದರ್‌ ಕೃಷ್ಣ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರಿನ ಮೈಲಾರಿ ಅಲಿಯಾಸ್‌ ವಗ್ಗ ಮೈಲಾರಿ, ಕುಮಾರ ಅಲಿಯಾಸ್‌ ವಗ್ಗ ಕುಮಾರ ಬಂಧಿತ ಆರೋಪಿಗಳು.

ಮಾಜಿ ಸಂಸದ ಟಿ.ವಿ. ಚಂದ್ರಶೇಖರಯ್ಯ ಅವರ ನಲ್ಕುದುರೆ ಮನೆಯಿಂದ ₹ 2.80 ಲಕ್ಷ ಮೌಲ್ಯದ 4.6 ಕೆ.ಜಿ. ಬೆಳ್ಳಿಯ ಸೊತ್ತು ಕಳವಾಗಿದ್ದವು. ಅವುಗಳನ್ನು ಕಾಕನೂರು ಬಳಿ ಒಂದು ಮಾವಿನ ಮರದ ಮೇಲೆ ಇಟ್ಟಿದ್ದರು. ಆ ಮರವನ್ನು ಆಗಾಗ ಬಂದು ನೋಡಿಕೊಂಡು ಹೊಗುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಮಾಯಕೊಂಡ ಠಾಣೆ ವ್ಯಾಪ್ತಿಯಲ್ಲಿ ಎರಡು, ಅಜ್ಜಂಪುರ ಮತ್ತು ಹೊಳಲ್ಕೆರೆಯಲ್ಲಿ ತಲಾ ಒಂದು ಮನೆಗಳಲ್ಲಿ ಒಟ್ಟು ₹ 6 ಲಕ್ಷ ಮೌಲ್ಯದ 120 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ವಗ್ಗ ಮೈಲಾರಿ ಮತ್ತು ವಗ್ಗ ಕುಮಾರ ರೂಢಿಗತ ಕಳ್ಳರಾಗಿದ್ದು, ಈ ಹಿಂದೆ ಎರಡು ತಿಂಗಳು ಜೈಲಿನಲ್ಲಿದ್ದು ಬಿಡುಗಡೆಗೊಂಡಿದ್ದರು ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಎಸ್‌ಪಿ ರಾಜೀವ್‌ ಎಂ., ಚನ್ನಗಿರಿ ಡಿವೈಎಸ್‌ಪಿ ಪ್ರಶಾಂತ ಜಿ. ಮುನ್ನೋಳಿ ಸ್ಥಳಕ್ಕೆ ಭೇಟಿ ನೀಡಿದ್ದರು. ಸಿಪಿಐ ಆರ್.ಆರ್. ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ ಶಿವರುದ್ರಪ್ಪ ಎಸ್.ಮೇಟಿ, ಸಿಬ್ಬಂದಿ ರುದ್ರೇಶ ಎಂ., ರುದ್ರೇಶ ಎಸ್‍.ಆರ್., ನಿಂಗಣ್ಣ ಡಿ., ಧರ್ಮಪ್ಪ ಎಸ್., ಕೊಟ್ರೇಶ, ನಾಗರಾಜ ನಾಯ್ಕ, ರಂಗಸ್ವಾಮಿ, ಯಶವಂತ, ಯೋಗೇಶ, ರೇವಣಸಿದ್ದಪ್ಪ, ಸೋಮಶೇಖರ, ಬೆರಳುಮುದ್ರೆ ಘಟಕದ ಪಿಎಸ್‍ಐ ಮಂಜುನಾಥ, ಗಣಕಯಂತ್ರ ಘಟಕದ ರಾಘವೇಂದ್ರ ಮತ್ತು ತಂಡಗಳು ಮತ್ತು ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

‘ಪೊಲೀಸರಿಗೆ ತಿಳಿಸಿ ಮನೆಗೆ ಬೀಗ ಹಾಕಿ’

ಮನೆಗೆ ಬೀಗ ಹಾಕಿ ಹೋಗುವಾಗ ಪೊಲೀಸರಿಗೆ ತಿಳಿಸಬೇಕು. ರಾತ್ರಿ ಬೆಳಕಿನ ವ್ಯವಸ್ಥೆ ಮಾಡಿರಬೇಕು. ಪೂರ್ತಿ ಕತ್ತಲು ತುಂಬಿ ಮನೆಯಲ್ಲಿ ಯಾರೂ ಇಲ್ಲ ಎಂಬುದು ಗೊತ್ತಾಗುವಂತಿರಬಾರದು. ಮನೆಗೆ ಬೀಗ ಹಾಕಿದೆ ಎಂದು ಹೊರಗೆ ಗೊತ್ತಾಗಬಾರದು. ದೊಡ್ಡ ಕಾಂಪ್ಲೆಕ್ಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಬೇಕು. ಆಗ ಕಳವು ಪ್ರಕರಣ ನಿಯಂತ್ರಿಸಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ ನೀಡಿದರು.

ಚನ್ನಗಿರಿ ತಾಲ್ಲೂಕು ಎಂಬುದು ಮೂರು ಜಿಲ್ಲೆಗಳ ಗಡಿ ಆಗಿರುವುದರಿಂದ ಅಲ್ಲಿ ವಿಶೇಷ ನಾಕಾಬಂದಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT