ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ನಿಧನ

Published 16 ಮಾರ್ಚ್ 2024, 15:50 IST
Last Updated 16 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆಯ ‘ಮದರ್ ಥೆರೇಸಾ’ ಎಂದೇ ಹೆಸರಾಗಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ (90) ಶನಿವಾರ ನಿಧನರಾದರು.

ದಾವಣಗೆರೆ ಹಾಗೂ ಮಾಯಕೊಂಡ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವೆಯಾಗಿ, ವಿಧಾನಸಭೆಯ ಉಪಸಭಾಪತಿಯಾಗಿ, ಬೃಹತ್ ಮತ್ತು ಕೈಗಾರಿಕಾ ಸಚಿವೆಯಾಗಿದ್ದವರು. ವಿಧಾನಸಭೆ ಉಪಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಶಿಕ್ಷಣ ಸಚಿವೆಯಾಗಿದ್ದಾಗ 1ರಿಂದ 4ನೇ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ಪ್ರೌಢಶಾಲೆಗಳನ್ನು ಆರಂಭಿಸಿದ ಕೀರ್ತಿ ಇವರದು.

ಬೆಂಗಳೂರಿನ ಎಂ.ಎನ್.ರಾಮನ್ ಮತ್ತು ಸಾಕಮ್ಮ ದಂಪತಿ ಪುತ್ರಿ ನಾಗಮ್ಮನವರು 1951ರಲ್ಲಿ ದಾವಣಗೆರೆಯ ಉದ್ಯಮಿ, ಚನ್ನಗಿರಿ ರಂಗಪ್ಪನವರ ದ್ವಿತೀಯ ಪುತ್ರ ಸಿ. ಕೇಶವಮೂರ್ತಿ ಅವರನ್ನು ವಿವಾಹವಾಗಿ ದಾವಣಗೆರೆಗೆ ಬಂದರು. ಅತ್ತೆ ರಾಧಮ್ಮ ಅವರ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿದರು. ದಾವಣಗೆರೆಯಲ್ಲಿ 1955ರಲ್ಲಿ ವನಿತಾ ಸಮಾಜವನ್ನು ಆರಂಭಿಸಿ ಅದರ ಅಡಿಯಲ್ಲಿ 52 ಅಂಗ ಸಂಸ್ಥೆಗಳನ್ನು ಸ್ಥಾಪಿಸಿದರು.

ಇವರಿಗೆ ಪುತ್ರ ಡಾ. ಜಯಂತ್, ಸೊಸೆ ಹಾಗೂ ಮೊಮ್ಮಗಳು ಇದ್ದಾರೆ. ಭಾನುವಾರ ಪಿ.ಜೆ.ಬಡಾವಣೆಯ 3ನೇ ಮೇನ್‌ ನ ಅವರ ನಿವಾಸದಲ್ಲಿ 3 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಿದ್ದು, ಆ ಬಳಿಕ ವೈಕುಂಠಧಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT