ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಚತುರ್ಥಿ: ಜಿಲ್ಲೆಯಲ್ಲಿ ಸರಳ ಆಚರಣೆ

ಮನೆಯೊಳಗಿನ ಪೂಜೆಗೆ ಒತ್ತು ನೀಡಿದ ಜನರು l ಬಹುತೇಕ ಕಡೆಗಳಲ್ಲಿ ಒಂದೇ ದಿನಕ್ಕೆ ಮುಗಿದ ಗಣೇಶೋತ್ಸವ
Last Updated 12 ಸೆಪ್ಟೆಂಬರ್ 2021, 3:54 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕಿನ ಕರಿನೆರಳು ಗಣೇಶನ ಹಬ್ಬದ ಮೇಲೆ ಬಿದ್ದಿರುವುದು ಶುಕ್ರವಾರ ಸ್ಪಷ್ಟವಾಗಿ ಗೋಚರಿಸಿತು. ಬೀದಿ ಬೀದಿಗಳಲ್ಲಿ ಹಲವು ದಿನಗಳ ಕಾಲ ನಡೆಯುತ್ತಿದ್ದ ಗಣಪನ ಹಬ್ಬ ಈ ಬಾರಿ ಅದ್ದೂರಿಯಾಗಿ ನಡೆದಿಲ್ಲ. ಕೆಲವು ಕಡೆಗಳಲ್ಲಿ ಸಾರ್ವಜನಿಕವಾಗಿ ಗಣೇಶನ ಹಬ್ಬ ಆಚರಿಸಲಾಯಿತಾದರೂ ಒಂದೇ ದಿನಕ್ಕೆ ಸೀಮಿತಗೊಂಡಿತು. ಒಂದಕ್ಕಿಂತ ಹೆಚ್ಚು ದಿನ ಗಣೇಶನನ್ನು ಕೂರಿಸಿದ್ದಲ್ಲಿ ಕೂಡಾ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದೇ ಪೂಜೆಗೆ ಸೀಮಿತಗೊಂಡಿದೆ.

ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ಕತ್ತಲಾಗುತ್ತಿದ್ದಂತೆ ಗಣೇಶನ ವಿಸರ್ಜನೆ ಮಾಡುತ್ತಿರುವುದು ಮಾತ್ರ ಎಲ್ಲ ಕಡೆ ಕಂಡು ಬಂದವು. ನಗರದ 30 ಕಡೆಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಇಡಲಾಗಿದ್ದ ಟ್ರ್ಯಾಕ್ಟರ್‌ಗಳಲ್ಲಿ ಈ ಪುಟ್ಟ ಗಣೇಶಗಳನ್ನು ತಂದು ಹಾಕಿದರು.

ಅಲ್ಲೊಂದು ಇಲ್ಲೊಂದು ಸಾರ್ವಜನಿಕವಾಗಿ ಗಣೇಶನನ್ನು ಪೂಜಿಸಲಾಯಿತು. ಅಲ್ಲಿಯೂ ರಾತ್ರಿ 9 ಗಂಟೆಯ ನಂತರ ಯಾವುದೇ ಗದ್ದಲಗಳಿಲ್ಲದಂತೆ ಪೊಲೀಸರು ನೋಡಿಕೊಂಡರು. ಕೆಲವು ಕಡೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಹೈಸ್ಕೂಲ್‌ ಮೈದಾನದಲ್ಲಿ 8 ಅಡಿ ಗಣಪತಿಯನ್ನು ಕೂರಿಸಲು ಹಿಂದೂ ಮಹಾಗಣಪತಿ ಸಮಿತಿಯವರು ಮುಂದಾಗಿದ್ದರಿಂದ ಮಾರ್ಗಸೂಚಿಯ ಸಮಸ್ಯೆ ಎದುರಾಯಿತು. ನಾಲ್ಕಡಿಗಿಂತ ಎತ್ತರದ ವಿಗ್ರಹಗಳನ್ನು ಕೂರಿಸಬಾರದು ಎಂದು ಮಾರ್ಗಸೂಚಿ ಇದ್ದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಕೊನೇ ಕ್ಷಣದಲ್ಲಿ 8 ಅಡಿಯ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿತು.

ಸಾಸ್ವೆಹಳ್ಳಿ ವರದಿ: ಕೊರೊನಾ ನಡುವೆ ಸಾರ್ವಜನಿಕರು ಸಡಗರದಿಂದ ಗಣೇಶನನ್ನು ಬರಮಾಡಿಕೊಂಡರು. ವಿಧಿ ವಿಧಾನಗಳೊಂದಿಗೆ ಗೌರಿ ಮತ್ತು ಗಣೇಶನಿಗೆ ಪೂಜೆ ಸಲ್ಲಿಸಿದರು.

‘ಹೋಬಳಿ ವ್ಯಾಪ್ತಿಯ 26 ಗ್ರಾಮಗಳಲ್ಲಿ 40ರಿಂದ 50 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಗ್ರಾಮದ ದೇವಸ್ಥಾನ, ಸರ್ಕಲ್, ಮುಖ್ಯಬೀದಿ ಹಾಗೂ ಕೇರಿಗಳಲ್ಲಿ ಪ್ರತಿಷ್ಠಾಪಿಸಿದ್ದು, ಮೊದಲ ದಿನವೆ ಬೀರಗೊಂಡನಹಳ್ಳಿ, ಕ್ಯಾಸಿನಕೆರೆ, ಮಾವಿನಕೋಟೆ, ತ್ಯಾಗದಕಟ್ಟೆ, ಚನ್ನೇನಹಳ್ಳಿ, ಲಿಂಗಾಪುರ ಈ 6 ಗ್ರಾಮಗಳ ಗಣಪತಿಗಳನ್ನು ವಿಸರ್ಜನೆ ಮಾಡಲಾಗಿದೆ’ ಎಂದು ಸಾಸ್ವೆಹಳ್ಳಿ ಉಪಠಾಣೆ ಎಎಸ್‍ಐ ಟಿ ಪರಶುರಾಮ್ ತಿಳಿಸಿದರು.

‘ಭಾನುವಾರ 20 ರಿಂದ 30 ವಿಸರ್ಜ ನೆಗೊಳ್ಳಲಿವೆ. ಐದನೇ ದಿನಕ್ಕೆ ಹೋಬಳಿ ವ್ಯಾಪ್ತಿಯ ಎಲ್ಲಾ ಗಣಪತಿಗಳು ವಿಸರ್ಜನೆಯಾಗಲಿವೆ. ಸಾಸ್ವೆಹಳ್ಳಿ ಹೋಬಳಿ ಸೂಕ್ಷ ಪ್ರದೇಶವಾಗಿದ್ದು, ಎಲ್ಲಿಯೂ ಗದ್ದಲಗಳಿಗೆ ಅವಕಾಶ ನೀಡದೇ ಎಲ್ಲಾ ಗ್ರಾಮಗಳಿಗೂ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ’ ಎಂದರು.

ಚನ್ನಗಿರಿ ವರದಿ: ‌ ಪಟ್ಟಣದ ಮನೆ ಹಾಗೂ ಬೀದಿಗಳು ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಹಲವು ಬೀದಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಭಕ್ತಿ, ಭಾವದಿಂದ ವಿಘ್ನವನ್ನು ನಿವಾರಿಸುವಂತೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಹಿಂದೂ ಏಕತಾ ಗಣಪತಿ, ಬೀರಲಿಂಗೇಶ್ವರ ದೇವಸ್ಥಾನ, ವಿರಾಟ್ ಹಿಂದೂ ಗಣಪತಿ ಸಮಿತಿಗಳಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಸಾಂಸ್ಕೃತಿಕ ಹಾಗೂ ಮೆರವಣಿಗೆಯನ್ನು ಸರ್ಕಾರ ನಿಷೇಧ ಮಾಡಿರುವುದರಿಂದ ಸರಳವಾಗಿ ಗಣೇಶನ ಮೂರ್ತಿಗಳನ್ನು ತಂದು ಪೂಜೆ ಸಲ್ಲಿಸಿ, ಪ್ರತಿಷ್ಠಾಪನೆ ಮಾಡಲಾಯಿತು. ಐದನೇ ದಿನ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತದೆ.

ಈ ಬಾರಿ ಹೂವು, ಹಣ್ಣುಗಳ ಬೆಲೆ ಕಡಿಮೆ ಇದ್ದದ್ದರಿಂದ ಯಥೇಚ್ಛ ಪ್ರಮಾಣದಲ್ಲಿ ಹೂವುಗಳನ್ನು ತಂದು ಗಣಪತಿಯನ್ನು ಅಲಂಕರಿಸಲಾಗಿತ್ತು. ಈ ಬಾರಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಉತ್ಸಾಹದಿಂದ ಮನೆಗಳಲ್ಲಿ ಗಣಪತಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಮಲೇಬೆನ್ನೂರು ವರದಿ: ಕೊರೊನಾ ಕಾರಣದಿಂದಾಗಿ ಪಟ್ಟಣದಲ್ಲಿ ಸಾಂಪ್ರದಾ ಯಿಕವಾಗಿ ನಾಗರಿಕರುಶುಕ್ರವಾರ ಆಚರಿಸಿದರು.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ದಿನ ಯಾವುದೇ ಮೆರವಣಿಗೆ ನಡೆಯಲಿಲ್ಲ. ವಾದ್ಯವೃಂದ, ತಮಟೆ, ಡೊಳ್ಳು, ನಾಸಿಕ್ ಡೋಲು, ಡಿಜೆ ಪಠಾಕಿ ಸದ್ದು ಕೇಳಿಸಲಿಲ್ಲ.

ಹೆಚ್ಚಿನ ಸಂಖ್ಯೆ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿಲ್ಲ. ವಂತಿಗೆ ವಸೂಲಿಗೂ ಕಡಿವಾಣ ಬಿದ್ದಿತ್ತು. ಹೂ ಹಣ್ಣು, ಬಾಳೆಕಂಬ, ತಳಿರು ತೋರಣ ಶೃಂಗಾರ, ಗಂಟೆ, ಜಗಟೆ, ಶಂಖವಾದ್ಯ ಕೊಂಬು ಕಹಳೆ ವಾದ್ಯದ ಶಬ್ದ ಮಾತ್ರ ಸಣ್ಣದಾಗಿ ಕೇಳಿಸಿತು.

ಪೊಲೀಸ್ ಇಲಾಖೆ ಕಟ್ಟುಪಾಡು ಪಾಲಿಸಿದ್ದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT