ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಾಂಧತೆಯಿಂದ ಹೊರಬನ್ನಿ: ಸಾಣೇಹಳ್ಳಿ ಶ್ರೀ ಸಲಹೆ

Published 27 ಅಕ್ಟೋಬರ್ 2023, 4:47 IST
Last Updated 27 ಅಕ್ಟೋಬರ್ 2023, 4:47 IST
ಅಕ್ಷರ ಗಾತ್ರ

ದಾವಣಗೆರೆ: ‘ಧರ್ಮಾಂಧತೆ ಮನುಷ್ಯನನ್ನು ಅಜ್ಞಾನಿ, ಭಯೋತ್ಪಾದಕರನ್ನಾಗಿ ಮಾಡುತ್ತಿದ್ದು, ಮನುಷ್ಯ ಧರ್ಮಾಂಧತೆಯಿಂದ ಹೊರಬರಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಪ್ರವಾದಿ (ಸ) ಜೀವನ ಸಂದೇಶ ಅಭಿಯಾನ–2023, ವಿಚಾರಗೋಷ್ಠಿ ಮತ್ತು ಸಾಹಿತಿ ಯೋಗೇಶ್ ಮಾಸ್ಟರ್ ಅವರ ‘ನನ್ನರಿವಿನ ಪ್ರವಾದಿ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಎಲ್ಲರೂ ಒಂದಾಗಿ ಬಾಳಬೇಕು, ಅಹಂಕಾರ ತೊಡೆದುಹಾಕಿ, ಪ್ರೀತಿ, ಹೊಂದಾಣಿಕೆಯಿಂದ ಬಾಳಬೇಕು ಎಂಬುದು ಎಲ್ಲಾ ಧರ್ಮಗಳ ಮೂಲ ಆಶಯ. ಈ ನಾಡಿನ ಸಂತರ ಸಂದೇಶಗಳನ್ನು ನಾಡಿನ ಜನ ಚಾಲ್ತಿಯಲ್ಲಿ ತಂದಿದ್ದರೆ, ಈ ರೀತಿ ಸಮಾವೇಶ ಮಾಡುವ ಅಗತ್ಯವಿರಲಿಲ್ಲ. ಮನುಷ್ಯ ಬೌದ್ಧಿಕವಾಗಿ ಬೆಳೆಯುತ್ತಿದ್ದಾನೆ ಹೊರತು ನೈತಿಕವಾಗಿ ಅಧಃಪತನ ಹೊಂದುತ್ತಿದ್ದಾನೆ. ಮನುಷ್ಯನಿಗೆ ಬೌದ್ಧಿಕ, ನೈತಿಕ ಬೆಳವಣಿಗೆ ಎರಡು ಬೇಕು ಅವುಗಳಿಗೆ ಪೂರಕವಾಗಿ ಧರ್ಮದ ಅರಿವಿರಬೇಕು’ ಎಂದರು.

‘ಧರ್ಮ ವ್ಯಾಪಾರವಾದಾಗ ಸಮಾಜವನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಒಬ್ಬರನ್ನೊಬ್ಬರು, ಒಪ್ಪಿ, ಅಪ್ಪಿಕೊಳ್ಳುವಂತಹ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ಎಲ್ಲ ಧರ್ಮಗಳು ಶ್ರೇಷ್ಠ, ಸಕಲ ಜೀವಾತ್ಮಗಳ ಒಳಿತನ್ನು ಸಂರಕ್ಷಣೆ ಮಾಡುವ ಭಾವನೆ ಬಂದರೆ ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದೇವೆ ಎಂದು ಅರ್ಥ. ಇಲ್ಲದಿದ್ದರೆ ಧರ್ಮದಿಂದ ದೂರ ಹೋಗುತ್ತೇವೆ ಎಂದು ಅರ್ಥ’ ಎಂದು ವಿಶ್ಲೇಷಿಸಿದರು. 

‘ಬರವಣಿಗೆ ಭ್ರಮೆಯನ್ನು ಹುಟ್ಟಿಸಿ ಅಜ್ಞಾನಿಯನ್ನಾಗಿ ಮಾಡಬಾರದು. ಸತ್ಯವನ್ನು ಹೇಳುವ, ಜ್ಞಾನ ಅರಿವನ್ನು ನೀಡುವಂತೆ ಇರಬೇಕು. ಮಿದುಳು ಹಾಗೂ ಹೃದಯದ ಅರಿವಿನಲ್ಲಿ ಹೃದಯವೇ ಮುಖ್ಯ. ಧಾರ್ಮಿಕ ಆಚಾರ–ವಿಚಾರಗಳು ಅಂತರ್ಗತವನ್ನಾಗಿಸಲು ಅರಿವನ್ನು ವಿಸ್ತರಿಸಿಕೊಳ್ಳಬೇಕು’  ಎಂದು ಲೇಖಕ ಯೋಗೇಶ್ ಮಾಸ್ಟರ್ ಅಭಿಪ್ರಾಯಪಟ್ಟರು.

‘ಜೀವನದಲ್ಲಿ ಮೌಲ್ಯಗಳು ಇರಬೇಕು. ಇಲ್ಲದಿದ್ದರೆ ಮರುಭೂಮಿ ಇದ್ದಂತೆ. ಪ್ರವಾದಿ ಮಹಮ್ಮದ್ ಅವರು ಬದುಕಿನ ಮೌಲ್ಯವನ್ನು ಕಲಿಸಿಕೊಟ್ಟರು. ಜಮಾ ಅತೆ ಇಸ್ಲಾಮ್ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ’ ಎಂದು ಜಮಾ ಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞ ಹೇಳಿದರು.

ಇನ್‌ಸೈಟ್ ಐಎಎಸ್ ಸಂಸ್ಥಾಪಕ ವಿನಯ್‌ಕುಮಾರ್ ಜಿ.ಬಿ, ಮುಖಂಡರಾದ ಎಂ.ಗುರುಸಿದ್ಧ ಸ್ವಾಮಿ, ಆವರಗೆರೆ ರುದ್ರಮುನಿ, ಹೆಗ್ಗೆರೆ ರಂಗಪ್ಪ, ಎಚ್.ಮಲ್ಲೇಶ್, ಪ್ರೊ.ದಾದಾಪೀರ್ ನವಿಲೇಹಾಳ್, ಸರಸ್ವತಿ ಕೆ. ಇತರರು ಇದ್ದರು.

ಎಲ್ಲಾ ಧರ್ಮಗಳಲ್ಲೂ ಆಚರಣೆಗಳು ಇವೆ. ಆದರೆ ಧರ್ಮಗಳ ಸಾರವನ್ನು ಅರಿತುಕೊಂಡು ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಧರ್ಮ ಚೌಕಟ್ಟಿಗೆ ಸೀಮಿತವಾಗದೇ ವಿಶ್ವಪ್ರಜ್ಞೆ ಆಗಬೇಕು
ಪ್ರೊ.ಎ.ಬಿ.ರಾಮಚಂದ್ರಪ್ಪ ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT