ಶನಿವಾರ, ಡಿಸೆಂಬರ್ 7, 2019
22 °C

ದಾವಣಗೆರೆ | ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬೆಣ್ಣೆ ದೋಸೆ ನಗರಿಯಲ್ಲಿ ಶನಿವಾರ ಎಲ್ಲೆಡೆ ಹಬ್ಬದ ಸಂಭ್ರಮ. ಕೇಸರಿ ಧ್ವಜಗಳ ಹಾರಾಟ. ಯುವಕ–ಯುವತಿಯರ ನರ್ತನ, ಅದ್ದೂರಿ ಮೆರವಣಿಗೆ...

ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ವಿಶ್ವ ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಕಂಡ ದೃಶ್ಯಗಳಿವು.

20 ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ವಿಶ್ವ ಹಿಂದೂ ಮಹಾಗಣಪತಿಯನ್ನು ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಭವ್ಯ ಶೋಭಾಯಾತ್ರೆ ನಡೆಸಿ ಸಂಜೆ ಬಾತಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಹಿಂದೂ ಮಹಾ ಗಣಪತಿ ಸಂಘಟನೆಯ ಮುಖ್ಯಸ್ಥ ಜೊಳ್ಳಿ ಗುರು, ಪಾಲಿಕೆ ಮಾಜಿ ಸದಸ್ಯ ಬಸವರಾಜು ವಿ. ಶಿವಗಂಗಾ ಅವರು ಗಣಪತಿ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿ ಬೆಳಿಗ್ಗೆ 11ಕ್ಕೆ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಶ್ರೀಶೈಲ ಮಠದ ಆನೆ ಮುಂದೆ ಸಾಗಿತು. ಆನಂತರ ಅಂಬೇಡ್ಕರ್‌, ಗೌತಮ ಬುದ್ಧ, ಬಸವಣ್ಣ, ಛತ್ರಪತಿ ಶಿವಾಜಿ, ಕನಕದಾಸ, ವಾಲ್ಮೀಕಿ, ಜಗದ್ಗುರು ರೇಣುಕರ ಉತ್ಸವ ಮೂರ್ತಿಗಳು ಸಾಗಿದವು. ಚೆಂಡೆ, ಡೊಳ್ಳು ಕುಣಿತ ಸೇರಿ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಹೈಸ್ಕೂಲ್ ಮೈದಾನದಿಂದ ಆರಂಭವಾದ ಮೆರವಣಿಗೆ ಎ.ವಿ.ಕೆ. ಕಾಲೇಜು ರಸ್ತೆಗೆ ಬರುತ್ತಿದ್ದಂತೆಯೇ ಅಂಗಡಿಗಳ ಮಾಲೀಕರು, ಮನೆಯವರು ಕಟ್ಟಡಗಳ ಮೇಲಿನಿಂದ ಗಣೇಶನ ಮೂರ್ತಿಗೆ ಪುಷ್ಪವೃಷ್ಟಿ ಮಾಡಿದರು. ಅಲ್ಲಿದ್ದ ಕಾಲೇಜು ವಿದ್ಯಾರ್ಥಿಗಳೂ ಮೆರವಣಿಗೆಗೆ ಸೇರಿಕೊಂಡರು.

ಮಾರ್ಗದುದ್ದಕ್ಕೂ ಜನ ಕಟ್ಟಡವನ್ನೇರಿ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಮಹಡಿ ಮೇಲಿಂದಲೇ ಶೋಭಾಯಾತ್ರೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯ ಕಂಡು ಬಂತು. ಯುವಕ–ಯುವತಿಯರು ಸೆಲ್ಪಿ ತೆಗೆದುಕೊಳ್ಳುತ್ತಿದ್ದರು.

ಚೇತನಾ ಹೋಟೆಲ್ ರಸ್ತೆ ತಲುಪುತ್ತಿದ್ದಂತೆ ಡಿ.ಜೆ. ಅಬ್ಬರ ಜೋರಾಯಿತು. ಆನಂತರ ಅಂಬೇಡ್ಕರ್ ವೃತ್ತ ತಲುಪಿ ಹದಡಿ ರಸ್ತೆಯ ಮೂಲಕ ಜಯದೇವ ವೃತ್ತದಲ್ಲಿ ಸಮಾವೇಶಗೊಂಡಿತು. ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಜೀಪಿನಲ್ಲಿ ಮೆರವಣಿಗೆ ನಡೆಸಿದರು. ಮಾಜಿ ಶಾಸಕ ಪಿ.ಬಿ. ಹರೀಶ್‌ ಸೇರಿ ಹಲವರು ನೃತ್ಯ ಮಾಡಿದರು.

ಬಳಿಕ ಲಾಯರ್ ರಸ್ತೆಯ ಮೂಲಕ ಪಿ.ಬಿ. ರಸ್ತೆ ತಲುಪಿತು. ಎಂ.ಜಿ. ವೃತ್ತ, ‍ಹಳೇ ಬಸ್‌ ನಿಲ್ದಾಣ, ದೇವರಾಜ ಅರಸು ವೃತ್ತ, ರೈಲುನಿಲ್ದಾಣ, ಪಿ.ಜೆ. ಹೋಟೆಲ್‌ ಕ್ರಾಸ್‌, ರಾಣಿ ಚೆನ್ನಮ್ಮ ವೃತ್ತ (ಅರುಣಾ ಸರ್ಕಲ್‌) ಕೋರ್ಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಸಾಗಿ, ಬಾತಿ ಕೆರೆಯಲ್ಲಿ ಮೂರ್ತಿ ವಿಸರ್ಜಿಸಲಾಯಿತು.

ಮೆರವಣಿಗೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತ್ಯೇಕ ತಂಡಗಳನ್ನು ರಚಿಸಿ ಅದಕ್ಕೊಂದು ಸಂಖ್ಯೆಯನ್ನೂ ನೀಡಲಾಗಿತ್ತು. ಮೆರವಣಿಗೆಯುದ್ದಕ್ಕೂ ಡ್ರೋನ್‌ ಕ್ಯಾಮೆರಾ ಮೂಲಕ ಕಣ್ಗಾವಲೂ ಕಾಯಲಾಗುತ್ತಿತ್ತು. ಶೋಭಾಯಾತ್ರೆಯ ಪ್ರಯುಕ್ತ ರಸ್ತೆಗಳ ಸಂಚಾರವನ್ನು ಬದಲಿಸಿದ್ದರಿಂದ ಸವಾರರು ಕಿರಿ ಕಿರಿ ಅನುಭವಿಸಬೇಕಾಯಿತು.

ಮಜ್ಜಿಗೆ, ತಿಂಡಿ ಪೊಟ್ಟಣ ವಿತರಣೆ

ಶೋಭಾಯಾತ್ರೆಗೆ ಬಂದಿದ್ದವರಿಗೆ ನಾಲ್ಕು ಕಡೆ ಮಜ್ಜಿಗೆ, ಪಾನಕ, ನೀರು ಹಾಗೂ ಚಾಕೊಲೇಟ್‌ಗಳನ್ನು ವಿತರಿಸಲಾಯಿತು. ಹೈಸ್ಕೂಲ್ ಮೈದಾನ, ನಗರದ ಜಯದೇವ ವೃತ್ತ, ಬಿಎಸ್‌ಸಿ ಚನ್ನಬಸಪ್ಪ ಮಳಿಗೆಯ ಎದುರು ಪಾನಕ, ಮಜ್ಹಿಗೆ ಹಾಗೂ ನೀರನ್ನು ವಿತರಿಸಲಾಯಿತು. ಜಯದೇವ ವೃತ್ತ, ಅಂಬೇಡ್ಕರ್ ವೃತ್ತದ ಬಳಿ ತಿಂಡಿ ಪೊಟ್ಟಣಗಳನ್ನು ಕೊಡಲಾಯಿತು.

ಮೆರವಣಿಗೆ ಸಂಚರಿಸುವ ಮಾರ್ಗಗಳಲ್ಲಿ ಕಡಲೇಕಾಯಿ, ನೀರು, ಐಸ್‌ಕ್ರೀಂ, ಸೌತೇಕಾಯಿ, ಹಣ್ಣು, ವಿವಿಧ ತಿಂಡಿಗಳು ಹಾಗೂ ಕೇಸರಿ ಶಾಲ್‌ಗಳ ಮಾರಾಟ ಜೋರಾಗಿತ್ತು.

ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು

ಶೋಭಾಯಾತ್ರೆಯುದ್ದಕ್ಕೂ ಡಿ.ಜೆ ಹಾಡಿಗೆ ನೃತ್ಯ ಮಾಡುತ್ತಿದ್ದುದು ಆಕರ್ಷಕವಾಗಿತ್ತು. ಯುವಕರು ಹಾಗೂ ಯುವತಿಯರಿಗಾಗಿ ಪ್ರತ್ಯೇಕ ಡಿ.ಜೆ. ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಆರಂಭದಿಂದ ವಿಸರ್ಜನೆಯವರೆಗೂ ಸಿನಿಮಾ ಹಾಡುಗಳಿಗೆ ಕುಣಿದು ಸಂಭ್ರಮಿಸಿದರು.

ಮಕ್ಕಳು, ಯುವಕರು, ವಯಸ್ಕರೆನ್ನದೇ ಎಲ್ಲರೂ ಹಾಡಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಯುವತಿಯರೂ ತಾವೇನೂ ಕಡಿಮೆ ಇಲ್ಲ ಎಂಬಂತೆ ಸ್ಟೆಪ್ ಹಾಕುವ ಮೂಲಕ ಶೋಭಾಯಾತ್ರೆಗೆ ಇನ್ನಷ್ಟು ಕಳೆ ತಂದರು.

ಎ.ವಿ.ಕೆ ಕಾಲೇಜು ರಸ್ತೆಯಲ್ಲಿ ಕೆಲವು ಯುವತಿಯರು ರಸ್ತೆ ನಡುವೆ ಬಂದು ಹಾಡಿಗೆ ಹೆಜ್ಜೆ ಹಾಕಿದರು. ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳಲು ಯುವಕರು ಪೈಪೋಟಿಗಿಳಿದಿದ್ದರು. ಮಹಿಳಾ ಪೊಲೀಸರು ಯುವಕರು ಬಾರದಂತೆ ನಿಯಂತ್ರಿಸುತ್ತಿದ್ದರು.

ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಕಿಟಕಿಗೆ ಅಂಟಿಕೊಂಡು ಮೆರವಣಿಗೆ ಸಾಗುವುದನ್ನು ತದೇಕ ಚಿತ್ತದಿಂದ ನೋಡಿದರು. ಮತ್ತೆ ಕೆಲವರು ಚಾವಣಿಯನ್ನೇರಿ ವೀಕ್ಷಿಸಿದರು.

‘ಆಕಸ್ಮಿಕ’ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ‘ಟಗರು’ ಚಿತ್ರದ ‘ಟಗರು ಬಂತು ಟಗರು’, ಕೆಜಿಎಫ್‌ನ ಚಿತ್ರದ ‘ಜೋಕೆ ನಾನು ಬಳ್ಳಿಯ ಮಿಂಚು’, ಕನಕ ಚಿತ್ರದ ‘ಎಣ್ಣೆ ನಮ್ದು ಊಟ ನಿಮ್ದು’, ರ‍್ಯಾಂಬೊ–2 ಚಿತ್ರದ ‘ಚುಟು ಚುಟು ಅಂತೈತಿ’ ಹಾಡುಗಳಿಗೆ ಯುವಕರು ಹುಚ್ಚೆದ್ದು ಕುಣಿದರು.

ನೃತ್ಯ ಮಾಡುತ್ತಿದ್ದ ಮಕ್ಕಳನ್ನು ಮೇಲಕ್ಕೆ ಹಾರಿಸಿ ಕ್ಯಾಚ್ ಹಿಡಿಯುವುದು, ಹೆಗಲ ಮೇಲೆ ಕೂರಿಸಿಕೊಂಡು ಕುಣಿಯುತ್ತಿದ್ದುದು ಕಂಡುಬಂತು.

ಅಂಬೇಡ್ಕರ್ ವೃತ್ತದ ಬಳಿ ಬಂದಾಗ ಮಸೀದಿಯಲ್ಲಿ ನಮಾಜಿನ ಶಬ್ದ ಕೇಳಿ ಬಂತು. ಕೆಲಕಾಲ ಡಿ.ಜೆ.ಯನ್ನು ಸ್ಥಗಿತಗೊಳಿಸಿ ಮತ್ತೆ ಕುಣಿತ ಆರಂಭಿಸಿದರು. ‘ಬನಾಯೇಂಗೆ ಮಂದಿರ್’ ಹಾಡು ಕೂಡ ಆಗಾಗ ಅನುರಣಿಸಿತು.

ಎಲ್ಲೆಡೆ ಕೇಸರಿಮಯ

ನಗರದ ವೃತ್ತಗಳು ಫ್ಲೆಕ್ಸ್‌ಗಳು ಹಾಗೂ ಬಂಟಿಂಗ್ಸ್‌ಗಳಿಂದ ತುಂಬಿ ಹೋಗಿದ್ದವು. ಯುವಕರು ಕೇಸರಿ ಧ್ವಜಗಳನ್ನು ಹಿಡಿದುಕೊಂಡು ನಗರದಲ್ಲಿ ಸಂಚರಿಸಿರು. ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದರು. ತಲೆಯಲ್ಲಿ ರುಮಾಲು, ಕೇಸರಿ ಬಣ್ಣದ ಶರ್ಟ್‌ಗಳು, ಕುತ್ತಿಗೆಯಲ್ಲಿ ಟವಲ್ ಸುತ್ತಿಕೊಂಡು ಯುವಕರು ನರ್ತಿಸಿದರು. ಮುಖಕ್ಕೆ ಬಣ್ಣ ಬಳಿದುಕೊಂಡು ಕುಣಿದು ಸಂಭ್ರಮಿಸಿದರು.

ಗುಂಡಿ ಸರ್ಕಲ್, ಅಂಬೇಡ್ಕರ್ ಸರ್ಕಲ್‌ಗಳನ್ನು ಕೇಸರಿ ಬಟ್ಟೆಗಳ ತೋರಣಗಳಿಂದ ಶೃಂಗರಿಸಲಾಗಿತ್ತು. ಮೆರವಣಿಗೆ ಮಾರ್ಗದುದ್ದಕ್ಕೂ ರಸ್ತೆಗಳಲ್ಲಿ ಕೇಸರಿ ಬಟ್ಟೆಗಳಿಂದ ಕಮಾನುಗಳನ್ನು ನಿರ್ಮಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು