ಮಂಗಳವಾರ, ಅಕ್ಟೋಬರ್ 27, 2020
20 °C
ಅರ್ಪಿತಾಗೆ ಕಲಿಯುವ ಕನಸು, ಹೆತ್ತವರಿಗೆ ಮದುವೆ ಮಾಡಿಸಲು ಮನಸು

ಗಾರೆ ಮೇಸ್ತ್ರಿ ಮಗಳಿಗೆ ಚಿನ್ನದ ಪದಕ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಗಾರೆ ಮಾಡುವ ಮೇಸ್ತ್ರಿಯ ಮಗಳು ಬಿಪಿಎಡ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಎಂಪಿಎಡ್‌ ಮಾಡಿ ಯಾವುದಾದರೂ ಕಾಲೇಜಿಗೆ ಸೇರಿ ಕ್ರೀಡಾಳುಗಳನ್ನು ತಯಾರಿಸುವ ಕನಸು ಮಗಳದ್ದಾದರೆ, ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಬಿಡಬೇಕು ಎಂಬುದು ಹೆತ್ತವರ ಅಪೇಕ್ಷೆಯಾಗಿದೆ.

ಅರ್ಪಿತಾ ವಿ.ಕೆ. ಎನ್ನುವ ಯುವತಿಯೇ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದವರು. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಸಿ.ಎಸ್‌.ಪುರ ಹೋಬಳಿ ವಿ.ಜಿ. ಪಾಳ್ಯದ ಕುಮಾರ್‌–ಸರಸಮ್ಮ ದಂಪತಿಯ ಇಬ್ಬರು ಮಕ್ಕಳಲ್ಲಿ ಎರಡನೇಯವರೇ ಈ ಹುಡುಗಿ.

‘ಕಬಡ್ಡಿ ಮತ್ತು ಹ್ಯಾಂಡ್‌ಬಾಲ್‌ ನನ್ನ ಇಷ್ಟದ ಕ್ರೀಡೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದೆ. ಆದರೆ ಭಾಗವಹಿಸಲು ಆಗಿರಲಿಲ್ಲ. ರಿಲೆ ಸಹಿತರ ಎಲ್ಲ ಆಟ ಮತ್ತು ಓಟಗಳಲ್ಲಿ ಆಸಕ್ತಿ ಇದ್ದಿದ್ದರಿಂದ ಬಿಪಿಎಡ್‌ಗೆ ಸೇರಿದೆ. ಮುಂದೆ ಅಪ್ಪ ಅಮ್ಮನನ್ನು ಒಪ್ಪಿಸಿ ಹೇಗಾದರೂ ಎಂಪಿಎಡ್‌ ಮಾಡಬೇಕು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕಷ್ಟಪಟ್ಟು ಓದಿಸಬಹುದು. ಆದರೆ ಕೆಲಸ ಸಿಗುವುದು ಇನ್ನೂ ಕಷ್ಟ. ಅದಕ್ಕಾಗಿ ಮನೆಯಲ್ಲಿ ಮದುವೆ ಮಾಡಿಸಲು ಮುಂದಾಗಿದ್ದಾರೆ ಎಂದು ವಿವರಿಸಿದರು.

‘ತುಂಬಾ ಓದಿಸುವಷ್ಟು ಆರ್ಥಿಕ ಸ್ಥಿತಿಯಲ್ಲಿ ನಾನಿಲ್ಲ. ಅಲ್ಲದೇ ದೈಹಿಕ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಕರೆಯುತ್ತಲೂ ಇಲ್ಲ. ಹಾಗಾಗಿ ಮದುವೆ ಮಾಡಿಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯುತ್ತದೆ. ಮುಂದೆ ಓದಿಸುವುದು ಬಿಡುವುದು ಆ ಹುಡುಗನಿಗೆ ಬಿಟ್ಟದ್ದು’ ಎನ್ನುವುದು ಕುಮಾರ್‌ ಅವರ ಅಭಿಪ್ರಾಯ.

‘ಅಮ್ಮ ಗೃಹಿಣಿ. ಅಪ್ಪ ಗಾರೆ ಕೆಲಸ ಮಾಡಿ ನಮ್ಮನ್ನು ಸಾಕಿದ್ದಾರೆ. ನನಗೂ ಬಿಎಡ್‌ ಓದಿಸಿ ಮದುವೆ ಮಾಡಿದ್ದಾರೆ. ಈಗ ಅರ್ಪಿತಾಳಿಗೂ ಮದುವೆ ಮಾಡಿಸಲು ಮನಸು ಮಾಡಿದ್ದಾರೆ. ಮುಂದೇನಾಗುತ್ತದೆಯೋ ನೋಡಬೇಕು’ ಎನ್ನುತ್ತಾರೆ ಅರ್ಪಿತಾ ಅವರ ಅಕ್ಕ ಅಶ್ವಿನಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.