ಶುಕ್ರವಾರ, ಜುಲೈ 1, 2022
27 °C
ಹಕ್ಕುಪತ್ರ ವಿತರಣೆ

ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಸರ್ಕಾರ: ಮಾಡಾಳ್ ವಿರೂಪಾಕ್ಷಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದ್ದೇನಹಳ್ಳಿ(ಚನ್ನಗಿರಿ): ‘ಇಡೀ ರಾಜ್ಯದಲ್ಲಿಯೇ ಅರಣ್ಯ ಹಾಗೂ ಕಂದಾಯ ಭೂಮಿಗಳಲ್ಲಿ ಸಾಗುವಳಿ ಮಾಡಿಕೊಂಡಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡುತ್ತಿರುವ ಪ್ರಥಮ ತಾಲ್ಲೂಕು ನಮ್ಮದು. ಹಂತಹಂತವಾಗಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ನಮ್ಮ ಗುರಿಯಾಗಿದೆ. ಯಾವುದೇ ಕಾರಣಕ್ಕೂ ರೈತರ ಮಧ್ಯವರ್ತಿಗಳಿಗೆ ಹಣವನ್ನು ಕೊಡಬಾರದು’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಮೌದ್ಗಲ್ ಆಂಜನೇ ಸ್ವಾಮಿ ಸಮುದಾಯ ಭವನದಲ್ಲಿ ಭೂ ಹಕ್ಕುದಾರರ ವೇದಿಕೆ ಹಾಗೂ ಸ್ಫೂರ್ತಿ ಸಂಸ್ಥೆಯ ಸಹಯೋಗದಲ್ಲಿ ಮಂಗಳವಾರ ನಡೆದ ಬಗರ್ ಹುಕುಂ ಸಾಗುವಳಿದಾರರ ತಾಲ್ಲೂಕು ಮಟ್ಟದ ಜಾಗೃತಿ ಸಮಾವೇಶ ಹಾಗೂ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಹಕ್ಕುಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

‘ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿ ಕೊಂಡಿರುವ ರೈತರಿಗೆ ಜಮೀನುಗಳನ್ನು ನೀಡುವ ಸಲುವಾಗಿ 4 ಜನರ ಸರ್ವೆ ತಂಡವನ್ನು ಮಾಡಿ, 2 ತಿಂಗಳಿನಿಂದ ನಿರಂತರವಾಗಿ ಮಾಡಲಾಗುತ್ತಿದೆ. ಈ ಸಮಿತಿಯ ಆಧಾರದ ಮೇಲೆ ಸಾಗುವಳಿದಾರರ ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಪರಿಶೀಲನೆ ನಡೆಸಿ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ನಮೂನೆ 57ರಲ್ಲಿ ಇದುವರೆಗೆ 9100 ಅರ್ಜಿಗಳು ಬಂದಿದ್ದು, ಬಹುತೇಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದರು.

ಸಂಸದ ಜಿ.ಎಂ ಸಿದ್ದೇಶ್ವರ ಮಾತನಾಡಿ, ‘ಬಿಜೆಪಿ ಸರ್ಕಾರ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸುವ ಸಲುವಾಗಿ ಈಚೆಗೆ ನಡೆದ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ಹಾಗಾಗಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಈ ತಾಲ್ಲೂಕಿನ ಎಲ್ಲ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡುವ ಮೂಲಕ ಅವರ ಬದುಕನ್ನು ಹಸನು ಮಾಡಲಾಗುವುದು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಜನಪ್ರತಿ ನಿಧಿಗಳ ಇಚ್ಛಾಶಕ್ತಿಯ ಕಾರಣದಿಂದಾಗಿ ತಾಲ್ಲೂಕಿನ ಬಗರ್‌ಹುಕುಂ ಸಾಗುವಳಿದಾರಿಗೆ ಹಕ್ಕುಪತ್ರ ಸಿಗುವಂತಾಗಿದೆ. ಎಲ್ಲ ಅರ್ಹ ಸಾಗುವಳಿದಾರರಿಗೆ ಅನ್ಯಾಯವಾಗದಂತೆ ಭೂಮಿಯನ್ನು ನೀಡಲಾಗುವುದು’ ಎಂದು ಹೇಳಿದರು.

ಭೂಹಕ್ಕುದಾರರ ವೇದಿಕೆ ರಾಜ್ಯ ಸಂಚಾಲಕಿ ಚಿತ್ರಾವತಿ, ಕೆ.ಜಿ. ರೂಪನಾಯ್ಕ, ಜಿಲ್ಲಾ ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಕೆ. ಮಂಜಾನಾಯ್ಕ, ಉಪ ಅರಣ್ಯ ಸಂರಕ್ಷಾಧಿಕಾರಿ ಪುಟ್ನಳ್ಳಿ, ಮಾವಿನಕಟ್ಟೆ ಆರ್‌ಎಫ್ಒ ಜಿತೇಂದ್ರ, ಬಗರ್‌ಹುಕುಂ ಸಮಿತಿ ಸದಸ್ಯರಾದ ಕೆ.ಸಿ. ಕೆಂಚಪ್ಪ, ರಾಜೇಶ್, ಪಿ.ಎಸ್. ಸಿದ್ದೇಶ್, ತಹಶೀಲ್ದಾರ್ ಡಾ.ಪಟ್ಟರಾಜಗೌಡ ಉಪಸ್ಥಿತರಿದ್ದರು.

ಮಾಯಕೊಂಡ ಶಾಸಕ ಪ್ರೊ.ಎನ್. ಲಿಂಗಣ್ಣ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು