ಶುಕ್ರವಾರ, ಡಿಸೆಂಬರ್ 4, 2020
22 °C
ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿಕೆ

ಸರ್ಕಾರಿ ಜಾಗ ಒತ್ತುವರಿ: ಕಠಿಣ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಒತ್ತುವರಿ ಮಾಡಿಕೊಂಡಿರುವ ಧೂಡಾ ವ್ಯಾಪ್ತಿಯಲ್ಲಿನ ಸರ್ಕಾರಿ ಜಾಗ, ಸಾರ್ವಜನಿಕ ಆಸ್ತಿ, ಕೆರೆ, ಉದ್ಯಾನ, ರಸ್ತೆಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.

‘ಸಾರ್ವಜನಿಕ ಆಸ್ತಿ ಕಬಳಿಕೆ ಕುರಿತು ಯಾರೇ ದಾಖಲೆ ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಪಕ್ಷದವರು ಬೇಕಾದರೂ ಇರಲಿ, ಪ್ರಭಾವಿಗಳೂ ಇದ್ದರೂ ಸರಿಯೇ, ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡರೆ ಕ್ರಮ ಕೈಗೊಳ್ಳಲಾಗುವುದು. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಹಲವು ಅಕ್ರಮ ನಡೆದಿದೆ. ನಿಯಮ ಬಾಹಿರವಾಗಿ ಅಧಿಕಾರಿಗಳೂ ಅಕ್ರಮಕ್ಕೆ ಸಾಥ್‌ ನೀಡಿದ್ದಾರೆ. ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಬಾತಿ ಕೆರೆಯಲ್ಲಿ ಒತ್ತುವರಿಯಾಗಿದ್ದ 4 ಎಕರೆ 2 ಗುಂಟೆ ಜಮೀನಿನ ವಸತಿ ವಿನ್ಯಾಸದ ಆದೇಶ ರದ್ದುಪಡಿಸಿ ಜಾಗವನ್ನು ಹಿಂಪಡೆಯಲಾಗಿದೆ. ಒತ್ತುವರಿ ವಿಚಾರದಲ್ಲಿ ರಾಜಿ ಇಲ್ಲ. ಅಧಿಕಾರ ವಹಿಸಿಕೊಂಡಾಗಿನಿಂದ ಯಾವುದೇ ಅಕ್ರಮ ಚಟುವಟಿಕೆಗೆ ಅವಕಾಶ ನೀಡಿಲ್ಲ. ಕಾಂಗ್ರೆಸ್ ಅವಧಿಯ ಅಕ್ರಮಗಳನ್ನೆಲ್ಲ ಬಯಲಿಗೆಳೆಯಲಿದ್ದೇನೆ. ಬಿಜೆಪಿ ನಾಯಕರು 10 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸುವ ಕಾಂಗ್ರೆಸ್‌ ಮುಖಂಡರಿಗೆ ಆತ್ಮಸಾಕ್ಷಿಯಿದ್ದರೆ ದಾಖಲೆಯೊಂದಿಗೆ ಆಪಾದಿಸಲಿ’ ಎಂದು ಸವಾಲು ಹಾಕಿದರು.

‘ಗಾಂಜಿ ವೀರಪ್ಪ ಕುಟುಂಬದಿಂದ ಪಡೆದ ಜಮೀನಿನಲ್ಲಿ ನಿರ್ಮಿಸಲಾದ ಎಸ್‌.ಎಸ್. ಮಾಲ್‌ನಲ್ಲಿ ಸಾರ್ವಜನಿಕ ರಸ್ತೆ, ಉದ್ಯಾನಕ್ಕೆ ಬಿಟ್ಟ ಜಾಗ ಒತ್ತುವರಿಯಾಗಿದೆ. ಉದ್ಯಮಿ ಎಸ್.ಎಸ್. ಗಣೇಶ್ ಅವರ ಹೆಸರಿಗೆ ಇಡೀ ಜಾಗವನ್ನು ಏಕನಿವೇಶನವಾಗಿ ಪರಿವರ್ತಿಸಲಾಗಿದೆ. ಈ ಸಂಬಂಧ ತಪ್ಪು ಮಾಡಿದ ಹಿಂದಿನ ದೂಡಾ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಏಕ ನಿವೇಶನ ಆದೇಶ ರದ್ದುಪಡಿಸಲು ಧೂಡಾ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಕಾನೂನು ಪ್ರಕ್ರಿಯೆ ಬಳಿಕ ಒತ್ತುವರಿ ತೆರವುಗೊಳಿಸಲಾಗುವುದು’ ಎಂದು ಹೇಳಿದರು.

ಲಕ್ಷ್ಮೀಫ್ಲೋರ್ ಮಿಲ್ ಸಮೀಪ ಮಾಜಿ ಸಚಿವರ ಸಂಬಂಧಿಕರೊಬ್ಬರು ಒತ್ತುವರಿ ಮಾಡಿದ್ದ 10 ಅಡಿ ರಸ್ತೆಯನ್ನು ಮುಕ್ತಗೊಳಿಸಲಾಗಿದೆ. ಅಲ್ಲಿ ಶೀಘ್ರ ಡಾಂಬರು ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಧೂಡಾ ಸದಸ್ಯರಾದ ರಾಜು ರೋಖಡೆ, ಜಯರುದ್ರೇಶ್, ದೇವೀರಮ್ಮ, ಸೌಭಾಗ್ಯ ಮುಕುಂದ್ ಇದ್ದರು.

ಉದ್ಯಾನಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು

ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಸ್ವಾತಂತ್ರ್ಯ ಯೋಧರಾದ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಹುತಾತ್ಮರಾಗಿದ್ದರು. ಅವರ ಹೆಸರನ್ನು ಜೆ.ಎಚ್. ಪಟೇಲ್ ಬಡಾವಣೆಯ ಆರು ಉದ್ಯಾನಗಳಿಗೆ ನಾಮಕರಣ ಮಾಡಲಾಗಿದೆ ಎಂದು ಶಿವಕುಮಾರ್‌ ಹೇಳಿದರು.

ಧೂಡಾ ಸಭಾಂಗಣಕ್ಕೆ ಮಾಜಿ ಸಂಸದ ದಿ.ಜಿ. ಮಲ್ಲಿಕಾರ್ಜುನಪ್ಪ ಅವರ ಹೆಸರಿಡಲಾಗಿದೆ. ಎಸ್.ನಿಜಲಿಂಗಪ್ಪ ಬಡಾವಣೆಯ ಪ್ರಾಧಿಕಾರದ ಜಾಗಕ್ಕೆ ‘ಅಮರ್ ಜವಾನ್’ ಉದ್ಯಾನ ಎಂದು ನಾಮಕರಣ ಮಾಡಿದ್ದು, ಹುತಾತ್ಮ ಸೈನಿಕರ ಸ್ಮಾರಕ ನಿರ್ಮಾಣಕ್ಕೆ ₹ 75 ಲಕ್ಷ ಬಿಡುಗಡೆ ಮಾಡಲಾಗಿದೆ. ನ.17ರ ದೂಡಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

‘ಅಗಸನಕಟ್ಟೆ ಕೆರೆ ಒತ್ತುವರಿ ಸರ್ವೆ ನಡೆಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ಪಾರ್ಕ್‌ಗಳ ಸರ್ವೆಗೆ ಆದೇಶಿಸಿದ್ದೇನೆ. ಉದ್ಯಾನದ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಬೃಹತ್ ಕಟ್ಟಡ ನಿರ್ಮಿಸಿದ್ದು, ಅವರಿಗೆ ನೋಟಿಸ್ ನೀಡಲಾಗಿದೆ ಎಂದರು.
ಕುಂದವಾಡ ಸಮೀಪ 150 ಎಕರೆ ಜಾಗ ಪರಿಶೀಲಿಸಿದ್ದು, ಹೊಸ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ರೈತರೇ ಪಹಣಿಯೊಂದಿಗೆ ಬಂದು ಜಮೀನು ನೀಡಬಹುದು. ಮಧ್ಯವರ್ತಿಗಳಿಗೆ ಅವಕಾಶವಿಲ್ಲ’ ಎಂದು ತಿಳಿಸಿದರು.

ಬಾತಿ ಕೆರೆ ಅಭಿವೃದ್ಧಿಗೆ ಕ್ರಮ

₹ 20 ಕೋಟಿ ವೆಚ್ಚದಲ್ಲಿ ಬಾತಿ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ವಾಕಿಂಗ್ ಪಾತ್, ಆಲಂಕಾರಿಕ ದೀಪಗಳು, ಬೋಟಿಂಗ್ ವ್ಯವಸ್ಥೆ, ತೇಲುವ ಹೋಟೆಲ್, 40 ಎಕರೆ ಜಮೀನಿನಲ್ಲಿ ವಾಟರ್ ಪಾರ್ಕ್ ನಿರ್ಮಿಸಿ ಉತ್ತಮ ಮನರಂಜನಾ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು. ಸರ್ಕಾರದಿಂದ ಅನುಮೋದನೆ ಪಡೆಯಲಾಗುತ್ತಿದೆ ಎಂದರು.

ಟಿವಿ ಸ್ಟೇಷನ್ ಕೆರೆಗೆ ₹ 2.75 ಕೋಟಿ, ನಾಗನೂರು ಕೆರೆಗೆ ₹ 44 ಲಕ್ಷ, ಹೊನ್ನೂರು ಕೆರೆಗೆ ₹ 35 ಲಕ್ಷ ನೀಡಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು