ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗಷ್ಟೇ ವಸತಿನಿಲಯ;ಇಲ್ಲಿ ಎಲ್ಲವೂ ಅಧ್ವಾನ

ವಸತಿನಿಲಯಗಳಲ್ಲಿ ಕಾಣದ ಮೂಲಸೌಕರ್ಯ, ಊಟದ ಅವ್ಯವಸ್ಥೆ
Last Updated 2 ಡಿಸೆಂಬರ್ 2019, 11:05 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಬಹುತೇಕ ವಸತಿನಿಲಯಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಶುದ್ಧ ಕುಡಿಯುವ ನೀರು, ಅಸಮರ್ಪಕ ನೀರು ಪೂರೈಕೆ, ಮಳೆ ಬಂದರೆ ಕೊಠಡಿಯೊಳಗೆ ನುಗ್ಗುವ ನೀರು, ಊಟದ ಅವ್ಯವಸ್ಥೆ, ತಣ್ಣೀರು ಸ್ನಾನ, 50 ಮಂದಿಗೆ ಮೂರು ಸ್ನಾನದ ಗೃಹ, ಶೌಚಾಲಯ, ಆಗಾಗ ಕೈಕೊಡುವ ವಿದ್ಯುತ್‌.

ಇದು ಬಹುತೇಕ ವಸತಿ ನಿಲಯಗಳಲ್ಲಿ ಕಂಡು ಬರುವ ಚಿತ್ರಣ. ಬಹುತೇಕ ವಸತಿನಿಲಯಗಳಲ್ಲಿ ಸಮಸ್ಯೆಗಳಿದ್ದರೂ ಅದನ್ನು ಹೇಳಿಕೊಳ್ಳಲು ವಿದ್ಯಾರ್ಥಿಗಳು ಹಿಂಜರಿಯುವ ಸ್ಥಿತಿ ಇದೆ. ಇಲ್ಲಿ ಸಮಸ್ಯೆಗಳಿಲ್ಲ ಎನ್ನುವ ವಿದ್ಯಾರ್ಥಿಗಳಿಗೆ ನಿಮಗೆ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ ಬಳಿಕವೇ ವಾಸ್ತವವನ್ನು ಬಿಚ್ಚಿಡುತ್ತಾರೆ. ಸಮಸ್ಯೆಗಳನ್ನು ಹೇಳಿಕೊಳ್ಳಲೂ ಹಿಂಜರಿಯುವ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿರುವುದರಿಂದ ಅಲ್ಲಿನ ಸ್ಥಿತಿ ಬಗ್ಗೆ ಊಹಿಸಿಕೊಳ್ಳಬಹುದು.

ಕೆಲ ಹಾಸ್ಟೆಲ್‌ಗಳಲ್ಲಿ ನಿಲಯ ಪಾಲಕರು ಉತ್ತಮವಾಗಿ ಕಾರ್ಯನಿರ್ವಹಿಸಿದರೂ ಅಡುಗೆಯವರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಒಳ್ಳೆಯ ಊಟ ಸಿಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ.

ಕೆಲ ಹಾಸ್ಟೆಲ್‌ಗಳಲ್ಲಿ ಮೆನು ಚಾರ್ಟ್‌ ಪ್ರಕಾರ ಊಟ ನೀಡಿದರೆ ಇನ್ನು ಕೆಲವೆಡೆ ಹೆಸರಿಗೆ ಮಾತ್ರ ಮೆನು ಚಾರ್ಟ್‌ ಇದೆ. ಇಲ್ಲಿನ ಬಾಡಾ ಕ್ರಾಸ್‌ ಬಳಿಯ ಮೆಟ್ರಿಕ್‌ ನಂತರದ ಬಾಲಕರ ವಸತಿನಿಲಯದಲ್ಲಿ ಊಟ ಚೆನ್ನಾಗಿರ‌ದ ಕಾರಣ ವಿದ್ಯಾರ್ಥಿಗಳು ಪಕ್ಕದ ಹಾಸ್ಟೆಲ್‌ಗೆ ಹೋಗುತ್ತಾರೆ. ಆದರೆ ಈ ಬಗ್ಗೆ ಪ್ರಶ್ನಿಸಿದರೆ ಮಾಹಿತಿ ನೀಡಲು ಅವರು ನಿರಾಕರಿಸುತ್ತಾರೆ.

ಹಿಂದೊಮ್ಮೆ ಇದೇ ಹಾಸ್ಟೆಲ್‌ನಲ್ಲಿ ಊಟದ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ನಿಲಯ ಪಾಲಕರನ್ನು ಬದಲಾಯಿಸಿದ ಮೇಲೆ ಪರಿಸ್ಥಿತಿ ಸುಧಾರಿಸಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಅಲ್ಲದೇ ಈ ಹಾಸ್ಟೆಲ್‌ ನಗರಕ್ಕೆ ದೂರ ಇರುವ ಕಾರಣ ವಿದ್ಯಾರ್ಥಿಗಳು ರಾತ್ರಿ ಹೊತ್ತು ಓಡಾಡಲು ಭಯ ಪಡುವಂತಾಗಿದೆ. ಸಮರ್ಪಕ ಬೀದಿ ದೀಪದ ವ್ಯವಸ್ಥೆ ಇಲ್ಲ. ರಾತ್ರಿ ಹೊತ್ತು ಇಲ್ಲಿ ಕುಡುಕರ ಹಾವಳಿ ಹೆಚ್ಚಿದ್ದು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಉದಾಹರಣೆಗಳೂ ಇವೆ.

ಬಹುತೇಕ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರು, ಮಂಚದ ವ್ಯವಸ್ಥೆ, ಟ್ರಂಕ್‌ ಇಲ್ಲದಿರುವುದು, ಒಂದೇ ರೂಮಿನಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಿರುವುದೂ ಸೇರಿ ಮೂಲಸೌಕರ್ಯಗಳು ಇಲ್ಲ.

ಮೆಟ್ರಿಕ್‌ ಪೂರ್ವ, ನಂತರದ ವಸತಿ ನಿಲಯ, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಸತಿನಿಲಯಗಳು ಸೇರಿ ಸಮಾಜ ಕಲ್ಯಾಣ ಇಲಾಖೆ, ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೀಗೆ ಎಲ್ಲ ವಸತಿ ನಿಲಯಗಳಲ್ಲಿ ಇದೇ ಸಮಸ್ಯೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ಕೆಲ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವವ ಕಡೆ ಸಮಸ್ಯೆ ಸಾಮಾನ್ಯ. ಇಲಾಖೆಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾದಾಗ ಸೌಲಭ್ಯಗಳು ದೊರಕುತ್ತವೆ ಎಂಬುದನ್ನು ನಿಲಯ ಪಾಲಕರೇ ಹೇಳುತ್ತಾರೆ. ತಕ್ಕ ಮಟ್ಟಿಗೆ ಸುಧಾರಣೆ ಕಂಡಿರುವ ವಸತಿನಿಲಯಗಳಲ್ಲಿ ಸಮರ್ಪಕ ವಿದ್ಯುತ್‌ ಸೌಲಭ್ಯಕ್ಕೆ ಯುಪಿಎಸ್‌, ಕಂಪ್ಯೂಟರ್‌ ಲ್ಯಾಬ್‌, ಗ್ರಂಥಾಲಯ ವ್ಯವಸ್ಥೆ ಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯ.

ಇಲ್ಲಿನ ಜಿಎಂಐಟಿ ಕಾಲೇಜು ಬಳಿಯ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯಕ್ಕೆ ಹೋಗಲು ಸಮರ್ಪಕ ರಸ್ತೆಯೇ ಇಲ್ಲ. ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಹಾಸ್ಟೆಲ್‌ ಹೋಗಲು ಚಿಕ್ಕ ದಾರಿ ಇದೆ. ಆದರೆ ಸುತ್ತ ಮುಳ್ಳಿನ ಗಿಡಗಳು ಬೆಳೆದಿವೆ. ಮಳೆ ಬಂದರೆ ಈ ರಸ್ತೆಯಲ್ಲಿ ಓಡಾಡುವುದು ದುಸ್ತರ. ಈಚೆಗೆ ಸುರಿದ ಮಳೆಗೆ ರಸ್ತೆ ಕೆಸರುಗದ್ದೆಯಂತಾಗಿದ್ದು, ಈಗ ಅಲ್ಲಿ ಗುಂಡಿ ಬಿದ್ದಿದೆ.

ವಿಶ್ವವಿದ್ಯಾಲಯದಲ್ಲೂ ಅವ್ಯವಸ್ಥೆ:ದಾವಣಗೆರೆ ವಿಶ್ವವಿದ್ಯಾಲಯದಲ್ಲಿರುವ ವಸತಿನಿಲಯಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿ ಆಗಾಗ ವಿದ್ಯುತ್‌ ಕೈಕೊಡುವ ಕಾರಣ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗಿದೆ.

‘ಇಲ್ಲಿನ ವಿದ್ಯಾರ್ಥಿನಿಯರ ವಸತಿನಿಲಯಗಳಲ್ಲಿ ಊಟದ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೆಚ್ಚು ವಿದ್ಯಾರ್ಥಿಗಳಿರುವ ಕಾರಣ ಊಟ ಸರಿಯಾಗಿ ಮಾಡುತ್ತಿಲ್ಲ. ಹಾಸಿಗೆ ವ್ಯವಸ್ಥೆ ಇಲ್ಲ. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಇಲ್ಲ. ಇದರಿಂದ ಚಳಿಗಾಲದಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಊಟ ಸರಿ ಇಲ್ಲದಿದ್ದರೂ ಮೆಸ್‌ ಶುಲ್ಕ ಹೆಚ್ಚು ಬರುತ್ತಿದೆ’ ಎಂದು ದೂರುತ್ತಾರೆ ವಿದ್ಯಾರ್ಥಿನಿ ಮಮತಾ.

40, 50 ಜನ ವಿದ್ಯಾರ್ಥಿನಿಯರಿಗೆ ಮೂರು ಶೌಚಾಲಯ, ಸ್ನಾನದ ಗೃಹ ಇದೆ. ಇದರಿಂದ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು ಅವರು.

ವಿದ್ಯುತ್‌ ಆಗಾಗ ಕೈಕೊಡುತ್ತದೆ. ಈಚೆಗೆ ಮೂರು ದಿನಗಳ ಕಾಲ ಕ್ಯಾಂಪಸ್‌ನಲ್ಲಿ ವಿದ್ಯುತ್‌ ಇರದೇ ಪರದಾಡುವಂತಾಗಿತ್ತು. ಯುಪಿಎಸ್‌ ವ್ಯವಸ್ಥೆ ಇಲ್ಲ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ಗೋಳು ಹೇಳತೀರದು. ಇಲ್ಲಿನ ವಿದ್ಯಾರ್ಥಿನಿಲಯಗಳಲ್ಲಿ ಮೂಲಸೌಕರ್ಯಗಳೇ ಇಲ್ಲ ಎಂದು ವಿದ್ಯಾರ್ಥಿಗಳಾದ ಆನಂದ್‌, ಸಂತೋಷ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT