ಬುಧವಾರ, ಆಗಸ್ಟ್ 4, 2021
23 °C
ಅನುದಾನ ಹಂಚಿಕೆ ತಾರತಮ್ಯ ಖಂಡಿಸಿ ಮೇಯರ್‌ ಕಚೇರಿಗೆ ಬೀಗ

ಅನುದಾನ: ಮೇಯರ್‌ ಹೇಳಿಕೆಯಲ್ಲಿ ಹುರುಳಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಕಾಂಗ್ರೆಸ್‌ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ ಎಂಬ ಮಹಾನಗರ ಪಾಲಿಕೆ ಮೇಯರ್‌ ಬಿ.ಜಿ. ಅಜಯಕುಮಾರ್ ಹೇಳಿಕೆ ಸತ್ಯಕ್ಕೆ ದೂರ. ಯಾವುದೇ ವಾರ್ಡ್‌ಗಳಿಗೆ ನಾವು ಕೇಳಿದಷ್ಟು ನೀಡಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ 2 ಕೋಟಿ, ₹ 3 ಕೋಟಿ ಕೇಳಿದ ಕಡೆ ಕೇವಲ ₹ 50 ಲಕ್ಷ, 60 ಲಕ್ಷ ನೀಡಿದ್ದಾರೆ’ ಎಂದು ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್‌ ಆರೋಪಿಸಿದರು.

‘ಅನುದಾನ ಹಂಚಿಕೆ ತಾರತಮ್ಯವನ್ನು 15 ದಿನಗಳೊಳಗಾಗಿ ಸರಿಪಡಿಸಬೇಕು. ಇಲ್ಲದಿದ್ದರೆ ಮೇಯರ್‌ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಾಗ ಅವರಿಗೆ ಘೆರಾವ್‌ ಹಾಕಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಕಾಂಗ್ರೆಸ್‌ಗೆ ಅಧಿಕಾರದ ದಾಹ ಇಲ್ಲ. ನೀರು ಪೂರೈಕೆಯಾಗುತ್ತಿಲ್ಲ. ಮೋಟರ್ ಕೆಟ್ಟಿದೆ ಎಂದು ನಾವು ಅವರನ್ನು ಎಚ್ಚರಿಸಿದಾಗ ಎಚ್ಚೆತ್ತುಕೊಳ್ಳುವ ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ತಳ್ಳುಗಾಡಿ ವ್ಯಾಪಾರಿಗಳಿಂದಲೂ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನನ್ನ 16ನೇ ವಾರ್ಡ್‌ಗೆ ₹ 70 ಲಕ್ಷ ಅನುದಾನ ಮಾತ್ರ ಹಂಚಿಕೆ ಮಾಡಿದ್ದಾರೆ. ಅದೂ ಪಕ್ಕದ ವಾರ್ಡ್‌ನ ₹ 30 ಲಕ್ಷ ಸೇರಿ ₹ 70 ಲಕ್ಷ ಎಂದು ತೋರಿಸಿದ್ದಾರೆ. 35ನೇ ವಾರ್ಡ್‌ನಲ್ಲಿ ಕಾಮಗಾರಿಗೆ ಅನುದಾನ ಕೇಳಿದ್ದು ₹ 2. 85 ಕೋಟಿ. ನೀಡಿದ್ದು ₹ 60 ಲಕ್ಷ. ಇಲ್ಲಿ ಟಿಎಸ್‌ಪಿ ಯೋಜನೆಯಡಿ ₹ 1.34 ಕೋಟಿ ಹಂಚಿಕೆ ಮಾಡಿದ್ದಾರೆ. ಇದು ಎಸ್‌ಟಿ ಜನಾಂಗ ಇರುವ ಕಡೆ ಈ ಅನುದಾನ ನೀಡಲೇಬೇಕು. ನೀಡದಿದ್ದರೆ ಅನುದಾನ ವಾಪಸ್‌ ಹೋಗುತ್ತದೆ. ಇದರಲ್ಲಿ ಅವರ ಹೆಚ್ಚುಗಾರಿಕೆ ಇಲ್ಲ. ಕಾಂಗ್ರೆಸ್‌ ಸದಸ್ಯರು ಇರುವ 22 ವಾರ್ಡ್‌ಗಳಲ್ಲಿ 4 ವಾರ್ಡ್‌ಗಳ ವಿವರ ಮಾತ್ರ ಮೇಯರ್‌ ನೀಡಿದ್ದಾರೆ. ಉಳಿದ 18 ವಾರ್ಡ್‌ಗಳಿಗೆ ಏನು ಅನುದಾನ ನೀಡಿದ್ದಾರೆ ಎಂಬುದನ್ನು ಹೇಳಿಲ್ಲ’ ಎಂದು ತಿರುಗೇಟು ನೀಡಿದರು.

‘ಬಹುತೇಕ ವಾರ್ಡ್‌ ಸದಸ್ಯರು ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡಿ ಎಲ್ಲ ಕಡೆ ₹ 2.5 ಕೋಟಿ, ₹ 2 ಕೋಟಿ ಅನುದಾನ ಕೇಳಿದ್ದರು. ಆದರೆ ಅವರು ನೀಡಿದ್ದು ₹ 50 ಲಕ್ಷ, ₹ 60 ಲಕ್ಷ ಮಾತ್ರ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೆಲ ವಾರ್ಡ್‌ಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಏನು ಎಂಬುದರ ಬಗ್ಗೆ ಮೇಯರ್‌ ಮೊದಲು ತಿಳಿದುಕೊಳ್ಳಲಿ’ ಎಂದರು.

ಆಶಾ ಉಮೇಶ್‌ ಪ್ರತಿನಿಧಿಸುವ ವಾರ್ಡ್‌ಗೆ ₹ 60 ಲಕ್ಷ ನೀಡಿ, ಶಾಸಕ ಎಸ್‌.ಎ. ರವೀಂದ್ರನಾಥ್‌ ಪುತ್ರಿ ವೀಣಾ ನಂಜಪ್ಪ ಪ್ರತಿನಿಧಿಸುವ ವಾರ್ಡ್‌ಗೆ ₹ 5. 25 ಕೋಟಿ ಅನುದಾನ ನೀಡಿದ್ದಾರೆ ಎಂದು ದೂರಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.