ಶನಿವಾರ, ಮೇ 8, 2021
24 °C
ನೀರು ಉಳಿಯಲು ಕೊರೊನಾವೂ ಕಾರಣ l ಅಕಾಲಿಕ ಮಳೆಯ ಸಹಕಾರ l ಏಕಬೆಳೆ ಬಿಡಿ, ಮಿಶ್ರಬೆಳೆ ಮಾಡಿ

ಅಂತರ್ಜಲ ತಾತ್ಕಾಲಿಕ ಹೆಚ್ಚಳ: ಮೈಮರೆತರೆ ಕಾಣಲಿದೆ ಪಾತಾಳ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಳೆದ ನಾಲ್ಕು ವರ್ಷಗಳಲ್ಲಿ ಈ ಬಾರಿಯೇ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿದೆ. ಕೊರೊನಾ ಬಂದು ಜನ ಕೃಷಿ ಕಡೆ ಕಡಿಮೆ ಗಮನಹರಿಸಿ, ಮನೆಯಲ್ಲಿ ಉಳಿದಿದ್ದೇ ಪ್ರಮುಖ ಕಾರಣ. ಹವಾಮಾನ ವೈಪರೀತ್ಯದಿಂದ ಅಕಾಲಿಕವಾಗಿ ಸುರಿದ ಮಳೆ ಇನ್ನೊಂದು ಕಾರಣ.

2017ರ ವರೆಗೆ ಮಳೆ ಕಡಿಮೆಯಾಗಿ, ಬರಗಾಲ ಉಂಟಾಗಿತ್ತು. ಮಳೆಗಾಲ ಆರಂಭವಾಗುವ ಜೂನ್‌–ಜುಲೈಯಲ್ಲಿ ಕೂಡ ಕಡಿಮೆ ಮಳೆ ಬಿದ್ದಿತ್ತು. ಆದರೆ, ಆಗಸ್ಟ್‌ ಕೊನೆಗೆ ಮತ್ತು ಸೆಪ್ಟೆಂಬರ್‌ನಲ್ಲಿ ಮನೆಗಳೆಲ್ಲ ಕೊಚ್ಚಿಕೊಂಡು ಹೋಗುವ ಮಟ್ಟಿಗೆ ಇದ್ದಕ್ಕಿದ್ದಂತೆ ಹೆಚ್ಚು ಮಳೆ ಬಿತ್ತು. ಅಲ್ಲಿಂದ ಇಲ್ಲಿಯವರೆಗೆ ಮಳೆ ಕೊರತೆ ಕಾಡಿಲ್ಲ.

ನದಿಪಾತ್ರದ ಹರಿವಿರುವ ಹರಿಹರ ಅತಿ ಹೆಚ್ಚು ಅಂತರ್ಜಲ ಮಟ್ಟ ಇರುವ ತಾಲ್ಲೂಕು. ಇಲ್ಲಿ 2017ರ ಜನವರಿಯಲ್ಲಿ 5.69 ಮೀಟರ್‌ ಕೆಳಗೆ ಅಂತರ್ಜಲ ಇದ್ದರೆ, 2021ರ ಜನವರಿಯಲ್ಲಿ 3.63 ಮೀಟರ್‌ ಕೆಳಗೆ ಇದೆ. 2 ಮೀಟರ್‌ಗೂ ಅಧಿಕ ಅಂತರ್ಜಲ ವೃದ್ಧಿಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಸುಮಾರು 4 ಮೀಟರ್‌, ಚನ್ನಗಿರಿಯಲ್ಲಿ ಎರಡೂವರೆ ಮೀಟರ್‌, ಹೊನ್ನಾಳಿಯಲ್ಲಿ 6 ಮೀಟರ್‌, ಜಗಳೂರಿನಲ್ಲಿ 6 ಮೀಟರ್‌ ಅಂತರ್ಜಲ ಹೆಚ್ಚಾಗಿದೆ.

ಕೊರೊನಾ ಬಂದು ಕಳೆದ ವರ್ಷ ಮಾರ್ಚ್‌ ಹೊತ್ತಿಗೆ ಲಾಕ್‌ಡೌನ್‌ ಆಯಿತು. ಬಳಿಕ ತರಕಾರಿ, ಹಣ್ಣುಗಳಿಗೆ ಬೇಡಿಕೆ ಕಡಿಮೆಯಾಯಿತು. ರೈತರೂ ಬೆಳೆ ಕಡಿಮೆ ಮಾಡಿದರು. ಐದು ಎಕರೆ ಕೃಷಿ ಮಾಡುವವ ಒಂದೆರಡು ಎಕರೆಗೆ ಸೀಮಿತಗೊಳಿಸಿದ. ಕೃಷಿ ಕಡಿಮೆಯಾದಾಗ ನೀರಿನ ಬಳಕೆಯೂ ಕಡಿಮೆಯಾಗುತ್ತದೆ. ಹಾಗಾಗಿ ಅಂತರ್ಜಲ ಕಡಿಮೆಯಾಗಲಿಲ್ಲ ಎಂದು ಜಲತಜ್ಞ ಚಿತ್ರದುರ್ಗದ ದೇವರಾಜ ರೆಡ್ಡಿ ಮಾಹಿತಿ ನೀಡಿದರು.

ರೈತರಲ್ಲಿ ಇರುವ ಎಲ್ಲ ಪಂಪ್‌ಸೆಟ್‌ ಮೋಟರ್‌ಗಳು ರನ್‌ ಆಗುತ್ತಿದ್ದವು. ಸಹಜವಾಗಿಯೇ ವಿದ್ಯುತ್‌ ವೋಲ್ಟೇಜ್‌ ಕಡಿಮೆಯಾಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ವಿದ್ಯುತ್‌ ವೋಲ್ಟೇಜ್‌ ಇಲ್ಲ ಎಂಬ ಕೂಗು ಕೇಳಿಬರಲೇ ಇಲ್ಲ. ಶೇ 60ರಷ್ಟು ಕೃಷಿ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂಬುದು ಅವರ ವಿವರಣೆ.

ಪ್ರತಿ ವರ್ಷ ನವೆಂಬರ್‌ಗೆ ಮಳೆ ನಿಂತು ಹೋಗುತ್ತದೆ. ಈ ಬಾರಿ ಡಿಸೆಂಬರ್‌, ಜನವರಿ ಮತ್ತು ಫೆಬ್ರುವರಿಯಲ್ಲಿಯೂ ಈ ಬಾರಿ ಮಳೆ ಬಂದಿದೆ. ಹಾಗಾಗಿ ನೀರಿನ ಕುಸಿತ ಕಂಡಿಲ್ಲ. ಕಳೆದ ಮೂರು ವರ್ಷಗಳಿಂದ ಮಳೆ ಚೆನ್ನಾಗಿದೆ. ಅದು ನಿರಂತರವಾಗಿ ಇದೇ ರೀತಿ ಉತ್ತಮ ಮಳೆ ಬರಲಿದೆ ಎಂಬುದು ಖಚಿತವಲ್ಲ. ಕೆಲವು ವರ್ಷ ಮಳೆ ಜಾಸ್ತಿ ಇರುವಂತೆ ಕೆಲವು ವರ್ಷ ಮಳೆ ಕಡಿಮೆಯೂ ಆಗುತ್ತದೆ. ಹಾಗಾಗಿ ಇನ್ನು ಹತ್ತು ವರ್ಷದ ನಂತರವೂ ಅಂತರ್ಜಲ ಇದೇ ಮಟ್ಟದಲ್ಲಿ ಇರುತ್ತದೆ ಎಂಬ ಕಲ್ಪನೆ ಬೇಡ ಎಂಬುದು ಅವರ ಸಲಹೆಯಾಗಿದೆ.

ನರೇಗಾ ಯೋಜನೆಯಡಿ ಬದು, ಹೊಂಡ ನಿರ್ಮಾಣ ಮಾಡಿಕೊಂಡರೆ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಈಗಾಗಲೇ ತೋಟಗಾರಿಕೆ, ಕೃಷಿ ಸಹಿತ ವಿವಿಧ ಇಲಾಖೆಯಡಿ ಈ ಕೆಲಸಗಳಾಗಿವೆ. ಇವೆಲ್ಲ ಅಂತರ್ಜಲ ಹೆಚ್ಚಾಗಲು ಕಾರಣವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌, ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನ್ನರ್‌ ತಿಳಿಸಿದ್ದಾರೆ.

46 ಅಧ್ಯಯನ ಬಾವಿಗಳು

ಜಲಮಟ್ಟ ಪರೀಕ್ಷೆ ಮಾಡಲು ಜಿಲ್ಲೆಯಲ್ಲಿ 31 ಕೊಳವೆಬಾವಿಗಳು, 15 ತೆರೆದ ಬಾವಿಗಳು ಸೇರಿ ಒಟ್ಟು 46 ಅಧ್ಯಯನ ಬಾವಿಗಳಿವೆ. ಈ ಬಾವಿಗಳಿಂದ ನೀರೆತ್ತಲು ಅವಕಾಶವಿಲ್ಲ. ಪಂಪ್‌ ಇಡುವಂತಿಲ್ಲ.

ದಾವಣಗೆರೆ ತಾಲ್ಲೂಕಿನ ದಾವಣಗೆರೆ, ಆವರಗೆರೆ, ಕುರ್ಕಿ, ಹುಣಸೆಕಟ್ಟೆ, ಆನಗೋಡು, ದೊಡ್ಡಬಾತಿ, ಕೊಡಗನೂರು, ಅಣಜಿ ಹೀಗೆ 8 ಕಡೆಗಳಲ್ಲಿ ಅಧ್ಯಯನ ಬಾವಿಗಳಿವೆ. ಹರಿಹರ ತಾಲ್ಲೂಕಿನಲ್ಲಿ 7 ಅಧ್ಯಯನ ಬಾವಿಗಳಿವೆ. ಹರಿಹರ, ಎಕ್ಕೆಗುಂದಿ, ಕುಂಬಳೂರು, ಕಮಲಾಪುರ, ಗುತ್ತೂರು, ಕೊಂಡಜ್ಜಿ ಮತ್ತು ಮಲೆಬೆನ್ನೂರಿನಲ್ಲಿವೆ.

ಅತಿ ಹೆಚ್ಚು ಅಂದರೆ 14 ಅಧ್ಯಯನ ಬಾವಿಗಳನ್ನು ಚನ್ನಗಿರಿ ತಾಲ್ಲೂಕು ಒಳಗೊಂಡಿದೆ. ಆದರೆ ಅದರಲ್ಲಿ ಮರವಂಜಿ ಕೊಳವೆಬಾವಿಯಲ್ಲಿ ನೀರಿಲ್ಲದ ಕಾರಣ 13 ಬಾವಿಗಳನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಚನ್ನಗಿರಿಯಲ್ಲಿ ಎರಡು, ಸಂತೇಬೆನ್ನೂರಿನಲ್ಲಿ ಎರಡು, ತಾವರೆಕೆರೆಯಲ್ಲಿ ಎರಡು, ಕಾರಿಗನೂರು, ಹಿರೇಕೊಗಲೂರು, ದೇವರಹಳ್ಳಿ, ಬಸವಾಪಟ್ಟಣ, ಅರಶಿನಘಟ್ಟ, ಜೋಳದಾಳ್‌, ಹೆಬ್ಬಾಳಗೇರಿಯಲ್ಲಿ ತಲಾ ಒಂದು ಬಾವಿಗಳಿವೆ.

ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕುಂದೂರಲ್ಲಿ ಎರಡು, ಹೊಸಲಿಂಗಪುರದಲ್ಲಿ ಎರಡು, ಬೆನಕನಹಳ್ಳಿ, ದೇವನಾಯಕನಹಳ್ಳಿ, ಹೊಸೂರು, ಚೆನ್ನಿಕಟ್ಟೆ, ನ್ಯಾಮತಿ ಒಟ್ಟು 9 ಬಾವಿಗಳಿವೆ.

ಜಗಳೂರು ತಾಲ್ಲೂಕಿನ ಎಚ್‌.ಎಂ.ಗೊಲ್ಲರಹಟ್ಟಿಯಲ್ಲಿ ಎರಡು, ಜಗಳೂರು, ಬಿಳಿಚೋಡು, ಅಸಗೋಡು, ಉಚ್ಚಂಗಿಪುರ, ಕ್ಯಾಶನಹಳ್ಳಿ, ಕೊರಟಿಕೆರೆ, ಮೆದಗಿನಕೆರೆ ಹೀಗೆ 9 ಬಾವಿಗಳಲ್ಲಿ ಅಂತರ್ಜಲ ಪರೀಕ್ಷೆ ಮಾಡಲಾಗುತ್ತದೆ.

‘ಒಂದು ಲಕ್ಷ ಬೋರ್‌ವೆಲ್‌’

ಜಿಲ್ಲೆಯಲ್ಲಿ ಕೃಷಿಗಾಗಿ 1 ಲಕ್ಷಕ್ಕೂ ಅಧಿಕ ಬೋರ್‌ವೆಲ್‌ಗಳು ಬಳಕೆಯಾಗುತ್ತಿವೆ. ನೀರಾವರಿ ತಾಲ್ಲೂಕುಗಳಲ್ಲಿ ಕೊಳವೆಬಾವಿಗಳ ಸಂಖ್ಯೆ ಕಡಿಮೆ ಇದ್ದರೆ, ನೀರಿನ ಕೊರತೆ ಇರುವ ತಾಲ್ಲೂಕುಗಳಲ್ಲಿ ಹೆಚ್ಚಿವೆ. ನೀರು ಸಿಕ್ಕಿಲ್ಲ ಎಂದು ಕೊಳವೆಬಾವಿಗಳನ್ನು ಮುಚ್ಚುವ ಬದಲು ಮುಂದಿನ ಮಳೆಗಾಲದವರೆಗೆ ಕಾದು ಮಳೆಗಾದಲ್ಲಿ ನೀರು ತುಂಬಿಸಿದರೆ ಅಂತರ್ಜಲ ಹೆಚ್ಚಾಗುತ್ತದೆ. ಜತೆಗೆ ಆ ಕೊಳವೆಬಾವಿಯೂ ಉಪಯೋಗಕ್ಕೆ ಬರುತ್ತದೆ ಎಂದು ದೇವರಾಜ ರೆಡ್ಡಿ ತಿಳಿಸಿದರು.

‘ಅಡಿಕೆಯಂಥ ಒಂದೇ ಬೆಳೆ ಬೆಳೆಯುವ ಬದಲು ನಮ್ಮ ನೆಲಕ್ಕೆ ಹೊಂದಿಕೊಳ್ಳುವ ಮಿಶ್ರಬೆಳೆಗಳನ್ನು ಬೆಳೆದರೆ ಮಣ್ಣಿನ ಫಲವತ್ತತೆ ಉಳಿಯಲು ಮಾತ್ರವಲ್ಲ, ಅಂತರ್ಜಲ ಕಾಪಾಡಿಕೊಳ್ಳುವುದಕ್ಕೂ ಉಪಯೋಗವಾಗುತ್ತದೆ’ ಎಂಬುದು ಅವರ ಸಲಹೆಯಾಗಿದೆ.

ಹರಿವ ನೀರನ್ನು ನಿಲ್ಲಿಸಿ

ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ ಹೀಗೆ ವಿವಿಧ ಇಲಾಖೆ, ಸ್ಥಳೀಯಾಡಳಿತಗಳ ಅಡಿಯಲ್ಲಿ 200ಕ್ಕೂ ಅಧಿಕ ದೊಡ್ಡ ಕೆರೆಗಳೂ ಸೇರಿ ಸುಮಾರು 1000 ಕೆರೆಗಳಿವೆ. ಈ ಕೆರೆಗಳನ್ನು ಮಳೆಗಾಲದಲ್ಲಿ ತುಂಬಿಸಲು ಸಾಧ್ಯವಾದರೆ ಬೇಸಿಗೆಯಲ್ಲಿ ನೀರಿನ ಕೊರತೆ ತಗ್ಗಿಸಲು ಸಾಧ್ಯ. ಕೊಳವೆ ಬಾವಿಗಳನ್ನು ಕೂಡ ಮಳೆಗಾಲದಲ್ಲಿ ರೀಜಾರ್ಚ್‌ ಮಾಡಬೇಕು. ಕೆರೆಕಟ್ಟೆಗಳನ್ನು ತುಂಬಿಸಬೇಕು. ಹರಿದು ಹೋಗುವ ನೀರನ್ನು ನಿಲ್ಲುವಂತೆ ಮಾಡಬೇಕು ಎಂದು ಪ್ರಭಾರ ಹಿರಿಯ ಭೂ ವಿಜ್ಞಾನಿ ಬಸವರಾಜ್‌ ಆರ್‌. ಮಾಹಿತಿ ನೀಡಿದ್ದಾರೆ.

ಅಟಲ್‌ ಭೂಜಲ್‌

ಅಟಲ್‌ ಭೂಜಲ್‌ ಯೋಜನೆಯಡಿ ರಾಜ್ಯಕ್ಕೆ ₹ 1,500 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಅದು ಅನುಷ್ಠಾನಗೊಂಡರೆ ಅಂತರ್ಜಲ ಹೆಚ್ಚಾಗಲು ಅನುಕೂಲವಾಗಲಿದೆ. ಹಿಂದೆ ಕೆರೆಕಟ್ಟೆಗಳನ್ನು ಕಟ್ಟಿಸಿದ ಮೇಲೆ ಜವಾಬ್ದಾರಿ ಮುಗಿಯುತ್ತಿತ್ತು. ಈ ಯೋಜನೆಯಡಿ ಕೆರೆ ನಿರ್ಮಿಸಿದರೆ ಅದರಿಂದ ಏನು ಪ್ರಯೋಜನವಾಗಿದೆ, ಎಷ್ಟು ಅಂತರ್ಜಲ ಹೆಚ್ಚಾಗಿದೆ ಎಂದು ಪರೀಕ್ಷೆ ಮಾಡಲಾಗುತ್ತದೆ. ಐದು ವರ್ಷಗಳಲ್ಲಿ (2021–26) ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಎಸ್‌.ಎಂ. ಸ್ವಾಮಿ ತಿಳಿಸಿದ್ದಾರೆ.

***

ದೀಟೂರು ಏತ ನೀರಾವರಿ ಆದರೆ ಅಂತರ್ಜಲ ಇನ್ನೂ ಹೆಚ್ಚಳ

ಶ್ರೀನಿವಾಸ ಡಿ.

ಜಗಳೂರು ಕೆರೆ, ಸಂಗೇನಹಳ್ಳಿ ಕೆರೆ, ಗಡಿಮಾಕುಂಟೆ ಕೆರೆ, ತುಪ್ಪದಹಳ್ಳಿ ಕೆರೆ ಸಹಿತ ಜಗಳೂರು ತಾಲ್ಲೂಕಿನಲ್ಲಿ
12 ದೊಡ್ಡ ಕೆರೆಗಳು ಸೇರಿ 50ಕ್ಕೂ ಹೆಚ್ಚು ಕೆರೆಗಳಿವೆ.ಕಳೆದ ವರ್ಷದ ಮಳೆಗಾಲದಲ್ಲಿ ಉತ್ತಮ ಮಳೆಯಾಗಿದ್ದರಿಂದ ಹಲವು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆ ಕಂಡಿದೆ.

ಮೂರು ವರ್ಷಗಳ ಹಿಂದೆ ಸತತ ಬರಗಾಲದ ಕಾರಣ ಎಲ್ಲಾ ಕೆರೆಗಳು ಬರಿದಾಗಿ ಅಂತರ್ಜಲ ಪಾತಾಳಕ್ಕೆ ಕುಸಿದು ನೂರಾರು ಕೊಳವೆಬಾವಿಗಳು ವಿಫಲವಾಗಿದ್ದವು. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಹಾಗೂ ದಾಳಿಂಬೆ ತೋಟಗಳು ಒಣಗಿ ರೈತರು ಅಪಾರ ನಷ್ಟ ಅನುಭವಿಸಿದ್ದರು. 80 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು.

ತಾಲ್ಲೂಕಿನ 50 ಕೆರೆ ಸೇರಿ ವಿಧಾನಸಭಾ ಕ್ಷೇತ್ರದ 57 ಕೆರೆಗಳನ್ನು ತುಂಗಭದ್ರಾ ನದಿಯಿಂದ ತುಂಬಿಸುವ
₹ 640 ಕೋಟಿ ವೆಚ್ಚದ ದೀಟೂರು ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲೂ ತಾಲ್ಲೂಕಿನ ಹಲವು ಕೆರೆಗಳನ್ನು ತುಂಬಿಸುವ ಪ್ರಸ್ತಾಪ ಇದ್ದು, ಈ ಎರಡೂ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯಿಂದ ತಾಲ್ಲೂಕು ಮುಕ್ತವಾಗಲಿದೆ.

***

ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ

- ಎನ್‌.ಕೆ. ಆಂಜನೇಯ

ಹೊನ್ನಾಳಿ: ಇಂಗುಗುಂಡಿ, ಚೆಕ್‌ಡ್ಯಾಂ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಎರಡು ತಾಲ್ಲೂಕುಗಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 70 ಕೆರೆಗಳು ಬರುತ್ತವೆ. ಹೊನ್ನಾಳಿ ತಾಲ್ಲೂಕಿನಲ್ಲಿ ಕಿರು ನೀರು ಸರಬರಾಜು ಯೋಜನೆ, ಕೈ ಪಂಪು ಕೊಳವೆ ಬಾವಿಗಳು, ಕಾರ್ಯಾತ್ಮಕ ಕೊಳವೆಬಾವಿಗಳು ಸೇರಿ 1,493 ಕೊಳವೆ ಬಾವಿಗಳಿವೆ ಎಂದು ರೂರಲ್ ಡ್ರಿಂಕ್ ಅಂಡ್ ವಾಟರ್ ಸಪ್ಲೈ ಎಂಜಿನಿಯರ್ ನಟರಾಜ್, ಜಿಲ್ಲಾ ಪಂಚಾಯಿತಿ ಎಇಇ ಅಜ್ಜಪ್ಪ ಮಾಹಿತಿ ನೀಡಿದ್ದಾರೆ. 

ಜಲಸಂವರ್ಧನೆ ಯೋಜನೆಯಡಿ ಕೇವಲ 4 ಕೆರೆಗಳ ಅಭಿವೃದ್ಧಿಗೆ ಮಾತ್ರ ಅನುದಾನ ಬಿಡುಗಡೆಯಾಗಿದ್ದು, ಅಲ್ಲಿ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.

ಸಣ್ಣ ನೀರಾವರಿ ಇಲಾಖೆ: ಸಣ್ಣ ನೀರಾವರಿ ಇಲಾಖೆಯಡಿ ಒಟ್ಟು 12 ಕೆರೆಗಳು ಬರುತ್ತವೆ ಎಂದು ಎಇಇ ಮಂಜುನಾಥ್ ತಿಳಿಸಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 47 ಕೆರೆಗಳು ಬರುತ್ತವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರಮೂರ್ತಿ ತಿಳಿಸಿದ್ದಾರೆ.

ಶಾಸಕ ರೇಣುಕಾಚಾರ್ಯ ಅವರು ಅವಳಿ ತಾಲ್ಲೂಕಿನ 32 ಕೆರೆಗಳ ಅಭಿವೃದ್ಧಿಗೆ, ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಒಟ್ಟು ₹ 5455 ಲಕ್ಷಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

***

ಹೆಚ್ಚಾಗುತ್ತಿದೆ ಕೊಳವೆಬಾವಿಗಳ ಸಂಖ್ಯೆ

- ಎಚ್.ವಿ. ನಟರಾಜ್

ಚನ್ನಗಿರಿ ತಾಲ್ಲೂಕನ್ನು ಅಡಿಕೆ ನಾಡೆಂದು ಕರೆಯಲಾಗುತ್ತದೆ. 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆಯಲಾಗುತ್ತಿದ್ದು, ಈ ಕಾರಣದಿಂದಾಗಿ ಈ ತಾಲ್ಲೂಕಿನಲ್ಲಿ ಕೊಳವೆಬಾವಿಗಳ ಸಂಖ್ಯೆ ಪ್ರತಿ ವರ್ಷ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ತಾಲ್ಲೂಕಿನಲ್ಲಿ 10,238 ಕೊಳವೆಬಾವಿಗಳಿದ್ದು, ಎರಡು ವರ್ಷಗಳಿಂದ ಉತ್ತಮವಾಗಿ ಮಳೆಯಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ. ಎರಡು ವರ್ಷಗಳ ಹಿಂದೆ 500 ಅಡಿಯಿಂದ 1000 ಅಡಿಯವರೆಗೆ ಕೊಳವೆಬಾವಿ ಕೊರೆಯಿಸಿದರೂ ಒಂದಿಂಚೂ ನೀರು ಲಭ್ಯವಾಗುತ್ತಿರಲಿಲ್ಲ. ಈ ಬಾರಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್ ತಿಳಿಸಿದರು.

ತಾಲ್ಲೂಕಿನಲ್ಲಿ 500 ಅಡಿ ಕೊಳವೆಬಾವಿ ಕೊರೆಯಿಸಿದರೆ, ಪ್ರಸ್ತುತ 2ರಿಂದ 3 ಇಂಚು ನೀರಿಗೆ ಕೊರತೆ ಇಲ್ಲದಷ್ಟು ಅಂತರ್ಜಲ ವೃದ್ಧಿಯಾಗಿದೆ.

ತಾಲ್ಲೂಕಿನಲ್ಲಿ 288 ಕೆರೆಗಳಿದ್ದು, ಉಬ್ರಾಣಿ ಹೋಬಳಿಯ 89 ಕೆರೆಗಳು ಉಬ್ರಾಣಿ ಏತ ನೀರಾವರಿ ಯೋಜನೆ ಅಡಿ ಭದ್ರಾ ನದಿಯ ನೀರನ್ನು ತುಂಬಿಸಿರುವುದರಿಂದ ಈ ಭಾಗದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸಲು ಯಾವ ರೈತರೂ ಮುಂದಾಗುತ್ತಿಲ್ಲ. ಸಂತೇಬೆನ್ನೂರು ಹಾಗೂ ಕಸಬಾ ಹೋಬಳಿಗಳಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಪ್ರಮುಖವಾಗಿ ರೈತರಿಗೆ ಕಾಡುತ್ತಿದೆ. ಈ ಭಾಗದಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಮುಕ್ತಾಯಗೊಂಡು ಈ ಹೋಬಳಿಗಳ 90ಕ್ಕಿಂತ ಹೆಚ್ಚು ಕೆರೆಗಳು ತುಂಬಿದರೆ ರೈತರ ಬದುಕು ಹಸನಾಗಲಿದೆ.

ಅಂತರ್ಜಲ ಮಟ್ಟ ಹೆಚ್ಚಳಕ್ಕಾಗಿ ರೈತರ ಜಮೀನುಗಳಲ್ಲಿ ಕೃಷಿ ಹೊಂಡ, ಬದುಗಳ ನಿರ್ಮಾಣ ಕಾರ್ಯವನ್ನು ಕೃಷಿ ಇಲಾಖೆಯಿಂದ ಮಾಡಲಾಗುತ್ತಿದೆ.

***

ಸದ್ಯ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದೆ

- ವಿಶ್ವನಾಥ ಡಿ.

ಹರಪನಹಳ್ಳಿ: ತಾಲ್ಲೂಕಿನಲ್ಲಿ ಸುಮಾರು 60 ಕೆರೆಗಳಿವೆ. ಪಟ್ಟಣದ ಕೆರೆ ಹೊರತುಪಡಿಸಿ, ಉಳಿದವುಗಳಲ್ಲಿ ಅಲ್ಪ ಪ್ರಮಾಣದ ನೀರಿದೆ.

ಮತ್ತಿಹಳ್ಳಿ, ಎನ್.ಶೀರನಹಳ್ಳಿ, ಕಸವನಹಳ್ಳಿ, ಪಾವನಪುರ, ಜೋಷಿಲಿಂಗಾಪುರ, ಮಡಕಿ ನಿಚ್ಚಾಪುರ, ಕೊಂಗನಹೊಸೂರು, ಬಾಗಳಿ, ನೀಲಗುಂದ, ಯಲ್ಲಾಪುರ, ಹಗರಿ ಗಜಾಪುರ, ಬಳಿಗನೂರು, ಗೌರಿಪುರ, ಹಾರಕನಾಳು, ಅರಸೀಕೆರೆ, ಹುಲಿಕಟ್ಟೆ, ಬೈರಾಪುರ, ರಾಗಿಮಸಲವಾಡ, ಕ್ಯಾರಕಟ್ಟೆ ಸೇರಿ ವಿವಿಧ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ‌

ಪ್ರಸಕ್ತ ಸಾಲಿನಲ್ಲಿ 22 ಕೊಳವೆಬಾವಿಗಳನ್ನು ಸರ್ಕಾರದಿಂದ ಕೊರೆಯಲಾಗಿದೆ. ನೀರಿನ ಕೊರತೆ ಎದುರಾಗಬಹುದಾದ ಗ್ರಾಮಗಳನ್ನು ಪಟ್ಟಿಕೊಂಡು, ನಿಗಾವಹಿಸುವುದಾಗಿ ಎಇಇ ಸಿದ್ದರಾಜು ತಿಳಿಸಿದ್ದಾರೆ.

ತಾಲ್ಲೂಕಿನಾದ್ಯಂತ 2020ರಲ್ಲಿ ಉತ್ತಮ ಮಳೆ ಸುರಿದಿದ್ದು, ಅಲ್ಲಲ್ಲಿ ಕೆರೆ, ಹಳ್ಳಗಳಲ್ಲಿ ನೀರು ನಿಂತಿದೆ. ಇದರಿಂದ ಏಪ್ರಿಲ್ ಅಂತ್ಯದವರೆಗೂ ನೀರಿನ ಕೊರತೆ ಎದುರಾಗುವ ಸಾಧ್ಯತೆ ಕಡಿಮೆ. ತುಂಗಭದ್ರಾ ನದಿಯಲ್ಲಿಯು ನೀರು ಇರುವ ಕಾರಣ, ಪಟ್ಟಣಕ್ಕೆ ಇನ್ನೂ ಒಂದೂವರೆ ತಿಂಗಳು ನೀರಿನ ಸಂಗ್ರಹವಿದೆ ಎಂದು ಮುಖ್ಯಾಧಿಕಾರಿ ನಾಗರಾಜ ನಾಯ್ಕ ಹೇಳಿದರು.

10 ವರ್ಷಗಳ ಹಿಂದೆ ಜಾರಿಯಾಗಿದ್ದ ರಾಜೀವಗಾಂಧಿ ಸಬ್ ಮಿಷನ್ ಬಹುಗ್ರಾಮ ನೀರಿನ ಯೋಜನೆ, ಬಹುವರ್ಷಗಳ ಹಿಂದೆಯೇ ಏತನೀರಾವರಿ ಉದ್ದೇಶಕ್ಕಾಗಿ ಜಾರಿಗೆ ತಂದಿದ್ದ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್, ತಾಲ್ಲೂಕಿನ 50 ಕೆರೆಗಳಿಗೆ ನದಿ ನೀರು ಹರಿಸುವ ಯೋಜನೆಗಳ ಕಾಮಗಾರಿ ಮುಗಿದರೆ ತಾಲ್ಲೂಕಿಗೆ ಇನ್ನಷ್ಟು ನೀರು ಹರಿದುಬರಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು