ಗುರುವಾರ , ಅಕ್ಟೋಬರ್ 28, 2021
18 °C
ಮುಖ್ಯಮಂತ್ರಿಗೆ ಇ–ಮೇಲ್‌ ಮಾಡಿದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಎಚ್‌.ರಾಂಪುರ ನಿವಾಸಿ ಬಿಂದು

ದಾವಣಗೆರೆ: ಊರಿಗೆ ರಸ್ತೆ ಆಗುವವರೆಗೂ ಮದುವೆ ಬೇಡ ಎಂದ ಯುವತಿ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಊರಿಗೆ ರಸ್ತೆ ಮಾಡಿಕೊಡುವವರೆಗೂ ಮದುವೆ ಆಗುವುದಿಲ್ಲ ಎಂದು ಯುವತಿಯೊಬ್ಬರು ಮುಖ್ಯಮಂತ್ರಿಗೆ ಇ–ಮೇಲ್‌ ಮಾಡಿದ್ದಾರೆ.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಎಚ್.ರಾಂಪುರದ ಯುವತಿ ಬಿಂದು ಆರ್‌.ಡಿ. ಈ ರೀತಿ ನಿರ್ಧಾರ ಕೈಗೊಂಡವರು. ಬಿಂದು ಅವರು ಬಿ.ಇಡಿ, ಎಂ.ಎ (ಅರ್ಥಶಾಸ್ತ್ರ) ಮಾಡಿ ಎರಡು ತಿಂಗಳಿನಿಂದ ಕೂಡಲಸಂಗಮದಲ್ಲಿ ಪ್ರೌಢಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. 

ಸುಮಾರು 50 ಮನೆಗಳಿರುವ, ಇನ್ನೂರರಷ್ಟು ಜನಸಂಖ್ಯೆ ಇರುವ ಪುಟ್ಟ ಊರು ಎಚ್‌.ರಾಂಪುರ. ಈ ಊರಿಗೆ ಸರಿಯಾದ ರಸ್ತೆಯೇ ಇಲ್ಲ. ಮಣ್ಣಿನ ರಸ್ತೆಯೊಂದು ಇದ್ದರೂ ಮಳೆ ಬಂದರೆ ಕೊಚ್ಚೆಯಾಗಿ ಬಿಡುತ್ತದೆ. ನಡೆದುಕೊಂಡು ಹೋಗುವವರೂ ಜಾರಿ ಬೀಳುತ್ತಾರೆ.

‘ಕಾಡುಗುಡ್ಡದ ನಡುವೆ ನಮ್ಮ ಊರಿದೆ. ಇಲ್ಲಿಗೆ ಹೊರಗಿನವರು ಯಾರೂ ಬರಲು ಒಪ್ಪುವುದಿಲ್ಲ. ಎಚ್‌.ರಾಂಪುರದಿಂದ ಹೆದ್ನೆವರೆಗೆ 5 ಕಿಲೋಮೀಟರ್‌ ದೂರಕ್ಕೆ ಒಂದು ರಸ್ತೆ ಮಾಡಿಕೊಡಿ ಎಂದು ಮೂರು ವರ್ಷಗಳ ಹಿಂದೆ ಪ್ರಧಾನಿ ನರೇದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ. ಅವರು ಸ್ಪಂದಿಸಿ, ರಸ್ತೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದಿಂದ ಎಚ್‌.ರಾಂಪುರ ಕಡೆಯಿಂದ ಎರಡು ಕಿಲೋಮೀಟರ್‌ವರೆಗೆ ರಸ್ತೆ ನಿರ್ಮಾಣವಾಯಿತು. ಅಲ್ಲಿಗೆ ನಿಂತು ಎರಡು ವರ್ಷ ಆಗಿದೆ. ಮುಂದಿನ ಮೂರು ಕಿಲೋಮೀಟರ್‌ ರಸ್ತೆಯೇ ಆಗಿಲ್ಲ. ಅನಿವಾರ್ಯವಾಗಿ ಮುಖ್ಯಮಂತ್ರಿಗೆ ಇ–ಮೇಲ್‌ ಮಾಡಬೇಕಾಯಿತು’ ಎಂದು ಬಿಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮದುವೆಗಾಗಿ ಎರಡು–ಮೂರು ಮಂದಿ ಮನೆಗೆ ಬಂದಿದ್ದರು. ಬಂದವರೆಲ್ಲರೂ ಇಲ್ಲಿಗೆ ಬರೋದು ಹೇಗೆ? ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ 5 ಕಿಲೋಮೀಟರ್‌ ಹೊತ್ತುಕೊಂಡು ಹೋಗಬೇಕಾಗುತ್ತದೆ ಎಂದು ಹೇಳಿ ವಾಪಸ್‌ ಹೋಗಿದ್ದಾರೆ. ಹೀಗಾಗಿ ಊರಿಗೆ ಹೇಗಾದರೂ ರಸ್ತೆ ಮಾಡಿಸಬೇಕು ಎಂದು ಮಗಳು ಪತ್ರ ಬರೆದಿದ್ದಾಳೆ’ ಎಂದು ಬಿಂದು ಅವರ ತಾಯಿ ಲತಾ ವಿವರಿಸಿದರು.

5ನೇ ತರಗತಿವರೆಗೆ ನಮ್ಮಲ್ಲೇ ಶಾಲೆ ಇದೆ. ಬಳಿಕ ಓದಬೇಕಾದರೆ ಮಾಯಕೊಂಡ, ಹುಚ್ಚವ್ವನಹಳ್ಳಿ, ಬಸವಾಪುರಗಳಿಗೆ ಹೋಗಬೇಕು. ಎಲ್ಲಿಗೆ ಹೋಗಬೇಕಿದ್ದರೂ 5 ಕಿಲೋಮೀಟರ್‌ ದೂರ ನಡೆಯಬೇಕು. ರಸ್ತೆ ನಿರ್ಮಾಣಗೊಳ್ಳಬೇಕು. ಆಮೇಲೆ ಊರಿಗೆ ಬಸ್‌ ಬರಬೇಕು ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು