ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆನೂ ಮಾಡ್ತೀವಿ, ಲಗ್ನನೂ ಮಾಡ್ತೀವಿ: ಯುವತಿಗೆ ದಾವಣಗೆರೆ ಜಿಲ್ಲಾಧಿಕಾರಿ ಭರವಸೆ

ರಸ್ತೆಯಾಗುವವರೆಗೂ ಮದುವೆಯಾಗಲ್ಲ ಎಂದ ಯುವತಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಪಂದನೆ
Last Updated 17 ಸೆಪ್ಟೆಂಬರ್ 2021, 2:27 IST
ಅಕ್ಷರ ಗಾತ್ರ

ದಾವಣಗೆರೆ: ‘ಎಚ್‌. ರಾಂಪುರಕ್ಕೆ ರಸ್ತೆನೂ ಮಾಡ್ತೀವಿ, ಆ ಯುವತಿಗೆ ಲಗ್ನನೂ ಮಾಡ್ತೀವಿ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭರವಸೆ ನೀಡಿದ್ದಾರೆ.

ತಮ್ಮ ಊರಿಗೆ ರಸ್ತೆ ಮಾಡಿಕೊಡುವವರೆಗೂ ಮದುವೆಯಾಗಲ್ಲ ಎಂದು ಮುಖ್ಯಮಂತ್ರಿಗೆ ಮಾಯಕೊಂಡ ಹೋಬಳಿಯ ಹೆದ್ನೆ ರಾಂಪುರದ ಬಿಂದು ಆರ್.ಡಿ. ಇಮೇಲ್‌ ಕಳುಹಿಸಿದ್ದರು. ಮಾಧ್ಯಮಗಳಲ್ಲಿ ಇದು ಪ್ರಕಟ ಮತ್ತು ಪ್ರಸಾರ ಆಗಿದ್ದರಿಂದ ಎಚ್‌. ರಾಂಪುರಕ್ಕೆ ಜಿಲ್ಲಾಧಿಕಾರಿ ಗುರುವಾರ ಭೇಟಿ ನೀಡಿದ ಬಳಿಕ ಈ ಭರವಸೆ ನೀಡಿದರು.

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಯುವತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು. ರಾಂಪುರದಿಂದ ಹೆದ್ನೆವರೆಗೆ 2 ಕಿ.ಮೀ. ರಸ್ತೆ ಆಗಿದೆ, ಬಾಕಿ ಉಳಿದಿರುವ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು. ವಾಹನಗಳು ಓಡಾಡುವಂತಾಗಲು ತಾತ್ಕಾಲಿಕವಾಗಿ ರಸ್ತೆ ನಿರ್ಮಿಸುವ ಕಾರ್ಯ ಪ್ರಾರಂಭಿಸಲಾಗುವುದು. ಈಗಾಗಲೇ ರಸ್ತೆ ನಿರ್ಮಾಣಕ್ಕಾಗಿ ₹ 60 ಲಕ್ಷ ವೆಚ್ಚದ ಯೋಜನೆ ತಯಾರಿಸಿ, ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಮಂಜೂರಾತಿ ದೊರೆತ ಕೂಡಲೇ ಪೂರ್ಣ ಪ್ರಮಾಣದ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

‘ನಾಳೆಯಿಂದಲೇ ವಾಹನಗಳು ಓಡಾಡುವಂತೆ ಮಾಡಲಾಗುವುದು. ಸರ್ಕಾರದ ಮಂಜೂರಾತಿ ದೊರೆತ ಕೂಡಲೇ ಉತ್ತಮ ರಸ್ತೆಯನ್ನೂ ನಿರ್ಮಿಸಲಾಗುವುದು. ನಿಮ್ಮ ಮದುವೆಯೂ ಆಗುವಂತೆ ಮಾಡುತ್ತೇವೆ’ ಎಂದು ಬಿಂದುಗೆ ಭರವಸೆ ನೀಡಿದರು.

ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪರಮೇಶ್ವರಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹದೇವಪ್ಪ, ವಿವಿಧ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT