ಬುಧವಾರ, ಮಾರ್ಚ್ 29, 2023
32 °C
‘ಪ್ರಜಾವಾಣಿ’ಯ ಮಾಸ್ಟರ್‍ ಮೈಂಡ್‍ ಇ– ಪತ್ರಿಕೆಯ ಪೋಸ್ಟರ್‌ ಬಿಡುಗಡೆ

ಕಠಿಣ ಪರಿಶ‍್ರಮದಿಂದ ಸಾಧನೆ ಸಾಧ್ಯ: ಶಾಸಕ ಎಸ್‍. ರಾಮಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಸಾಧನೆಗೆ ವಯಸ್ಸು, ಜಾತಿ, ಧರ್ಮ ಹಾಗೂ ಅಂತಸ್ತಿನ ಗಡಿಗಳಿಲ್ಲ. ಧೃಢ ವಿಶ‍್ವಾಸ, ಪರಿಶ್ರಮ ಹಾಗೂ ನಿಶ್ಚಿತ ಗುರಿ ಇದ್ದರೆ ಯಶಸ್ಸು ಸಾಧ್ಯ ಎಂದು ಶಾಸಕ ಎಸ್‍. ರಾಮಪ್ಪ ಅಭಿಪ್ರಾಯಪಟ್ಟರು.

ನಗರದ ಎಸ್‍ಜೆವಿಪಿ ಕಾಲೇಜಿನ ಗುರುಸಿದ್ದಪ್ಪ ಸಭಾಂಗಣದಲ್ಲಿ ಭಾನುವಾರ ಎನ್‍.ಎಚ್‍. ಶ‍್ರೀನಿವಾಸ್ ಬಳಗದಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ‘ಪ್ರಜಾವಾಣಿ’ಯ ಮಾಸ್ಟರ್‍ ಮೈಂಡ್‍ ಪತ್ರಿಕೆಯ ಪೋಸ್ಟರ್‌ಗಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸ್ನೇಹ ಬಳಗದಿಂದ 1 ವರ್ಷ ನಡೆಯುವ ತರಬೇತಿ ಶಿಬಿರ ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ. ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ತರಬೇತಿ ಶಿಬಿರದ 1 ತಿಂಗಳ ಸಂಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ ಎಂದು ತಿಳಿಸಿದರು.

ಪರೀಕ್ಷೆ ಕಾರ್ಯಾಗಾರದ ನಾಮಫಲಕ ಉದ್ಘಾಟಿಸಿದ ವಿಶ್ರಾಂತ ಪ್ರಾಂಶುಪಾಲ ಎಸ್‍.ಎಚ್‍. ಪ್ಯಾಟಿ, ‘ನಿಶ್ಚಿತ ಗುರಿ ಹೊಂದಿದ ವಿದ್ಯಾರ್ಥಿಗಳಿಂದ ಮಾತ್ರ ಸಾಧನೆಯನ್ನು ನಿರೀಕ್ಷಿಸಬಹುದು. ಮಾನಸಿಕ ಹಾಗೂ ಬೌದ್ಧಿಕ ಇತಿ-ಮಿತಿಯಲ್ಲಿ ಗುರಿಗಳನ್ನು ನಿರ್ಧರಿಸಿಕೊಳ್ಳಿ. ಗುರಿ ಸಾಧನೆಯಲ್ಲಿ ಎದುರಾಗುವ ಸೋಲು ಹಾಗೂ ವೈಫಲ್ಯಗಳು ಅಂತಿಮವಲ್ಲ’ ಎಂದರು.

‘ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜಾತಿ ವ್ಯಾಮೋಹದಿಂದ ತಾಲ್ಲೂಕಿನಲ್ಲಿ ವ್ಯವಸ್ಥೆ ದಿಕ್ಕು ತಪ್ಪಿದೆ. ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಸುಸಜ್ಜಿತ ಗ್ರಂಥಾಲಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿ’ ಎಂದು ಮನವಿ ಮಾಡಿದರು.

‘ಪ್ರಜಾವಾಣಿ’ ದಾವಣಗೆರೆ ಬ್ಯೂರೊ ಮುಖ್ಯಸ್ಥ ವಿಶಾಖ ಎನ್‌. ಮಾತನಾಡಿ, ‘ಸ್ನೇಹ ಬಳಗದ ಪರಿಕಲ್ಪನೆ ತಾಲ್ಲೂಕಿನಲ್ಲಿ ನವ ಚೈತನ್ಯಕ್ಕೆ ನಾಂದಿ ಹಾಡಿದೆ. ಸಮಾಜಮುಖಿ ಪ್ರಯೋಗಗಳಿಗೆ ‘ಪ್ರಜಾವಾಣಿ’ ಸಂಸ್ಥೆ ಸದಾ ಪೂರಕವಾಗಿರುತ್ತದೆ. ಮಾಸ್ಟರ್‌ಮೈಂಡ್‌ ಇ-ಪತ್ರಿಕೆ ಮೂಲಕ ತಲಾ 2 ಪುಟ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಪ್ರಸ್ತುತ ವಿದ್ಯಮಾನ ಹಾಗೂ ಸ್ಪರ್ಧಾತ್ಮ ಪರೀಕ್ಷೆಗೆ ಪೂರಕವಾದ ಮಾಹಿತಿ ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಒದಗಿಸುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್‍.ಎಚ್‍. ಶ್ರೀನಿವಾಸ್‍ ಮಾತನಾಡಿ, ‘ಗ್ರಾಮೀಣ ಪ್ರದೇಶದ ಹಾಗೂ ಬಡ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸಲು ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರಾರ್ಥಿಗಳು ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗಬೇಕು’ ಎಂದು ತಿಳಿಸಿದರು.

ಕಾರ್ಯಾಗಾರವನ್ನು ಪೌರಾಯುಕ್ತೆ ಎಸ್‍. ಲಕ್ಷ್ಮೀ ಉದ್ಘಾಟಿಸಿದರು. ನಗರಸಭೆ ಸದಸ್ಯ ಶಂಕರ್ ಖಟಾವಕರ, ಎಸ್‍ಜೆಪಿವಿವಿ ಪೀಠದ ಕಾರ್ಯದರ್ಶಿ ಆರ್‍.ಟಿ. ಪ್ರಶಾಂತ ದುಗ್ಗತ್ತಿಮಠ್, ನಿರ್ದೇಶಕ ಎನ್‍.ಎಂ. ತಿಪ್ಪೇಸ್ವಾಮಿ, ಚಾಣಕ್ಯ ಕೋಚಿಂಗ್‍ ಸೆಂಟರ್‌ ನಿರ್ದೇಶಕ ಚಿದಂಬರ, ಸುರೇಶ್‍ ರಾಜೇನವರ್‍ ಮಾತನಾಡಿದರು.

ಉಪನ್ಯಾಸಕ ಬಿ.ಡಿ. ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ನಂದೀಶ್‍ ವಂದಿಸಿದರು. ಪ್ರಾಧ‍್ಯಾಪಕ ಬಿ.ಬಿ. ರೇವಣನಾಯಕ್‍ ನಿರೂಪಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರಪ್ಪ, ನಿವೃತ್ತ ಪ್ರಾಂಶುಪಾಲ ಸಿದ್ದಪ್ಪ, ಆಟೊ ಚಾಲಕರ ಸಂಘದ ಅಧ್ಯಕ್ಷ ಮೋಹನ್, ವಿದ್ಯಾರ್ಥಿಗಳು, ಪೋಷಕರು, ಸ್ನೇಹ ಬಳಗದ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು