ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವಿತರಕರು ಪತ್ರಿಕಾ ಮಾಧ್ಯಮದ ಆಧಾರಸ್ತಂಭ’

ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗ
Published 25 ಮೇ 2024, 16:28 IST
Last Updated 25 ಮೇ 2024, 16:28 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ಪತ್ರಿಕಾ ವಿತರಕರು ಪತ್ರಿಕಾ ಮಾಧ್ಯಮದ ಆಧಾರಸ್ತಂಭಗಳು. ನಸುಕಿನ ವೇಳೆ ಪತ್ರಿಕೆಗಳನ್ನು ಹಂಚುವ ಮೂಲಕ ಸುದ್ದಿಗಳನ್ನು ತಲುಪಿಸುವ ಮಹಾತ್ಕಾರ್ಯ ಮಾಡುತ್ತಿರುವ ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ದೊರಕಿಸುವ ಅವಶ್ಯಕತೆಯಿದೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗ ಅಭಿಪ್ರಾಯಪಟ್ಟರು. 

ಕಡರನಾಯ್ಕನಹಳ್ಳಿ ಗ್ರಾಮದ ಎಚ್.ಎನ್.ಟಿ ತೋಟದ ಮನೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಾಂತರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಹರಿಹರ ತಾಲ್ಲೂಕು ಘಟಕದ ಸ್ನೇಹ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ವಿತರಕರು ಹೆಚ್ಚೆಚ್ಚು ಪತ್ರಿಕೆಗಳನ್ನು ಮನೆಗಳಿಗೆ ತಲುಪಿಸುವ ಮೂಲಕ ಹೆಚ್ಚು ಆದಾಯ ಗಳಿಸುವಂತಾಗಬೇಕು. ಈ ವೃತ್ತಿ ಬಗ್ಗೆ ಕೀಳರಿಮೆ ಬೇಡ. ಸಾರ್ವಜನಿಕರು ಹಾಗೂ ಪತ್ರಿಕಾ ಸಂಸ್ಥೆಯ ನಡುವಿನ ಸೇತುವೆಯಾಗಿ ವಿತರಕರು ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿತರಕರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಿಕೊಡಲು ಒಕ್ಕೂಟ ಪ್ರಯತ್ನಿಸುತ್ತದೆ’ ಎಂದು ಭರವಸೆ ನೀಡಿದರು. 

‘ಎಲ್ಲ ವಿತರಕರು ಕಾರ್ಮಿಕ ಇಲಾಖೆಯ ಇ–ಶ್ರಮ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ಅಪಘಾತ ವಿಮೆ ಮತ್ತು ಗಂಭೀರ ಕಾಯಿಲೆಗಳಿಗೆ ಹಣ ಮರುಪಾವತಿ ಸೌಲಭ್ಯಗಳು ಲಭಿಸುತ್ತವೆ’ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಅಧಿಕಾರಿ ಚಿಕ್ಕಣ್ಣ ಸಲಹೆ ನೀಡಿದರು. 

‘ವಿತರಕರು ದ್ವಿಚಕ್ರ ವಾಹನಗಳಲ್ಲಿ ತೆರಳಿ ಪೇಪರ್ ಹಂಚುತ್ತಾರೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಬೈಕ್‌ಗಳಿಗೆ ವಿಮೆ ಮಾಡಿಸಬೇಕು. ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವಿರಬೇಕು’ ಎಂದು ಮಲ್ಲಿಕಾರ್ಜುನ್ ಕಲಾಲ್ ತಮ್ಮ ಉಪನ್ಯಾಸದಲ್ಲಿ ತಿಳಿಹೇಳಿದರು. 

ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಎನ್. ತಿಪ್ಪೇಶ್, ‘ಪ್ರಜಾವಾಣಿ’ ಪ್ರಸರಣ ವಿಭಾಗದ ಸತೀಶ್ ಚಂದು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ‘ಪ್ರಜಾವಾಣಿ’ ಬಳಗದ ಬಿಡ್ಡಪ್ಪ ಭಾಗವಹಿಸಿದ್ದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ ಮಂಜುನಾಥ್ ಪತ್ರಿಕಾ ವಿತರಕರಿಗೆ ಗುರುತಿನ ಪತ್ರ ವಿತರಿಸಿದರು.

ಪತ್ರಿಕಾ ವಿತರಕರಾದ ಕೆ.ಎನ್ ನಾಗೇಂದ್ರಪ್ಪ, ಎಸ್.ಎಸ್. ಗಣೇಶ್, ಸೋಮಶೇಖರಾಚಾರಿ, ಎಸ್.ಹನುಮಂತಪ್ಪ, ಶಿವಕುಮಾರ್, ತಿಮ್ಮನಗೌಡ, ತಿಪ್ಪೆರುದ್ರಸ್ವಾಮಿ, ಮಂಜುನಾಥ ರೆಡ್ಡಿ, ಎಸ್. ಭೀಮಣ್ಣ, ಎ.ಬಿ. ವೀರಯ್ಯ, ವಿನಾಯಕ, ಕಸ್ತೂರಮ್ಮ, ಡಿ.ಕೆ. ನಿಂಗಪ್ಪ, ಮಹಾಂತಯ್ಯಸ್ವಾಮಿ, ರಾಜು ಅವರನ್ನು ಸನ್ಮಾನಿಸಲಾಯಿತು.

ಕೆ.ನಾಗೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ್ ಸ್ವಾಗತಿಸಿದರು. ‘ಪ್ರಜಾವಾಣಿ’ ಅರೆಕಾಲಿಕ ವರದಿಗಾರ ವಿ.ನಾಗೇಂದ್ರಪ್ಪ, ಪತ್ರಕರ್ತ ಪ್ರಕಾಶ್ ಜಿಗಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT