ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮಳೆಗಾಲದಲ್ಲಿ ಬಿರು ಬಿಸಿಲು... ಹೆಚ್ಚಿದ ಝಳ

ಏಪ್ರಿಲ್ ನೆನಪಿಸುತ್ತಿರುವ ಅಕ್ಟೋಬರ್‌... ಮಳೆ ಕೊರತೆಯಿಂದ ವಾತಾವರಣದಲ್ಲಿ ಏರುಪೇರು...
Published 10 ಅಕ್ಟೋಬರ್ 2023, 8:05 IST
Last Updated 10 ಅಕ್ಟೋಬರ್ 2023, 8:05 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಅಕ್ಟೋಬರ್‌ ತಿಂಗಳ ಆರಂಭದಲ್ಲೇ ಬಿಸಿಲ ಬೇಗೆ ಹೆಚ್ಚಿದೆ. ಮಳೆಯ ಕೊರತೆಯಿಂದ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಬಿಸಿಲ ಝಳಕ್ಕೆ ಜನರು ಹೈರಾಣಾಗಿದ್ದಾರೆ.

ಒಂದು ವಾರದಿಂದ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಸೋಮವಾರ 34 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇತ್ತು. ಬಿಸಿಲ ಬೇಗೆಯಿಂದ ಜನರು ಹೊರಗೆ ಓಡಾಡದಂತಾಗಿದೆ. ಬಿಸಿಲು ಹೆಚ್ಚಾಗಿರುವುದರಿಂದ ಕಾರ್ಮಿಕರು, ತರಕಾರಿ, ಹಣ್ಣು ಮಾರಾಟಗಾರರು ಸೇರಿದಂತೆ ಉದ್ಯೋಗಿಗಳು ಪರದಾಡುವಂತಾಗಿದೆ.

ಮಳೆಗಾಲದಲ್ಲೇ ಈ ರೀತಿಯಾದರೆ ಮುಂದೆ ಹೇಗೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಮಳೆ ಇಲ್ಲದೇ ಜಮೀನಿನಲ್ಲಿ ಎಲ್ಲ ಬೆಳೆಗಳು ಒಣಗುತ್ತಿವೆ. ಬಿಸಿಲು ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಮಳೆ ಸುರಿಯುತ್ತಿಲ್ಲ. ಬೆಳೆ ನಷ್ಟದ ಆತಂಕ ರೈತರನ್ನು ಕಾಡುತ್ತಿದೆ. ಹವಾಮಾನ ವೈಪರೀತ್ಯದಿಂದ ಧಗೆ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳೂ ಹರಡಲಾರಂಭಿಸಿವೆ.

ಕಳೆದ ವರ್ಷ ಅಕ್ಟೋಬರ್‌ 8ರಂದು 26 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ಇತ್ತು. ಈ ವರ್ಷದ ಅದೇ ದಿನ 34 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಎರಡು ಮೂರು ವರ್ಷಗಳಿಗೆ ಹೋಲಿಸಿದರೆ ಅಕ್ಟೋಬರ್‌ ಮೊದಲ ವಾರದಲ್ಲಿ ಉಷ್ಣಾಂಶ 26–27 ಡಿಗ್ರಿಯ ಆಸುಪಾಸಿನಲ್ಲಿತ್ತು. ಈ ಬಾರಿ ಅದರ ಪ್ರಮಾಣ ತುಸು ಹೆಚ್ಚೇ ಏರಿದೆ.

2016ರ ಏಪ್ರಿಲ್‌ ತಿಂಗಳ 27ರಂದು 40.5 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಇದು ಜಿಲ್ಲೆಯ ಮಟ್ಟಿಗೆ ದಾಖಲಾದ ಈವರೆಗಿನ ಅತಿ ಹೆಚ್ಚಿನ ಉಷ್ಣಾಂಶ. ಇದನ್ನು ಹೊರತುಪಡಿಸಿ ಪ್ರತಿ ವರ್ಷ 39 ಡಿಗ್ರಿಯ ಗಡಿ ದಾಟಿರಲಿಲ್ಲ. ಅಕ್ಟೋಬರ್‌ನಲ್ಲೇ 34 ಡಿಗ್ರಿ ಸೆಲ್ಸಿಯಸ್‌ ಇರುವುದು ಬೇಸಿಗೆಯ ದಿನಗಳ ಲೆಕ್ಕಾಚಾರಕ್ಕೆ ಪುಷ್ಟಿ ನೀಡಿದೆ.

‘ಬಿಸಿಲು ಹೆಚ್ಚಾಗಿರುವುದರಿಂದ ತರಕಾರಿ ಸಂಗ್ರಹಿಸುವುದು ಸವಾಲಾಗಿದೆ. ಜನರು ಪ್ರತಿದಿನ ತಾಜಾ ತರಕಾರಿ ಕೇಳುತ್ತಾರೆ. ಬಿಸಿಲು ಮುಂದುವರಿದರೆ ವ್ಯಾಪಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ‘ ಎನ್ನುತ್ತಾರೆ ವ್ಯಾಪಾರಿ ಅಶೋಕ್ ಬೇತೂರು.

‘ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ಈ ಪರಿಯ ಬಿಸಿಲನ್ನು ಹಿಂದೆ ಕಂಡಿರಲಿಲ್ಲ. ಕಳೆದ 5 ವರ್ಷಗಳಲ್ಲೂ ಆಗಾಗ ಮಳೆಯಾಗುತ್ತಿದ್ದರಿಂದ ಈ ತಿಂಗಳಲ್ಲಿ ಬಿಸಿಲು ಇಷ್ಟೊಂದು ಇರಲಿಲ್ಲ. ಆದರೆ, ಈಗ ನೋಡಿದರೆ ಭಯವಾಗುತ್ತಿದೆ. ಎಲ್ಲವೂ ಪರಿಸರ ನಾಶದ ಪರಿಣಾಮ’ ಎಂದು ಕಳವಳ ವ್ಯಕ್ತಪಡಿಸಿದರು ಹಿರಿಯರಾದ ವೀರಯ್ಯಸ್ವಾಮಿ.

ಅಕ್ಟೋಬರ್ ತಿಂಗಳಲ್ಲಿ ಉಷ್ಣಾಂಶ ಹೆಚ್ಚಿರುವುದು ಪ್ರಕೃತಿ ಅಸಮತೋಲನ ಪರಿಣಾಮ ಎನ್ನುತ್ತಾರೆ ವಿಜ್ಞಾನಿಗಳು.

‘ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದರೆ ಮಳೆಯಲ್ಲಿ ಬದಲಾವಣೆ ಕಾಣಬಹುದು. ಆದರೂ ಮಳೆಯ ಬಗ್ಗೆ ನಿಖರವಾಗಿ ಏನನ್ನೂ ಹೇಳಲು ಆಗದು. ಗಾಳಿಯ ವೇಗ ಆಧರಿಸಿ ಮಳೆಯ ಮುನ್ಸೂಚನೆ ನಿರ್ಧರಿತವಾಗುತ್ತದೆ. ಹವಾಮಾನದ ಬಗ್ಗೆ ನಿಖರವಾಗಿ ಹೇಳಲು ಆಗುತ್ತಿಲ್ಲ’ ಎಂದು ಬಬ್ಬೂರು ಫಾರಂನ ಗ್ರಾಮೀಣ ಕೃಷಿ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಆರ್‌. ನಾಗರಾಜ್ ಹೇಳಿದರು.

‘ಕೆರೆ, ಕಟ್ಟೆಗಳ ನೀರು ಆವಿಯಾಗಿ ವಾತಾವರಣದಲ್ಲಿ ತೇವಾಂಶ ಇರುತ್ತಿತ್ತು. ಆದರೆ ಈಗ ತೇವಾಂಶದ ಕೊರತೆ ಹೆಚ್ಚಿದೆ. ಹವಾಮಾನ ವೈಪರೀತ್ಯ ಮಳೆಯ ಮೇಲೆ ಪರಿಣಾಮ ಬೀರಿದೆ. ಈ ಬಾರಿ ಒಣ ಉಷ್ಣಾಂಶ ಇದೆ. ಹೀಗಾಗಿ ಸಹಜವಾಗಿ ಬಿಸಿಲು ಏರಿಕೆಯಾಗಿದೆ’ ಎಂದು ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾ ವಿಜ್ಞಾನಿ ಗಂಗಪ್ಪಗೌಡ ವಿವರಿಸಿದರು. 

‘ಒಂದು ಮಳೆಯಾದರೆ ಉಷ್ಣಾಂಶ ಇಳಿಯಲಿದೆ. ಪರಿಸರ ಅಸಮತೋಲನದಿಂದ ಬಿಸಿಲು ಹೆಚ್ಚಾಗಿದೆ. ಈ ಬಗ್ಗೆ ನಾವು ಗಂಭೀರವಾಗಿ ಆಲೋಚಿಸುವ ಅಗತ್ಯ ಇದೆ’ ಎಂದು ಅವರು ಎಚ್ಚರಿಸಿದರು. 

ಜಿಲ್ಲೆಯಲ್ಲಿ ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ

ಮಳೆ ಕೊರತೆಯ ಕಾರಣ

‘ಮಳೆಯ ಕೊರತೆಯ ಕಾರಣ ಸಹಜವಾಗಿ ಬಿಸಿಲಿನ ಝಳ ಹೆಚ್ಚಾಗಿದೆ. ವಾತಾವರಣದಲ್ಲಿ ತೇವಾಂಶ ಇಲ್ಲದ ಕಾರಣ ಬಿಸಿಲು ಹೆಚ್ಚಳವಾಗುವುದು ಸಾಮಾನ್ಯ ವಿದ್ಯಮಾನ. ತೇವಾಂಶ ಇದ್ದರೆ ಉಷ್ಣಾಂಶವನ್ನು ತಗ್ಗಿಸುತ್ತದೆ. ಶೇ 75ರಷ್ಟು ಮಳೆಯ ಕೊರತೆಯಾಗಿದೆ. ಹವಾಮಾನದಲ್ಲಿ ಬದಲಾವಣೆ ಗಮನಿಸಿದರೆ ಮಳೆ ಯಾವಾಗ ಬರುತ್ತದೆ ಎಂದು ನಿಖರವಾಗಿ ಹೇಳಲ ಆಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇದು ಸಾಮಾನ್ಯವಾಗಿದೆ’ ಎಂದು ಬಬ್ಬೂರು ಫಾರಂನ ಗ್ರಾಮೀಣ ಕೃಷಿ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಆರ್. ನಾಗರಾಜ್ ಹೇಳಿದರು.

ಫ್ಯಾನ್‌ ಸುತ್ತದಿದ್ದರೆ ಇರಲಾಗದು

ಒಂದು ವಾರದ ಹಿಂದೆ ಜಿಲ್ಲೆಯಲ್ಲಿನ ವಾತಾವರಣವೇ ಭಿನ್ನವಾಗಿತ್ತು. ಮೋಡ ಕವಿದ ವಾತಾವರಣ ಇತ್ತು. ಆಗಾಗ ತುಂತುರು ಮಳೆಯಾಗುತ್ತಿತ್ತು. ಇದರಿಂದ ತಂಪಾದ ವಾತಾವರಣ ಇತ್ತು. ಆದರೆ ಈಗ ಬಿಸಿಲಿನ ಝಳ ಹೆಚ್ಚಿದೆ. ಬಿಸಿಲಿನ ತಾಪಕ್ಕೆ ಹಗಲು– ರಾತ್ರಿ ಹೊತ್ತು ಮನೆಯಲ್ಲಿ ಇರಲು ಆಗದ ಸ್ಥಿತಿ ನಿದೆ. ಇದರ ಜತೆಗೆ ಪದೇ ಪದೇ ವಿದ್ಯುತ್‌ ಕೈಕೊಡುತ್ತಿದೆ. ಇದರಿಂದ ಫ್ಯಾನ್‌ ಇಲ್ಲದೇ ಮನೆಯಲ್ಲಿ ಇರಲು ಆಗುತ್ತಿಲ್ಲ ಎಂಬುದು ಜಿಲ್ಲೆಯ ಜನರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT