ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ: ಸೊಪ್ಪು ಬೆಳೆಗೆ ಹಾನಿ | ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ

Last Updated 19 ಸೆಪ್ಟೆಂಬರ್ 2022, 2:25 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಸತತ ಮಳೆಗೆ ಸೊಪ್ಪಿನ ಮಡಿಗಳಲ್ಲಿ ವಿವಿಧ ಸೊಪ್ಪಿನ ಬೆಳೆಗಳು ನಾಶವಾಗಿದ್ದು, ಪೂರೈಕೆಯ ಕೊರತೆ ಉಂಟಾಗಿರುವುದರಿಂದ ಸೊಪ್ಪಿನ ಬೆಲೆ ಗಗನಕ್ಕೇರಿದೆ. ಸೊಪ್ಪಿನ ಬೆಲೆ ಕೇಳಿ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ.

ಈ ವಾರದಲ್ಲಿ ಕೊತ್ತಂಬರಿ, ಪಾಲಕ್, ಮೆಂಥ್ಯೆ ಸೊಪ್ಪಿನ ಬೆಲೆ ಪ್ರತಿ ಕಟ್ಟಿಗೆ ₹20, ಸಬ್ಬಸಿಗೆ ಪ್ರತಿ ಕಟ್ಟಿಗೆ ₹15, ಪುದೀನ, ಎಳೆ ಅರಿವೆ ಪ್ರತಿ ಕಟ್ಟಿಗೆ ₹10 ದರ ನಿಗದಿಗೊಂಡಿವೆ.

‘ಅಡಿಕೆ ತೋಟಗಳು ಹೆಚ್ಚಾದಂತೆ ಸೊಪ್ಪು ಬೆಳೆ ಪ್ರದೇಶ ಕುಸಿದಿತ್ತು. ಅದರಲ್ಲೂ ಕೆಲವರು ಸೊಪ್ಪು ಬೆಳೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ತೀವ್ರ ಮಳೆಗೆ ಬೆಳೆದ ಸೊಪ್ಪು ನಲುಗಿದೆ. ಕೊತ್ತಂಬರಿ, ಪಾಲಕ್, ಎಳೆ ಅರಿವೆ, ಸಬ್ಬಸಿಗೆ, ಪುದೀನ ಸೊಪ್ಪಿನ ಬೀಜ ಚೆಲ್ಲಲು ₹6 ಸಾವಿರ ಖರ್ಚು ಮಾಡಿದ್ದೆ. ಚೆಲ್ಲಿದ ಬೀಜ ಮೊಳಕೆಯೊಡೆಯಲಿಲ್ಲಿ. ಹಾಗಾಗಿ ಸೊಪ್ಪಿನ ಲಭ್ಯತೆ ಈ ಭಾಗದಲ್ಲಿ ಇಲ್ಲವೇ ಇಲ್ಲ’ ಎನ್ನುತ್ತಾರೆ ಸೊಪ್ಪು ಬೆಳೆವ ರೈತ ಪ್ರಶಾಂತ್.

‘2 ಎಕರೆಯಲ್ಲಿ 6 ಬಗೆಯ ಸೊಪ್ಪು ಬೆಳೆ ಇತ್ತು. ಅಧಿಕ ಮಳೆಯಿಂದ ಸೊಪ್ಪು ಕೊಳೆತು ಹಳದಿ ಬಣ್ಣಕೆ ತಿರುಗಿದೆ. ಸುಮಾರು ₹70 ಸಾವಿರ ಖರ್ಚು ಮಾಡಿದ್ದೆ. ಸೊಪ್ಪು ಬೆಳೆಯುವುದೇ ನಮ್ಮ ಕಾಯಕ. ಈ ಬಾರಿ ಪೂರ್ಣ ನಷ್ಟ ಅನುಭವಿಸಿದೆ’ ಎನ್ನುತ್ತಾರೆ ದೇವರಹಳ್ಳಿ ರೈತ ರಂಗಪ್ಪ.

‘ದಾವಣಗೆರೆ – ಚಿತ್ರದುರ್ಗದಿಂದ ಸೊಪ್ಪು ಸಗಟು ವ್ಯಾಪಾರದಲ್ಲಿ ಖರೀದಿಸುತ್ತೇನೆ. ಕೊತಂಬರಿ ಸೊಪ್ಪು 100 ಕಟ್ಟಿಗೆ ₹1800 ಕೊಟ್ಟು ತರಬೇಕು. ಪ್ರತಿ ಕಟ್ಟಿಗೆ ₹2 ಲಾಭ ಸಿಗಲಿದೆ. ಸೊಪ್ಪಿನ ಬೆಲೆ ಕೇಳಿ ಕೆಲವರು ಕೊಳ್ಳದೇ ಮುಂದೆ ಸಾಗುತ್ತಾರೆ. ಮಳೆಗಾಲಕ್ಕೆ ಮುಂಚೆ ಕೇವಲ ₹10ಕ್ಕೆ 3 ರಿಂದ 4 ಕಟ್ಟು ಸೊಪ್ಪು ಮಾರುತ್ತಿದ್ದೆ’ ಎನ್ನುತ್ತಾರೆ ಸೊಪ್ಪಿನ ವ್ಯಾಪಾರಿ ಸಾಕಮ್ಮ.

‘ಹೋಟೆಲ್ ನಡೆಸಲು ನಿತ್ಯ 10ರಿಂದ 15 ಕಟ್ಟು ಕೊತ್ತಂಬರಿ ಸೊಪ್ಪು ಬೇಕು. ತಾತ್ಕಾಲಿಕವಾಗಿ ಬೆಲೆ ಏರಿಕೆಯಾಗಿದೆ. ಮಳೆ ಕಡಿಮೆ ಆದಲ್ಲಿ ಬೆಲೆ ಇಳಿಯಬಹುದು’ ಎನ್ನುತ್ತಾರೆ ಉಮಾಕಾಂತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT