ಸೋಮವಾರ, ಆಗಸ್ಟ್ 15, 2022
23 °C
ಕೊರೊನಾ ಸಂಕಷ್ಟದಲ್ಲಿ ‘ಹೆಲ್ಮೆಟ್‌ ಹೊರೆ’: ಬೈಕ್‌ ಸವಾರರ ಅಸಮಾಧಾನ

ನಗರದಲ್ಲಿ ಹೆಲ್ಮೆಟ್ ಮಾರಾಟ ಜೋರು

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಐಎಸ್‌ಐ ಗುಣಮಟ್ಟದ ಪೂರ್ಣ ಹೆಲ್ಮೆಟ್‌ ಕಡ್ಡಾಯ ಮಾಡಿರುವುದರಿಂದ ನಗರದಲ್ಲಿ ಹೆಲ್ಮೆಟ್‌ ಮಾರಾಟ ಜೋರಾಗಿದೆ. ನಗರದ ಬಹುತೇಕ ಕಡೆ ರಸ್ತೆ ಬದಿ, ಅಂಗಡಿಗಳಲ್ಲಿ ಹೆಲ್ಮೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

ಕೆಲವು ಬೈಕ್‌ ಬಿಡಿಭಾಗಗಳನ್ನು ಮಾರಾಟ ಮಾಡುವ ಅಂಗಡಿ, ಕುಷನ್‌ ವರ್ಕ್ಸ್‌ ಅಂಗಡಿ, ಟೈರ್‌ ಅಂಗಡಿಗಳ ಎದುರು ಹೆಲ್ಮೆಟ್‌ಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಪಿ.ಬಿ.ರಸ್ತೆ, ಸಿದ್ದಪ್ಪಯ್ಯ ಸರ್ಕಲ್‌, ಹದಡಿ ರಸ್ತೆ ಸೇರಿ ಹಲವೆಡೆ ಹೆಲ್ಮೆಟ್‌ ಮಾರಾಟ ಜೋರಾಗಿತ್ತು. ಪೂರ್ಣ ಹೆಲ್ಮೆಟ್‌ಗಳನ್ನೇ ಬೈಕ್‌ ಸವಾರರು ಖರೀದಿಸುತ್ತಿದ್ದುದು ಕಂಡುಬಂತು.

‘ಬ್ರ್ಯಾಂಡೆಡ್‌ ಕಂಪನಿಗಳ ಹೆಲ್ಮೆಟ್‌ ಕೊಡಿ. ಬೆಲೆ ಹೆಚ್ಚಾಯಿತು ಸ್ವಲ್ಪ ಕಮ್ಮಿ ಮಾಡಿ’ ಎಂದು ಗ್ರಾಹಕರು ಚೌಕಾಸಿ ಮಾಡುತ್ತಿದ್ದರೆ, ಬ್ರ್ಯಾಂಡೆಡ್ ಬೆಲೆ ಜಾಸ್ತಿ ಸರ್‌. ಸ್ವಲ್ಪ ಕಡಿಮೆಯ ಬೇರೆ ಕಂಪನಿಯ ಹೆಲ್ಮೆಟ್‌ ಇದೆ. ಅದು ಬೇಕಾ’ ಎಂದು ವ್ಯಾಪಾರಿಗಳು ಕೇಳುತ್ತಿದ್ದುದು ಕಂಡುಬಂತು.

‘ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಹೆಲ್ಮೆಟ್‌ ಕಡ್ಡಾಯ ಮಾಡಿದ್ದಾರೆ. ಮಾಸ್ಕ್‌ ಬೇರೆ ಹಾಕಿಕೊಂಡು ಹೆಲ್ಮೆಟ್‌ ಹಾಕಿಕೊಂಡು ಹೋಗುವುದು ಹೇಗೆ? ಯಾವುದಾದರೂ ಒಂದು ಕಂಪನಿಯದ್ದು ಕೊಡಿ’ ಎಂದು ಕೆಲವರು ಗೊಣಗುತ್ತಲೇ ಖರೀದಿ ಮಾಡುತ್ತಿದ್ದರು.

‘20 ವರ್ಷಗಳಿಂದ ಹೆಲ್ಮೆಟ್‌ ವ್ಯಾಪಾರ ಮಾಡುತ್ತಿದ್ದೇನೆ. ಸೀಸನ್‌ನಲ್ಲಿ ಹೆಚ್ಚು ತಂದು ಮಾರಾಟ ಮಾಡುತ್ತೇನೆ. ಸದ್ಯ ₹ 30 ಸಾವಿರ ಮೌಲ್ಯದ ಹೆಲ್ಮೆಟ್ ತಂದಿದ್ದೇನೆ. ಎರಡು ದಿನಗಳಿಂದ ವ್ಯಾಪಾರ ಸುಧಾರಿಸಿದೆ’ ಎಂದು ವ್ಯಾಪಾರಿ ರಫೀಕ್‌ ಹೇಳಿದರು.

‘ಇಷ್ಟು ದಿನ ದಿನಕ್ಕೆ ಒಂದು–ಎರಡು ಹೆಲ್ಮೆಟ್‌ ಮಾರಾಟವಾದರೆ ಹೆಚ್ಚು ಎಂಬಂತಿತ್ತು. ಈಗ ಎರಡು ದಿನಗಳಿಂದ ಪರವಾಗಿಲ್ಲ. ಬೆಂಗಳೂರು, ದಾವಣಗೆರೆಯ ದೊಡ್ಡ ಅಂಗಡಿಗಳಿಂದ ಹೆಲ್ಮೆಟ್‌ ಖರೀದಿಸಿ ತಂದಿದ್ದೇನೆ’ ಎಂದು ವ್ಯಾಪಾರಿ ಕಿಶನ್‌ ಹೇಳಿದರು.

‘ಕೊರೊನಾ ಕಾಲದಲ್ಲಿ ಏಕಾಏಕಿ ಫುಲ್‌ ಹೆಲ್ಮೆಟ್‌ ಕಡ್ಡಾಯ ಮಾಡಿರುವುದು ಸರಿಯಲ್ಲ. ಹಳ್ಳಿಗಳಿಂದ ನಗರಕ್ಕೆ ಬರುವ ಬಹುತೇಕರಿಗೆ ಈ ಬಗ್ಗೆ ತಿಳಿದಿಲ್ಲ. ಅಲ್ಲದೇ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ಬೈಕ್‌ ಸವಾರ ವೀರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಕ್ರಮಬದ್ಧವಾಗಿ ಹೆಲ್ಮೆಟ್‌ ಧರಿಸಿ’

‘ಹೆಲ್ಮೆಟ್‌ ಕಡ್ಡಾಯ ಮೊದಲಿನಿಂದಲೂ ಇದೆ. ಕ್ರಮಬದ್ಧವಾಗಿ ಹೆಲ್ಮೆಟ್‌ ಧರಿಸುವಂತೆ ಸೂಚನೆ ನೀಡಿದ್ದೇವೆ ಹೊರತು ಬೇರೆ ಏನೂ ಹೇಳಿಲ್ಲ. ಜನರು ತಲೆ ಮೇಲೆ ಕ್ಯಾಪ್‌ನಂತೆ ಹೆಲ್ಮೆಟ್ ಧರಿಸುತ್ತಿದ್ದಾರೆ. ಇದು ಸರಿಯಲ್ಲ. ರಕ್ಷಣೆ ನೀಡುವ ಪೂರ್ಣ ಹೆಲ್ಮೆಟ್‌ ಹಾಕುವಂತೆ ಹೇಳುತ್ತಿದ್ದೇವೆ. ಏಕಾಏಕಿ ಕಡ್ಡಾಯ ಮಾಡಿಲ್ಲ. ಮೊದಲಿನಿಂದಲೂ ಜಾಗೃತಿ ಮಾಡುತ್ತಿದ್ದೇವೆ. ಹೆಲ್ಮೆಟ್‌ ಬಗ್ಗೆ ಉದಾಸೀನ ಮಾಡುವುದು ಅಪಾಯಕಾರಿ. ಜನರು ಜಾಗೃತರಾಗಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಲಸಿಕೆ ಬರುವವರೆಗೆ ಕಾಲಾವಕಾಶ ನೀಡಿ’

‘ಕೊರೊನಾ ಸಂಕಷ್ಟದಲ್ಲಿ ನಗರದಲ್ಲಿ ಏಕಾಏಕಿ ಹೆಲ್ಮೆಟ್‌ ಕಡ್ಡಾಯ ಮಾಡಿರುವುದು ಸರಿಯಲ್ಲ. ಕಡ್ಡಾಯ ಮಾಡುವ ಮುನ್ನ ಸಂಚಾರ ಪೊಲೀಸರು ಜಾಗೃತಿ ಮೂಡಿಸಬೇಕಿತ್ತು. ಕೋವಿಡ್‌ ಲಸಿಕೆ ಬರುವವರೆಗೆ ಕಾಲಾವಕಾಶ ನೀಡಿ ಎಂದು ಎಸ್ಪಿಗೆ ಮನವಿ ಮಾಡಿದ್ದೇವೆ. ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು