ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ತಿಂಗಳಲ್ಲಿ ₹8.50 ಕೋಟಿ ದಂಡ ವಸೂಲಿ

ಹೆಸ್ಕಾಂ: ಬಾಗಲಕೋಟೆ, ಚಿಕ್ಕೋಡಿ ವ್ಯಾಪ್ತಿಯಲ್ಲೇ ಹೆಚ್ಚು ವಿದ್ಯುತ್ ಕಳ್ಳತನ ಪ್ರಕರಣ
Last Updated 3 ಫೆಬ್ರುವರಿ 2020, 12:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿದ್ಯುತ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ) ಕಳೆದ ಹತ್ತು ತಿಂಗಳಲ್ಲಿ ₹8.50 ಕೋಟಿ ದಂಡ ವಸೂಲಿ ಮಾಡಿದೆ. ಈ ಪೈಕಿ ಬಾಗಲಕೋಟೆ (₹1.49 ಕೋಟಿ) ಮತ್ತು ವಿಜಯಪುರ (₹1.47 ಕೋಟಿ) ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ದಂಡ ಸಂಗ್ರಹವಾಗಿದ್ದರೆ, ಕಾರವಾರದಲ್ಲಿ ಅತಿ ಕಡಿಮೆ (₹43.62 ಲಕ್ಷ) ವಸೂಲಿಯಾಗಿದೆ.

ವಿದ್ಯುತ್ ಕಳ್ಳತನ, ಅನಧಿಕೃತ ಸಂಪರ್ಕ ಹಾಗೂ ದುರುಪಯೋಗಕ್ಕೆ ಸಂಬಂಧಿಸಿದಂತೆ ಒಟ್ಟು 7,673 ಪ್ರಕರಣಗಳು ದಾಖಲಾಗಿವೆ. ಈ ಪೈಕಿ, ಚಿಕ್ಕೋಡಿಯಲ್ಲಿ ಅತಿ ಹೆಚ್ಚು ಅಂದರೆ, 3,321 ಪ್ರಕರಣಗಳು ಹಾಗೂ ಕಾರವಾರದಲ್ಲಿ ಕೇವಲ 263 ಪ್ರಕರಣಗಳು ದಾಖಲಾಗಿವೆ.

‘ಲೋ ಟೆನ್ಷನ್‌ವಿದ್ಯುತ್ ಮಾರ್ಗದ ತಂತಿಗಳಿಗೆ ಕೊಕ್ಕೆ ಸಿಕ್ಕಿಸಿ ಅಕ್ರಮವಾಗಿ ಸಂಪರ್ಕ ಪಡೆಯುವ ಹಾಗೂ ಅನಧಿಕೃತವಾಗಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯುವ ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ದಾಖಲಾಗಿವೆ’ ಎಂದು ಹೆಸ್ಕಾಂ ವಿಚಕ್ಷಣಾ ದಳದ ಅಧೀಕ್ಷಕ ರವೀಂದ್ರ ಗಡಾದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೆಸ್ಕಾಂ ನಗರಗಳು, ಕೈಗಾರಿಕಾ ಪ್ರದೇಶಗಳು, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಹದ್ದಿನ ಕಣ್ಣಿಟ್ಟಿದೆ. ಆದರೂ, ಕೆಲವರು ರಾತ್ರಿಯಾಗುತ್ತಲೇ ಕೃತ್ಯ ಎಸಗುತ್ತಾರೆ. ಈ ಕುರಿತು ಸಿಗುವ ನಿಖರ ಮಾಹಿತಿ ಮೇರೆಗೆ ಸಿಬ್ಬಂದಿ ದಾಳಿ ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತದೆ’ ಎಂದು ಹೇಳಿದರು.

‘ಸಿಬ್ಬಂದಿ ಹೊಂದಿರುವ ಸಂಪರ್ಕ ಜಾಲ ಸೇರಿದಂತೆ, ಸಾರ್ವಜನಿಕರಿಂದಲೂ ವಿದ್ಯುತ್ ದುರುಪಯೋಗ, ಕಳ್ಳತನದ ದೂರುಗಳು ಬರುತ್ತವೆ. ಕೆಲವರು ಹೆಸ್ಕಾಂ ಸಹಾಯವಾಣಿ 1912ಗೂ ಕರೆ ಮಾಡಿ ತಿಳಿಸುತ್ತಾರೆ. ಈ ರೀತಿ ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ’ ಎಂದು ತಿಳಿಸಿದರು.

₹6.66 ಲಕ್ಷ ವಸೂಲಿ

‘ಉಣಕಲ್ ಬಳಿ ಇರುವ ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ಘಟಕದ ವಿದ್ಯುತ್ ಪರಿಕರಗಳಿಗೆ ಹೆಸ್ಕಾಂನಿಂದ ಅನುಮತಿ ಪಡೆಯದೆ, ಗುತ್ತಿಗೆದಾರ ಏಜೆನ್ಸಿ ಸಮೀಪದ ಎಲ್.ಟಿ ಲೈನ್‌ನಿಂದ ಸಂಪರ್ಕ ಪಡೆದಿತ್ತು. ಕಳೆದ ಜೂನ್‌ನಲ್ಲಿ ಅದನ್ನು ಪತ್ತೆ ಹಚ್ಚಿ, ಗುತ್ತಿಗೆದಾರರಾದ ಬಾಲಾಜಿ ಕೃಪಾ ಪ್ರಾಜೆಕ್ಟ್ ಏಜೆನ್ಸಿಯಿಂದ ₹6.66 ಲಕ್ಷ ದಂಡ ವಸೂಲಿ ಮಾಡಲಾಗಿತ್ತು’ ಎಂದು ರವೀಂದ್ರ ಗಡಾದಿ ಹೇಳಿದರು.

‘ಅದೇ ರೀತಿ, ಕಲಘಟಗಿಯ ಜೋಡಳ್ಳಿಯಲ್ಲಿ ಭೀಮಪ್ಪ ಹಾಲಪ್ಪ ಬ್ಯಾಹಟ್ಟಿ ಮತ್ತು ಕರಬಸಪ್ಪ ಹಾಲಪ್ಪ ಬ್ಯಾಹಟ್ಟಿ ತಮ್ಮ ಕೊಳವೆ ಬಾವಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು. ಇದನ್ನು ಪತ್ತೆ ಹಚ್ಚಿ ₹2.37 ಲಕ್ಷ ದಂಡ ವಿಧಿಸಲಾಗಿತ್ತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT