ಶನಿವಾರ, ಜೂನ್ 19, 2021
21 °C
ಬೆಂಗಳೂರಿನ ‘ವನಯಾತ್ರಿ’ ಸಮಾನ ಮನಸ್ಕರ ತಂಡದ ಮಾದರಿ ಕಾರ್ಯ

ನೇರಲಗುಂಡಿ ಸರ್ಕಾರಿ ಶಾಲೆಗೆ ಹೈಟೆಕ್‌ ಸ್ಪರ್ಶ

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಳ್ಳಿಗಳ ಶಾಲೆಗಳನ್ನು ಸಮಗ್ರ ಅಭಿವೃದ್ಧಿ ಮಾಡಬೇಕು ಎಂಬ ಸಮಾನ ಮನಸ್ಕರ ತಂಡವೊಂದರ ಸದಾಶಯದಿಂದ ಹೊನ್ನಾಳಿ ತಾಲ್ಲೂಕಿನ ನೇರಲಗುಂಡಿಯ ಸರ್ಕಾರಿ ಶಾಲೆಗೆ ಹೈಟೆಕ್‌ ಸ್ಪರ್ಶ ದೊರೆತಿದೆ. ಈ ಅಭಿವೃದ್ಧಿಯ ಹಿಂದಿರುವುದು ಬೆಂಗಳೂರಿನ ‘ವನಯಾತ್ರಿ’ ಸಂಸ್ಥೆ.

ಸಮಾನ ಮನಸ್ಕರ ಗೆಳೆಯರ ಬಳಗದಿಂದ ಹುಟ್ಟಿದ ಸಂಸ್ಥೆ ಇದು. ಶಾಲೆಯನ್ನು ದತ್ತು ತೆಗೆದುಕೊಂಡ ಸಂಸ್ಥೆ ₹ 25 ಲಕ್ಷ ಖರ್ಚು ಮಾಡಿ ಅಭಿವೃದ್ಧಿಗೊಳಿಸಿದೆ. ಶಾಲೆಯ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರ, ರಾಷ್ಟ್ರಪಕ್ಷಿ, ಪ್ರಾಣಿ, ರಾಷ್ಟ್ರ ಲಾಂಛನ, ಕ್ರೀಡೆಗಳ ಮಾಹಿತಿ, ಕಾಂಪೌಂಡ್‌ ಮೇಲೆ ಕವಿಸಾಲುಗಳು, ಮರದ ಪೀಠೋಪಕರಣ, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಟಿವಿಗಳು, ಡಿಶ್, ಸಿಸಿಟಿವಿ ಕ್ಯಾಮೆರಾ, ಬಯೋಮೆಟ್ರಿಕ್‌ ಹೀಗೆ ಸಕಲ ಸೌಲಭ್ಯಗಳನ್ನು ಒದಗಿಸಿದೆ.

ಗಿಡಗಳ ರಕ್ಷಣೆಗೆ ಶಾಲೆಯ ಕಾಂಪೌಂಡ್‌ಗೆ ಗ್ರಿಲ್‌ ಅಳವಡಿಸಲಾಗಿದೆ. ಶಾಲೆಯ ಆವರಣದ ಸುಂದರ ಕೈತೋಟ ಎಲ್ಲರನ್ನು ಸೆಳೆಯುತ್ತಿದೆ.

ಮಕ್ಕಳಿಗೆ 2 ಜೊತೆ ಸಮವಸ್ತ್ರ, 2 ಜೊತೆ ಶೂ, ಸಾಕ್ಸ್‌, ಟೈ ನೀಡಲಾಗುತ್ತಿದೆ. ಮಕ್ಕಳ ಹೇರ್‌ಸ್ಟೈಲ್‌ ಕೂಡ ಒಂದೇ ರೀತಿಯಲ್ಲಿ ಇರಬೇಕೆಂಬ ಉದ್ದೇಶದಿಂದ ಇಲ್ಲಿಯೇ ಹೇರ್‌ಕಟ್‌ ಮಾಡಿಸಲಾಗುತ್ತಿದೆ. 1ರಿಂದ 7ನೇ ತರಗತಿಯವರೆಗೆ ಮಕ್ಕಳು ಕಲಿಯುತ್ತಿದ್ದಾರೆ. ಬೋಧನಾ ಮಟ್ಟ ಸುಧಾರಿಸಲು ಸಂಸ್ಥೆಯಿಂದಲೇ ಹೆಚ್ಚುವರಿಯಾಗಿ ಇಂಗ್ಲಿಷ್‌, ವಿಜ್ಞಾನ, ಕಂಪ್ಯೂಟರ್‌ ಶಿಕ್ಷಕರನ್ನು ನಿಯೋಜಿಸಲಾಗಿದೆ. ಯೋಗ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಹುಡುಕಾಟ ನಡೆದಿದೆ. ಶಾಲೆ ಅಭಿವೃದ್ಧಿಯ ಪರಿಣಾಮ ಮಕ್ಕಳ ದಾಖಲಾತಿ ಪ್ರಮಾಣವೂ ಹೆಚ್ಚಾಗಿರುವುದು ಗಮನಾರ್ಹ. 

ಮನೆಯ ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಕ್ಕಳಿಗೆ ಬಹುಮಾನ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ. ಕೊರೊನಾ ಸಂದರ್ಭದಲ್ಲೂ ಪಾಠ ಮಾಡುವಂತೆ ಶಿಕ್ಷಕರನ್ನು ಸಂಸ್ಥೆಯವರು ಉತ್ತೇಜಿಸುತ್ತಿದ್ದಾರೆ. 

‘ನನ್ನದು ನೇರಲಗುಂಡಿ ಗ್ರಾಮ. ಗ್ರಾಮೀಣ ಶಾಲೆ ಖಾಸಗಿ ಶಾಲೆಗಳ ಜೊತೆ ಸ್ಪರ್ಧೆ ಒಡ್ಡಬೇಕು. ಹಳ್ಳಿಗಳ ಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು ಎಂಬ ಉದ್ದೇಶದಿಂದ ಶಾಲೆಯನ್ನು ದತ್ತು ತೆಗೆದುಕೊಂಡಿದ್ದೇವೆ. ಇದರಲ್ಲಿ ಹಲವರ ಶ್ರಮ ಇದೆ’ ಎಂದು ವನಯಾತ್ರಿ ಸಂಸ್ಥೆಯ ರಘು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳೇ ಹೆಚ್ಚಿರುವ ಶಾಲೆಯನ್ನು ಖಾಸಗಿ ಶಾಲೆಗೆ ಸಡ್ಡು ಹೊಡೆಯುವಂತೆ ಸಂಸ್ಥೆ ಮಾಡಿದೆ’ ಎಂದು ಶಾಲೆಯ ಪ್ರಾಚಾರ್ಯ ಲಕ್ಷ್ಮೀಪತಿ ಬಿ.ಎಚ್‌. ಹೆಮ್ಮೆಯಿಂದ ಹೇಳಿದರು.

ಶಿಕ್ಷಣ ಸಚಿವರ ಮೆಚ್ಚುಗೆ

ಶಾಲೆಯ ಸಮಗ್ರ ಅಭಿವೃದ್ಧಿ ಕಂಡು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಲೆಯ ಉಳಿದ ಕಟ್ಟಡಗಳ ನವೀಕರಣಕ್ಕೆ ಶಿಕ್ಷಣ ಇಲಾಖೆಯಿಂದ ₹ 20 ಲಕ್ಷ ಅನುದಾನ ನೀಡಿದ್ದಾರೆ ಎಂದು ರಘು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.