ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ

ದಾನಿಗಳು, ಹಳೆ ವಿದ್ಯಾರ್ಥಿಗಳ ಸಂಘ, ಶಾಸಕರ ಅನುದಾನದಿಂದ ಅಭಿವೃದ್ಧಿ
Last Updated 26 ನವೆಂಬರ್ 2021, 3:01 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದವರೂ ಈಗ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಅಭಿವೃದ್ಧಿ, ಸ್ಮಾರ್ಟ್‌ ಕ್ಲಾಸ್‌ಗಳು, ಹೈಟೆಕ್‌ ಸ್ಪರ್ಶ ಪಡೆದ ಗ್ರಾಮೀಣ ಶಾಲೆಗಳು ಖಾಸಗಿಯತ್ತ ಮುಖ ಮಾಡಿದ್ದ ಪೋಷಕರನ್ನೂ ಸೆಳೆಯುತ್ತಿವೆ.

ಶಿಕ್ಷಕರ ಗುಣಾತ್ಮಕ ಶಿಕ್ಷಣ, ಕಲಿಕೆಯಲ್ಲಿ ವಿನೂತನ ಪ್ರಯೋಗ, ಶಾಲೆಗಳಲ್ಲಿನ ಬಣ್ಣ ಬಣ್ಣದ ಚಿತ್ತಾರ, ಸುಸಜ್ಜಿತ ಕಟ್ಟಡಗಳು, ಶೌಚಾಲಯ ವ್ಯವಸ್ಥೆ, ಪೀಠೋಪಕರಣಗಳು ಹೀಗೆ ಹತ್ತು ಹಲವು ಸಂಗತಿಗಳಿಂದ ಸರ್ಕಾರಿ ಶಾಲೆಗಳು ಗಮನ ಸೆಳೆಯುತ್ತಿವೆ.

ಇದು ಹಲವು ವಿದ್ಯಾರ್ಥಿಗಳು, ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡುವಂತೆ ಮಾಡಿವೆ. ಕೊರೊನಾ ತಂದ ಆರ್ಥಿಕ ಸಂಕಷ್ಟ ಕೂಡ ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರನ್ನು ಸರ್ಕಾರಿ ಶಾಲೆಗಳತ್ತ ಚಿತ್ತ ಹರಿಸುವಂತೆ ಮಾಡಿದೆ.

ಸರ್ಕಾರಿ ಶಾಲೆಗಳಲ್ಲಿನ ಅಭಿವೃದ್ಧಿ ಪರ್ವ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಿರುವುದು ಗಮನಾರ್ಹ.

ದಾನಿಗಳು, ಹಳೆ ವಿದ್ಯಾರ್ಥಿಗಳ ಸಂಘ, ಎಸ್‌ಡಿಎಂಸಿ, ಗ್ರಾಮಸ್ಥರು, ಹಳ್ಳಿ ಶಾಲೆಗಳಲ್ಲಿ ಓದಿ ಪಟ್ಟಣದಲ್ಲಿ ಉನ್ನತ ಹುದ್ದೆಯಲ್ಲಿರುವವರು, ಸರ್ಕಾರಿ ಶಾಲೆಗಳಲ್ಲಿ ಓದಿದ ಸ್ನೇಹಿತರೇ ಸೇರಿ ಮಾಡಿಕೊಂಡ ಗುಂಪುಗಳು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಕಾಳಜಿ ಹೀಗೆ ಹಲವರ ನೆರವಿನಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುತ್ತಿವೆ. ಹಲವರು ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತಿದ್ದಾರೆ.ಇದು ಆಶಾದಾಯಕ ಬೆಳವಣಿಗೆ.

ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳು ‘ಸ್ಮಾರ್ಟ್’ ಆಗುತ್ತಿವೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಅಭಿವೃದ್ಧಿಗೆ ತೆರೆದುಕೊಳ್ಳುತ್ತಿವೆ. ಹಲವು ಶಾಲೆಗಳು ಶಿಕ್ಷಕರ ಶ್ರಮದಿಂದ ಸುಸಜ್ಜಿತವಾಗುತ್ತಿವೆ.

ಜಿಲ್ಲೆಯಲ್ಲಿ 21ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಶಾಸಕರ ಅನುದಾನದಲ್ಲಿ ಅಭಿವೃದ್ಧಿ ಕಂಡಿವೆ. 20ಕ್ಕೂ ಹೆಚ್ಚು ಶಾಲೆಗಳು ಸ್ಮಾರ್ಟ್‌ ಆಗಿವೆ. 50ಕ್ಕೂ ಹೆಚ್ಚು ಶಾಲೆಗಳು ಹೊಸ ಪೀಠೋಪಕರಣಗಳು, ಕಟ್ಟಡಗಳ ದುರಸ್ತಿ, ಸುಸಜ್ಜಿತ ಶೌಚಾಲಯ, ಹೆಚ್ಚುವರಿ ಕಟ್ಟಡ ಹೀಗೆ ಹಂತ ಹಂತವಾಗಿ ಅಭಿವೃದ್ಧಿ ಕಂಡಿವೆ.

‘ಶಾಸಕರ ಅನುದಾನದಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಹಳೆ ವಿದ್ಯಾರ್ಥಿಗಳ ಸಂಘದ ನೆರವಿನಲ್ಲಿ ಸ್ಮಾರ್ಟ್‌ ಕ್ಲಾಸ್‌ ನಿರ್ಮಿಸಲಾಗಿದೆ. ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಇರುವುದರಿಂದ ಪ್ರತಿವರ್ಷ 30ರಷ್ಟು ಮಕ್ಕಳ ದಾಖಲಾತಿ ಹೆಚ್ಚಳ
ವಾಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಕಕ್ಕರಗೊಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಬಾಬು ಎಚ್‌.ಪಿ.

‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಸಾರ್ವಜನಿಕರೂ ಅಭಿವೃದ್ಧಿಗೆ ಒತ್ತು ನೀಡುತ್ತಿರುವುದು ಸಂತಸ ತಂದಿದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕೆಲ ಶಿಕ್ಷಕರೂ ಪರಿಶ್ರಮ ಹಾಕುತ್ತಿದ್ದಾರೆ.
ಇಂತಹ ಅಭಿವೃದ್ಧಿಯ ಪರ್ವ ನಿರಂತರವಾಗಿ ಸಾಗಿದರೆ ಸರ್ಕಾರಿ ಶಾಲೆಗಳ ಜತೆಗೆ ಮಧ್ಯಮ, ಬಡವರ್ಗದ ಮಕ್ಕಳ ಶೈಕ್ಷಣಿಕ ಪ್ರಗತಿ ಆಗಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎನ್ನುತ್ತಾರೆದಾವಣಗೆರೆ ಉತ್ತರ ಕ್ಷೇತ್ರದ ಬಿಇಒಪಿ.ಅಂಬಣ್ಣ.

ಬೋಧನೆ, ಪಠ್ಯಕ್ರಮದಲ್ಲಿ ಬದಲಾವಣೆ:

ಡಿಜಿಟಲ್‌ ಕಲಿಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಇದರಿಂದ ‘ಸ್ಮಾರ್ಟ್‌ ಕ್ಲಾಸ್‌’ ಅನುಷ್ಠಾನಕ್ಕೆ ಇನ್ನಷ್ಟು ವೇಗ ಸಿಕ್ಕಿದೆ. ಎಲ್‌ಸಿಡಿ ಪ್ರಾಜೆಕ್ಟರ್‌, ಸ್ಕ್ರೀನ್‌, ಕಂಪ್ಯೂಟರ್‌, ಯುಪಿಎಸ್‌, ಸ್ಪೀಕರ್‌ ಹೀಗೆ ಹಲವು ಕಲಿಕಾ ಸಾಮಗ್ರಿಗಳನ್ನು ಸರ್ಕಾರಿ ಶಾಲೆಗೆ ನೀಡಲಾಗುತ್ತಿದೆ. ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಇದು ನೆರವಾಗಿದೆ. ಬೋಧನೆ ಮತ್ತು ಪಠ್ಯಕ್ರಮದಲ್ಲಿ ಬದಲಾವಣೆ ತರುತ್ತಿದೆ.ಗುಣಮಟ್ಟದ ಶಿಕ್ಷಣ ನೀಡುವತ್ತ ಶಾಲೆಗಳು ದಾಪುಗಾಲು ಇಡುತ್ತಿವೆ.

ಅಭಿವೃದ್ಧಿ ಕಂಡ ಶಾಲೆಗಳು:

ಹೊನ್ನಾಳಿ ತಾಲ್ಲೂಕಿನ ನೇರಲಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಟೆಕ್‌ ಆಗಿದೆ. ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಂಡ ಶಾಲೆ ಇದು. ಚನ್ನಗಿರಿ ತಾಲ್ಲೂಕಿನ ಆಗರಬನ್ನಿಹಟ್ಟಿಯ ಉರ್ದು ಶಾಲೆ ಸ್ಮಾರ್ಟ್ ಆಗಿ ಗಮನ ಸೆಳೆಯುತ್ತಿದೆ. ಚನ್ನಗಿರಿಯ ಸೂಳೆಕೆರೆಯ ಕೆಪಿಎಸ್‌ ಶಾಲೆ, ಹಿರೇಕೊಗಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂತೇಬೆನ್ನೂರಿನ ಕೆಪಿಎಸ್‌ ಶಾಲೆ, ತ್ಯಾವಣಿಗೆಯ ಕೆಪಿಎಸ್‌, ಆನಗೋಡು, ಮೆಳ್ಳೆಕಟ್ಟೆ, ಕಕ್ಕರಗೊಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಾವಣಗೆರೆ ನಗರದ ನಿಟುವಳ್ಳಿಯ ಉನ್ನತೀಕರಿಸಿದ ಶಾಲೆ, ದೊಡ್ಡಬಾತಿ, ಕುಕ್ಕವಾಡದ ಕೆಪಿಎಸ್‌, ಹಾಲಿವಾಣ, ನಿಟ್ಟೂರಿನ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆ, ಕೆಪಿಎಸ್‌ ಬನ್ನಿಕೋಡು, ನ್ಯಾಮತಿ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಲಂಬಿ, ಕುಂದೂರು, ಮುಸ್ಟೂರು, ಪಲ್ಲಾಗಟ್ಟೆ, ಕ್ಯಾಸೇನಹಳ್ಳಿ ಶಾಲೆಗಳು ಶಾಸಕರ ಅನುದಾನದಿಂದ ಅಭಿವೃದ್ಧಿ ಕಂಡಿವೆ.

ಇವಲ್ಲದೇ ದಾನಿಗಳು, ಶಿಕ್ಷಕರ ಪರಿಶ್ರಮ, ಹಳೆ ವಿದ್ಯಾರ್ಥಿಗಳು ಹೀಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಂಡ ಶಾಲೆಗಳು ಹತ್ತಾರು.ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಅನೇಕ ಸಂಸ್ಥೆಗಳು ಸ್ಮಾರ್ಟ್‌ ಕ್ಲಾಸ್‌ ಯೋಜನೆಗೆ ಕೈಜೋಡಿಸಿವೆ.

***

ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಗ್ರಾಮಸ್ಥರ ಸಹಕಾರದಿಂದ ಪೀಠೋಪಕರಣ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಶೇ 20ರಷ್ಟು ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ.

ಬಾಬು ಎಚ್‌.ಪಿ., ಪ್ರಭಾರ ಮುಖ್ಯಶಿಕ್ಷಕ, ಸ.ಹಿ.ಪ್ರಾ.ಶಾಲೆ, ಕಕ್ಕರಗೊಳ್ಳ

ಎನ್‌ಜಿಒಗಳು, ದಾನಿಗಳ ನೆರವಿನಿಂದಜಿಲ್ಲೆಯ ಹಲವು ಶಾಲೆಗಳು ಸ್ಮಾರ್ಟ್‌ ಆಗುತ್ತಿವೆ. ಇದರಿಂದ ಪೋಷಕರು ಸರ್ಕಾರಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ. ಮಕ್ಕಳ ದಾಖಲಾತಿ ಪ್ರಮಾಣ ಗಣನೀಯವಾಗಿಬದಲಾವಣೆ ಕಂಡಿದೆ.

ಜಿ.ಆರ್‌. ತಿಪ್ಪೇಶಪ್ಪ, ಡಿಡಿಪಿಐ

ದಾನಿಗಳು, ಹಳೆ ವಿದ್ಯಾರ್ಥಿಗಳ ಸಂಘ, ಕೆಲ ಸಂಸ್ಥೆಗಳ ನೆರವಿನಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದೆ.

ಪಿ.ಅಂಬಣ್ಣ, ಬಿಇಒ, ದಾವಣಗೆರೆ ಉತ್ತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT