ಬುಧವಾರ, ಜುಲೈ 28, 2021
26 °C

ಕೋವಿಡ್‌: ಕೆಲಸ ಕಳೆದುಕೊಂಡ ಹಾಸ್ಟೆಲ್‌ ಅಡುಗೆ, ಸ್ವಚ್ಛತಾ ಸಿಬ್ಬಂದಿ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಜ್ಯದಲ್ಲಿ ವಸತಿನಿಲಯ ಹಾಗೂ ವಸತಿಶಾಲೆಗಳನ್ನು ತೆರೆಯದೇ ಇರುವುದರಿಂದ ಕೆಲಸ ಕಳೆದುಕೊಂಡಿರುವ ಸಾವಿರಾರು ಅಡುಗೆ ಹಾಗೂ ಸ್ವಚ್ಛತಾ ಸಿಬ್ಬಂದಿ ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದಾರೆ. ಅತ್ತ ವೇತನವೂ ಬಾರದೇ, ಇತ್ತ ಸರ್ಕಾರದಿಂದ ಯಾವುದೇ ರೀತಿಯ ನೆರವೂ ಸಿಗದೇ ಕಂಗಾಲಾಗಿದ್ದಾರೆ.

ಕೋವಿಡ್‌ ಮೊದಲನೇ ಅಲೆಯಿಂದಾಗಿ ಒಂಬತ್ತು ತಿಂಗಳ ಕಾಲ ಕೆಲಸ ಇಲ್ಲದೇ ‘ಬದುಕಿನ ಬಂಡಿ’ಯನ್ನು ಎಳೆಯಲು ಕಷ್ಟಪಟ್ಟಿದ್ದ ಅಡುಗೆ ಹಾಗೂ ಸ್ವಚ್ಛತಾ ಸಿಬ್ಬಂದಿಯ ಗಾಯದ ಮೇಲೆ ಎರಡನೇ ಅಲೆಯು ಬರೆ ಎಳೆದಿದೆ.

ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ 1,929 ವಸತಿನಿಲಯಗಳಲ್ಲಿ ಸುಮಾರು 5,600 ಕಾರ್ಮಿಕರು, ಹಿಂದುಳಿದ ವರ್ಗಗಳ ಇಲಾಖೆಯ 1,341 ವಸತಿನಿಲಯಗಳಲ್ಲಿ ಸುಮಾರು 3,000 ಕಾರ್ಮಿಕರು, ಪರಿಶಿಷ್ಟ ಪಂಗಡದ 307 ವಸತಿನಿಲಯಗಳಲ್ಲಿ 800 ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 124 ವಸತಿನಿಲಯಗಳಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಇಲ್ಲದೇ ತೊಂದರೆಗೆ ಸಿಲುಕಿದ್ದಾರೆ. ಇವರ ಜೊತೆಗೆ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯ ವಸತಿಶಾಲೆಗಳಲ್ಲಿನ ಸುಮಾರು 11,000 ಅಡುಗೆ ಹಾಗೂ ಸ್ವಚ್ಛತಾ ಸಿಬ್ಬಂದಿ ಕೆಲಸವಿಲ್ಲದೇ ಕುಟುಂಬ ನಿರ್ವಹಣೆ ಮಾಡಲಾಗದೇ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮಂಜುನಾಥ ಕೈದಾಳೆ ಸಂಕಷ್ಟ ಹೇಳಿಕೊಂಡರು.

‘ವಸತಿನಿಲಯಗಳನ್ನು ತೆರೆಯದೇ ಇರುವುದರಿಂದ ಕೆಲಸ ಕಳೆದುಕೊಂಡಿರುವ ಮುಖ್ಯ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾ ಸಿಬ್ಬಂದಿಗೆ ಸರ್ಕಾರದಿಂದ ಯಾವುದೇ ರೀತಿಯ ನೆರವು ಸಿಕ್ಕಿಲ್ಲ. ಕಟ್ಟಡ ಕಾರ್ಮಿಕರು ಹಾಗೂ 11 ಅಸಂಘಟಿತ ವಲಯದ ಕಾರ್ಮಿಕರಿಗೆ ಮಾತ್ರ ಸರ್ಕಾರ ಪರಿಹಾರ ಘೋಷಿಸಿದೆ. ಅಸಂಘಟಿತರಾಗಿರುವ ಅಡುಗೆ ಹಾಗೂ ಸ್ವಚ್ಛತಾ ಸಿಬ್ಬಂದಿ ಪರಿಹಾರದಿಂದ ವಂಚಿತರಾಗಿದ್ದಾರೆ’ ಎಂದು ಮಂಜುನಾಥ ಕೈದಾಳೆ ದೂರಿದರು.

‘ಒಂಬತ್ತು ವರ್ಷಗಳಿಂದ ವಸತಿನಿಲಯದಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದೆ. ತಿಂಗಳಿಗೆ ₹ 9,400 ಕೈಗೆ ಸಿಗುತ್ತಿದ್ದರಿಂದ ಹೇಗೋ ಜೀವನ ನಡೆಯುತ್ತಿತ್ತು. ಕೋವಿಡ್‌ ಮೊದಲನೇ ಅಲೆಯ ವೇಳೆ ಸುಮಾರು 10 ತಿಂಗಳು ಕೆಲಸ ಇರಲಿಲ್ಲ. ಮೇ ತಿಂಗಳಿಂದ ವಸತಿನಿಲಯಗಳನ್ನು ಬಂದ್‌ ಮಾಡಿರುವುದರಿಂದ ಮತ್ತೆ ಕೆಲಸ ಇಲ್ಲದಂತಾಗಿದೆ. ಎಡಗಾಲು ಊನವಾಗಿರುವುದರಿಂದ ಹೊರಗಡೆ ಹೋಗಿ ಕೂಲಿ ಕೆಲಸವನ್ನೂ ಮಾಡಲಾಗುತ್ತಿಲ್ಲ. ತಂದೆ–ತಾಯಿಯೇ ಕೃಷಿ ಕೂಲಿ ಕೆಲಸ ಮಾಡಿ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ’ ಎಂದು ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯ ವಸತಿನಿಲಯದಲ್ಲಿ ಅಡುಗೆ ಸಹಾಯಕರಾಗಿದ್ದ ಸ್ವಾಮಿ ನಿಂಗಪ್ಪ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘44 ಅಸಂಘಟಿತ ವಲಯವನ್ನು ಗುರುತಿಸಲಾಗಿದ್ದು, ಕೋವಿಡ್ ಪರಿಹಾರ ವಿತರಣೆ ವೇಳೆ ಇಲಾಖೆಯು ಕಟ್ಟಡ ಕಾರ್ಮಿಕರ ಜೊತೆಗೆ 11 ವಲಯದವರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದೆ. ಮನೆಗೆಲಸಕ್ಕೆ ಹೋಗುವ ಕಾರ್ಮಿಕರಿಗೆ ಪರಿಹಾರ ವಿತರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ವಸತಿನಿಲಯಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಪರಿಹಾರ ನೀಡುವ ಬಗ್ಗೆ ಉಲ್ಲೇಖಿಸಿಲ್ಲ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್‌ ಹೇಳಿದರು.

‘ಕಾರಿಗನೂರಿನ ಮೊರಾರ್ಜಿ ವಸತಿಶಾಲೆಯಲ್ಲಿನ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದಕ್ಕೆ ಪಂಚಾಯಿತಿ ಹಾಗೂ ಸ್ಥಳೀಯರು ಸೇರಿಕೊಂಡು ₹ 5,000 ಕೊಟ್ಟಿದ್ದಾರೆ. ಸರ್ಕಾರದಿಂದೇನೂ ನಮಗೆ ಸಂಬಳ ನೀಡಿಲ್ಲ. ಕೂಡಲೇ ವಸತಿನಿಲಯಗಳನ್ನು  ಆರಂಭಿಸುವ ಮೂಲಕ ನಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಬಾಕಿ ವೇತನವನ್ನೂ ಬಿಡುಗಡೆ ಮಾಡಬೇಕು’ ಎಂದು ಮುಖ್ಯ ಅಡುಗೆ ಸಿಬ್ಬಂದಿ ಕರಿಬಸಪ್ಪ ಒತ್ತಾಯಿಸಿದರು.

‘ಕಾರಿಗನೂರು ಕೋವಿಡ್‌ ಕೇಂದ್ರದಲ್ಲಿ ಕೆಲಸ ಮಾಡಿದ ಅಡುಗೆ ಸಿಬ್ಬಂದಿಗೆ ಸ್ಥಳೀಯವಾಗಿ ನಾವು ಗೌರವಧನ ನೀಡಿದ್ದೇವೆ. ಕೆಲಸ ಮಾಡಿರುವುದರಿಂದ ವೇತನ ನೀಡುವುದು ಸರ್ಕಾರದ ಜವಾಬ್ದಾರಿ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್‌ ಅಭಿಪ್ರಾಯಪಟ್ಟಿದ್ದಾರೆ.

‘ಶೀಘ್ರದಲ್ಲೇ ಕಾಲೇಜು ಹಾಸ್ಟೆಲ್‌ ಆರಂಭ’

‘ಕಾರ್ಮಿಕ ಇಲಾಖೆ ಕೋವಿಡ್‌ ಪರಿಹಾರ ವಿತರಿಸುವಾಗ ಅಡುಗೆ ಸಿಬ್ಬಂದಿಯನ್ನೂ ಪರಿಗಣನೆಗೆ ತೆಗೆದುಕೊಂಡಿದ್ದರೆ ಸ್ವಲ್ಪ ಮಟ್ಟಿಗಾದರೂ ಅನುಕೂಲವಾಗುತ್ತಿತ್ತು. ಇವರಿಗೆ ನಮ್ಮ ಇಲಾಖೆಯಿಂದ ಪರಿಹಾರ ವಿತರಿಸುವ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಲಾಕ್‌ಡೌನ್‌ ಕಾರಣಕ್ಕೆ ಕೆಲಸ ಕಳೆದುಕೊಂಡ ಅವಧಿಗೂ ವೇತನ ಪಾವತಿಸುವಂತೆ ಸರ್ಕಾರದಿಂದ ಮಾರ್ಗಸೂಚಿ ಬಂದರೆ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್‌ ಪ್ರತಿಕ್ರಿಯಿಸಿದರು.

‘ಪದವಿ ವಿದ್ಯಾರ್ಥಿಗಳ ಪರೀಕ್ಷೆ ಶೀಘ್ರದಲ್ಲೇ ನಡೆಯಲಿರುವುದರಿಂದ ವಸತಿನಿಲಯಗಳನ್ನು ಆರಂಭಿಸುವಂತೆ ಬೇಡಿಕೆ ಬರುತ್ತಿದೆ. ವಿಶ್ವವಿದ್ಯಾಲಯದಿಂದ ಈ ಬಗ್ಗೆ ನಿರ್ದೇಶನ ಬಂದರೆ ಹಾಸ್ಟೆಲ್‌ಗಳನ್ನು ಆರಂಭಿಸಲಾಗುವುದು. ಆಗ ಮತ್ತೆ ಅಡುಗೆ ಸಿಬ್ಬಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು