ಸೋಮವಾರ, ಜುಲೈ 26, 2021
22 °C
ಸಿಮ್‌ ಕಿತ್ತುಕೊಂಡಿದ್ದ ಕಫೀಲ್‌ * ಎರಡು ವಾರ ಯಾರ ಸಂಪರ್ಕಕ್ಕೂ ಸಿಗದೇ ಪರದಾಟ

ಸಂಪರ್ಕವೇ ಇಲ್ಲದ ಫೈರೋಜಾಬಾನು ಭಾರತಕ್ಕೆ ಬಂದಿದ್ದು ಹೇಗೆ?

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೆಲಸಕ್ಕೆಂದು ಹೋಗಿ ಊರಿಗೆ ಮರಳಲು ಕಫೀಲ್‌ (ಪ್ರಾಯೋಜಕ) ಬಿಡದೇ ಗೃಹಬಂಧನದಲ್ಲಿಟ್ಟಿದ್ದ ಫೈರೋಜಾಬಾನು ಅವರ ಮೊಬೈಲ್‌ನಿಂದ ಸಿಮ್‌ ಕಾರ್ಡನ್ನೇ ತೆಗೆದಿದ್ದ. ಹಾಗಾಗಿ ಕಳೆದ ಎರಡು ವಾರಗಳಿಂದ ಫೈರೊಜಾಬಾನು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹೀಗಿದ್ದರೂ ಒಮ್ಮೆಲೆ ಭಾರತಕ್ಕೆ ಹಿಂತಿರುಗಿದ್ದರು. ಅದರ ಹಿಂದಿನ ಮರ್ಮವನ್ನು ಸೌದಿಯ ಕನ್ನಡಿಗರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಫೈರೋಜಾಬಾನು ಅವರಂತೆ ಸೌದಿಯಲ್ಲಿ ತುಮಕೂರಿನ ಸಬಿಹಾ ಎಂಬ ಮಹಿಳೆ ಮೂರು ವರ್ಷಗಳ ಹಿಂದೆ ಸೌದಿಗೆ ಸಅದ್‌ ಎಂಬ ಇದೇ ಕಫೀಲ್‌ ಮೂಲ ಹೋಗಿ ಸಿಕ್ಕಿ ಹಾಕಿಕೊಂಡಿದ್ದರು. ಫೈರೋಜಾಬಾನು ಸೌದಿಯಲ್ಲಿ ಸಿಲುಕಿರುವ  ಬಗ್ಗೆ ‘ಪ್ರಜಾವಾಣಿ’ಯಲ್ಲಿ ಬಂದ ವರದಿಯನ್ನು ನೋಡಿ ಹಮೀದ್‌ ಪಡುಬಿದ್ರಿ ಮತ್ತು ಅವರ ಗೆಳೆಯರು ಹುಡುಕುತ್ತಿದ್ದಾಗ ಸಬಿಹಾ ಕೂಡಾ ಇದೇ ರೀತಿ ಸಿಕ್ಕಿಹಾಕೊಂಡಿರುವುದು ಗಮನಕ್ಕೆ ಬಂದಿತ್ತು. ಫೈರೋಜಾಬಾನು ಅವರನ್ನು ಬೇರೆ ಮನೆಯಲ್ಲಿ ಕಫೀಲ್‌ ಕೆಲಸಕ್ಕೆ ಇರಿಸಿದ್ದರೆ, ಸಬಿಹಾ ಅವರನ್ನು ಕಫೀಲ್‌ ಮನೆಯಲ್ಲಿಯೇ ಇಟ್ಟುಕೊಂಡಿದ್ದ.

‘ರಿಯಾದ್‌ನಲ್ಲಿರುವ ಯಾಸಿನ್‌ ಕಲಬುರ್ಗಿ, ಅಲ್‌ಕುರಾಯತ್‌ನಲ್ಲಿ ಅಂಗಡಿ ವ್ಯಾಪಾರಸ್ತರಾಗಿರುವ ಸಮಾಜ ಸೇವಕ ಕೇರಳದ ತ್ರಿಶೂರಿನ ಸಲೀಂ ಕೊಡುಂಗಲ್ಲೂರು ಸಹಾಯದಿಂದ ಇಬ್ಬರ ವಿಳಾಸ ಪತ್ತೆಯಾಗಿತ್ತು. ಇಬ್ಬರ ಮೊಬೈಲ್‌ ನಂಬರ್‌ ಕೂಡ ಸಿಕ್ಕಿದ್ದರಿಂದ ಅವರ ಸಂಪರ್ಕದಲ್ಲಿ ಇರಲು ಸಾಧ್ಯವಾಗಿತ್ತು. ನಾವು ರಾಯಬಾರಿ ಕಚೇರಿಗೆ, ಮಾನವ ಹಕ್ಕುಗಳ ಆಯೋಗಕ್ಕೆ, ಭಾರತದ ವಿದೇಶಾಂಗ ಸಚಿವಾಲಯಕ್ಕೆ ಹೀಗೆ ಎಲ್ಲರಿಗೂ ಈ ಬಗ್ಗೆ ಮಾಹಿತಿ ನೀಡಿದ್ದೆವು. ನಾವು ಕಫೀಲ್‌ ಜತೆಯೂ ಮಾತನಾಡಿದ್ದರಿಂದ ಅವನಿಗೆ ಸಿಟ್ಟು ಬಂದಿತ್ತು. ಸಬಿಹಾ ಅವರಿಗೆ ಊಟ ನೀಡುವುದನ್ನೂ ನಿಲ್ಲಿಸಿದ್ದ. ಆದರೆ ಕಫೀಲ್‌ನ ತಾಯಿ ಕದ್ದುಮುಚ್ಚಿ ಸ್ವಲ್ಪ ಊಟ ನೀಡಿದ್ದರು’ ಎಂದು ಪಿ.ಎ. ಹಮೀದ್‌ ಪಡುಬಿದ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮಧ್ಯೆ ನಾವು ಸಬಿಹಾಕ್ಕೆ ಪೊಲೀಸ್‌ ಕಂಟ್ರೋಲ್‌ ರೂಂ ನಂಬರ್‌ಗೆ (999) ಫೋನ್ ಮಾಡಿ ದೂರು ನೀಡಲು ತಿಳಿಸಿದ್ದೆವು. ಸಬಿಹಾ ಹಾಗೆ ಮಾಡಿದ್ದರು. ಸಲೀಂ ಅವರು ಸಬಿಹಾ ಪರ ಸ್ಟೇಷನ್‌ಗೆ ಹೋಗಿದ್ದರು. ವಿಸಿಟಿಂಗ್‌ ವೀಸಾದಲ್ಲಿ ಕರೆಸಿದ ಮೇಲೆ ವಾಸ್ತವ್ಯದ ಕಾರ್ಡ್‌ ಇಕಾಮ (ಆಧಾರ್‌ ಕಾರ್ಡ್‌ ತರಹ) ಮಾಡಿಸಬೇಕು. ಅದನ್ನು ಮಾಡದೇ ಇದ್ದಿದ್ದು ಗಮನಕ್ಕೆ ಬಂದಿದ್ದರಿಂದ ಆತನಿಗೆ 15 ಸಾವಿರ, 15 ಸಾವಿರ ಒಟ್ಟು ಇಬ್ಬರಿಗೆ ಸಂಬಂಧಿಸಿದಂತೆ 30 ಸಾವಿರ ರಿಯಾಲ್‌ (ಸುಮಾರು ₹ 6 ಲಕ್ಷ) ಗರಾಮ (ದಂಡ) ವಿಧಿಸಿದ್ದರು. ಇದರಿಂದ ಮತ್ತಷ್ಟು ಸಿಟ್ಟಿಗೆ ಒಳಗಾದ ಸಅದ್‌ (ಕಫೀಲ್‌ನ ಹೆಸರು) ಸ್ಟೇಷನ್‌ನಿಂದ ಹೋದ ಮೇಲೆ ಸಬಿಹಾ ಮತ್ತು ಫೈರೋಜಾಬಾನು ಇಬ್ಬರ ಮೊಬೈಲ್‌ನಿಂದಲೂ ಸಿಮ್‌ ತೆಗೆದುಕೊಂಡು ಹೋಗಿದ್ದ. ಸಲೀಂ ಮೇಲೂ ಬೇರೆ ದೂರು ನೀಡಿ ತೊಂದರೆ ನೀಡಿದ’ ಎಂದು ವಿವರಿಸಿದರು.

‘ಇದರಿಂದಾಗಿ ಎರಡು ವಾರಗಳ ಕಾಲ ಯಾರ ಸಂಪರ್ಕವೂ ಇರಲಿಲ್ಲ. ಇದರ ನಡುವೆ ಒಂದು ದಿನ ನೀವು ಊರಿಗೆ ಹೋಗಿ ಎಂದು ಸಬಿಹಾ ಅವರಿಗೆ ಒಂದು ಟಿಕೆಟ್‌ ನೀಡಿ ಜೆಡ್ಡಹ್‌ ಏರ್‌ಪೋರ್ಟ್‌ ಬಳಿ ಬಿಟ್ಟು ಹೋಗಿದ್ದ. ಸಬಿಹಾ ಒಳಗೆ ಹೋದರೆ ಇದಾಗುವುದಿಲ್ಲ. ಇದರಲ್ಲಿ ಎಕ್ಸಿಟ್‌ ಸೀಲ್‌ ಆಗಲಿ ಇನ್ನಿತರ ಅಗತ್ಯ ದಾಖಲೆಗಳಾಗಲಿ ಇಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದರು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಏರ್‌ಪೋರ್ಟ್‌ನಿಂದ ಯಾರದ್ದೋ ಮೊಬೈಲ್‌ನಿಂದ ನನಗೆ ಕರೆ ಮಾಡಿದ್ದರು. ನನ್ನ ನಂಬರ್‌ ಒಂದು ಅವರು ಬರೆದು ಇಟ್ಟುಕೊಂಡಿದ್ದರು. ಪರಿಸ್ಥಿತಿಯನ್ನು ಹೇಳಿದಾಗ ಅಲ್ಲಿನ ರಾಯಬಾರಿ ವಿಭಾಗೀಯ ಕಚೇರಿಗೆ ಹೋಗಲು ಹೇಳಿದೆ. ಅದಕ್ಕಿಂತ ಸುರಕ್ಷಿತ ದಾರಿ ಬೇರೆ ಕಾಣಲಿಲ್ಲ. ಅಲ್ಲಿಯ ಅಧಿಕಾರಿಗಳು ಕರೆದುಕೊಂಡು ಹೋಗಲು ನನಗೆ ಹೇಳಿದರು. 950 ಕಿಲೋಮೀಟರ್‌ ದೂರ ಇರುವ ನಾನು ಏನು ಮಾಡೋದು. ಮುಂದಿನ ವ್ಯವಸ್ಥೆ ಆಗುವವರೆಗೆ ಅಲ್ಲಿಯೇ ಇರುವಂತೆ ತಿಳಿಸಿದೆ’ ಎಂದು ವಿವರ ನೀಡಿದರು.

‘ಸಬಿಹಾ ಪ್ರಕರಣದಿಂದಾಗಿ ಫೈರೋಜಾಬಾನು ಅವರ ಸಿಮ್‌ ಕೂಡ ಇಲ್ಲ ಎಂಬುದು ಗೊತ್ತಾಯಿತು. ನಾವು ಮತ್ತೆ ಕಫೀಲ್‌ ಸಅದ್‌ನನ್ನು ಸಂಪರ್ಕಿಸಿ ಮತ್ತೆ ದೂರು ನೀಡುವುದಾಗಿ ತಿಳಿಸಿದೆವು. ಅವನು ಮರುದಿನವೇ ಇದ್ದಕ್ಕಿದ್ದಂತೆ ಟಿಕೆಟ್‌ ಮಾಡಿ  ಫೈರೊಜಾಬಾನು ಅವರನ್ನು ಏರ್‌ಪೋರ್ಟ್‌ಗೆ ಕಳುಹಿಸಿಕೊಟ್ಟ. ಏರ್‌ಪೋರ್ಟ್‌ನಿಂದ ಫೈರೋಜಾಬಾನು ವಿಷಯ ತಿಳಿಸಿದರು’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು