ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಬೆಳೆ ನಿಲ್ಲಿಸಿದರೆ ಜಗ ನಡುಗಲಿದೆ

ವಾಲ್ಮೀಕಿ ಮಹಿಳಾ ಜಾಗೃತಿ ಸಮಾವೇಶ ಉದ್ಘಾಟಿಸಿದ ಕವಿತಾ ಮಿಶ್ರ
Last Updated 8 ಫೆಬ್ರುವರಿ 2020, 14:43 IST
ಅಕ್ಷರ ಗಾತ್ರ

ಹರಿಹರ: ಎಂಜಿನಿಯರ್‌, ವೈದ್ಯ ಸೇರಿ ಯಾರೇ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಿದರೂ ಜಗತ್ತು ನಡೆಯುತ್ತಿರುತ್ತದೆ. ಆದರೆ ರೈತ ತಾನು ಬೆಳೆಯುವ ಬೆಳೆ ನಿಲ್ಲಿಸಿ ಪ್ರತಿಭಟನೆಗೆ ಇಳಿದರೆ ಜಗತ್ತು ನಡುಗಲಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ರೈತ ಮಹಿಳೆ ಕವಿತಾ ಮಿಶ್ರ ಹೇಳಿದರು.

ಮಹರ್ಷಿ ವಾಲ್ಮಿಕಿ ಜಾತ್ರೆಯಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ವಾಲ್ಮೀಕಿ ಮಹಿಳಾ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಪುರುಷ ಪ್ರಧಾನ ಎನ್ನುತ್ತಾರೆ. ಅಲ್ಲಿ ಮಹಿಳೆಯರು ಇಲ್ವ? ರೈತ ಮಹಿಳೆ ರೊಟ್ಟಿ, ಪುಂಡಿ ಪಲ್ಯ, ರಾಗಿ ಮುದ್ದೆ ಮಾಡಿದ ಮೇಲೆ ಕೃಷಿಗೆ ಇಳಿಯುತ್ತಾಳೆ. ರೈತ ಉತ್ತಿದರೆ ಆಕೆ ಬೀಜ ಹಾಕುತ್ತಾಳೆ. ಕಳೆ ತೆಗೆಯುತ್ತಾಳೆ. ಬೆಳೆ ತೆಗೆಯುತ್ತಾಳೆ. ಆದರೆ ಮಾರಾಟ ಮಾಡಲು ಪುರುಷ ಹೋಗುತ್ತಾನೆ. ಹಾಗಾಗಿ ಪುರುಷ ಪ್ರಧಾನ ಆಯಿತು. ಆಕೆಯೇ ಟ್ರ್ಯಾಕ್ಟರ್‌ ಹತ್ತಿ ಮಾರಾಟಕ್ಕೆ ಹೋಗಿದ್ದರೆ ಮಹಿಳಾ ಪ್ರಧಾನ ಆಗುತ್ತಿತ್ತು ಎಂದು ಅವರು ವಿಶ್ಲೇಷಿಸಿದರು.

ಎಲ್ಲರಿಗೂ ಹಾಲು ಬೇಕು. ಹಾಲು ಹಿಂಡುವ ಕೆಲಸ ಯಾರಿಗೂ ಬೇಡ. ಎ.ಸಿ.ಯಲ್ಲಿ ಕುಳಿತು ಕೃಷಿ ಮಾಡಲು ಸಾಧ್ಯವಿಲ್ಲ. ಮಳೆಗೆ ತೊಯ್ದು, ಬಿಸಿಲಿಗೆ ಒಣಗಿ, ಥಂಡಿಗೆ ನಡುಗಿ ಕೆಲಸ ಮಾಡಿದರಷ್ಟೇ ಕಾಳು ಬರುತ್ತದೆ. ಆಧುನಿಕ ಜಗತ್ತು ರೋಬೋಟ್‌, ಕಂಪ್ಯೂಟರ್‌ ಕೊಡಬಹುದು. ಆದರೆ ಅಕ್ಕಿ, ಬೇಳೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ತಂದೆ, ಗಂಡ, ಮಗ ಗೌರವ ಕೊಟ್ಟರೆ ಮಹಿಳೆಗೆ ಸಮಾಜ ಗೌರವ ಕೊಡುತ್ತದೆ. ಈ ಮೂವರು ಕೊಡದಿದ್ದರೆ ಸಮಾಜವೂ ಕೊಡುವುದಿಲ್ಲ. ತವರು ಮನೆಯ ಸಂಸ್ಕಾರ, ಗಂಡನ ಮನೆಯ ಸಹಕಾರ ಅಗತ್ಯ.

ಹಿರಿಯ ವಕೀಲರಾದ ವಿಜಯಾ ಹಾವನೂರು ಉಪನ್ಯಾಸ ನೀಡಿದರು. ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಶಾಂತಲಾ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಸಾಹಿತಿ ಕಮಲಾ ಹಂಪನಾ ಪುಷ್ಪಾರ್ಚನೆ ಮಾಡಿದರು. ದಿಂಗಲೇಶ್ವರ ಮಠದ ಕುಮಾರ ದಿಂಗೇಶ್ವರ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಮಾಜಿ ಸಚಿವ ಎಚ್‌. ಆಂಜನೇಯ, ಶಾಸಕರಾದ ಚಂದ್ರಪ್ಪ, ಎಸ್‌.ವಿ. ರಾಮಚಂದ್ರ, ಮಹಿಳಾ ಮುಖಂಡರು ಇದ್ದರು. ಸಾಹಿತಿ ಡಾ. ಎಸ್‌. ಅನಸೂಯ ಕೆಂಪನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಧಕಿಯರಾದ ಹಾಸನದ ಶ್ವೇತಾ ದೇವರಾಜ್‌, ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣ ಸ್ವಾಮಿ, ಚಾಮರಾಜನಗರದ ಶಿವಮ್ಮ ಕೃಷ್ಣಪ್ಪ, ಕಮಲಾ ಮರಿಸ್ವಾಮಿ, ಕೊಪ್ಪಳದ ಮಾಲತಿ ನಾಯಕ್‌, ಬಿಬಿಎಂಪಿ ಸದಸ್ಯೆ ನೇತ್ರಪಲ್ಲವಿ, ಧಾರವಾಡದ ಶಾಂತಮ್ಮ ಗುಜ್ಜಲ್‌, ಹಾವೇರಿಯ ಮಂಜಮ್ಮ ಕರಿಬಸವಣ್ಣನವರ್‌, ಬೆಂಗಳೂರಿನ ಜಯಶ್ರೀ ಗುಡ್ಡೆಕಾಯಿ, ಬೆಂಗಳೂರಿನ ಪ್ರೊ.ಗೋಮತಿದೇವಿ, ರಾಯಚೂರಿನ ಡಾ. ಶಾರದಾ ಹುಲಿನಾಯಕ್‌, ಅಂತರರಾಷ್ಟ್ರೀಯ ಕ್ರೀಡಾಪಟು ರೇವತಿ ನಾಯಕ್‌ ಹುಚ್ಚವ್ವನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.

‘ಆತ್ಮಹತ್ಯೆಗೆ ಯತ್ನಿಸಿದ್ದೆ’

ರಾಯಚೂರಿನಲ್ಲಿ ಕೃಷಿ ಬದುಕು ಕಟ್ಟುವುದು ಅಷ್ಟು ಸುಲಭದ್ದಾಗಿರಲಿಲ್ಲ. ಕಲ್ಲುಮಣ್ಣು ಜಾಗ ಸಿಕ್ಕಿತು. ಮೊದಲು ಸಾಲಮಾಡಿ ₹ 23 ಲಕ್ಷ ವೆಚ್ಚ ಮಾಡಿ ದಾಳಿಂಬೆ ಬೆಳೆದಿದ್ದೆ. ರೋಗ ಬಂದು ಎಲ್ಲ ಹೋಯಿತು. ಬರೀ ₹ 1 ಲಕ್ಷ ಸಿಕ್ಕಿತು. ಎಲ್ಲರೂ ಅಪರಾಧಿಯಂತೆ ನನ್ನನ್ನು ಕಂಡರು. ಕೊನೆಗೆ ನಾನೂ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿ ಯತ್ನಿಸಿದೆ. ಸಾವನ್ನು ಹತ್ತಿರದಿಂದ ಕಂಡು ಬದುಕುಳಿದೆ’ ಎಂದು ಕವಿತಾ ಮಿಶ್ರ ಅನುಭವ ಹಂಚಿಕೊಂಡರು.

ಪತಿಯ ಪ್ರೋತ್ಸಾಹದಿಂದ ಮತ್ತೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಂದಾದೆ. ನಾನು ಬೀಳಲು ಕಾರಣ ಏನು ಎಂದು ಹುಡುಕಿದಾಗ ದಾಳಿಂಬೆ ಒಂದನ್ನೇ ಬೆಳೆದಿದ್ದು ಎಂಬುದು ತಿಳಿದೆ. ಅಲ್ಲಿಂದ ಬಹು ಬೆಳೆ ಬೆಳೆಯಲು ಆರಂಭಿಸಿದೆ. ಬಹುಋತುಗಳಲ್ಲಿ ಆದಾಯ ಬರುವಂತೆ ಬೆಳೆ ಬೆಳೆದೆ. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈ ಹಿಡಿಯುತ್ತದೆ, ಅಲ್ಲದೇ ವೃದ್ಧರಾದಾಗ ಹಣ ಬರಬೇಕಲ್ಲ. ಅದಕ್ಕಾಗಿ ಶ್ರೀಗಂಧ, ಸಾಗವಾನಿ ಬೆಳೆದೆ. ಒಂದು ಕೆ.ಜಿ. ಶ್ರೀಗಂಧಕ್ಕೆ ₹ 11,000 ಇದೆ. ಎಕರೆಗೆ ನಾಲ್ಕೈದು ಟನ್‌ ಬೆಳೆಯಬಹುದು. ಒಂದು ಟನ್‌ಗೆ ₹ 1.1 ಕೋಟಿ ಸಿಗಲಿದೆ’ ಎಂದು ಯಶೋಗಾಥೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT