ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ಈಡೇರದಿದ್ದರೆ ಮತ್ತೆ ಹೋರಾಟ-ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ
Last Updated 1 ಏಪ್ರಿಲ್ 2021, 7:56 IST
ಅಕ್ಷರ ಗಾತ್ರ

ಹರಪನಹಳ್ಳಿ: ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟಿರುವ ಭರವಸೆಯಂತೆ ನಿಗದಿತ ಸಮಯದಲ್ಲಿ ಮೀಸಲಾತಿ ಕೊಡದಿದ್ದರೆ ಅಕ್ಟೋಬರ್‌ 15ರಂದು 20 ಲಕ್ಷ ಜನ ಸೇರಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಸಮಾಜಕ್ಕೆ 2 ‘ಎ’ ಮೀಸಲಾತಿ ಪಾದಯಾತ್ರೆಗೆ‌ ಸಹಕರಿಸಿದ ಹರಪನಹಳ್ಳಿ ತಾಲ್ಲೂಕು ಪಂಚಮಸಾಲಿ ಸಮಾಜದವರಿಗೆ ಪಟ್ಟಣದ ವೀರಶೈವ ಪಂಚಮಸಾಲಿ ಪತ್ತಿನ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಶರಣು ಶರಣಾರ್ಥಿ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪಂಚಮಸಾಲಿ ಹೋರಾಟಕ್ಕೆ ಹೊಸ ತಿರುವು ಕೊಟ್ಟ ಪ್ರದೇಶ ಹರಪನಹಳ್ಳಿ. ಭಕ್ತರ ಅಂತಃಕರಣದ‌ ಶಕ್ತಿಯಿಂದ ಹೊಸ ಚೈತನ್ಯ ಮೂಡಿ, ಪಾದಯಾತ್ರೆ ಯಶಸ್ವಿಯಾಗಿ ಮುಗಿದಿದೆ. ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

‘ಜನಸಮುದಾಯದ ಚಳವಳಿಯಾಗಿ ಮಾರ್ಪಟ್ಟು, ಹಳ್ಳಿಯಿಂದ‌ ದಿಲ್ಲಿವರೆಗೂ ಹೋರಾಟ ಸದ್ದು‌ಮಾಡಿದೆ. ಇತಿಹಾಸದಲ್ಲಿ ಗಮನಸೆಳೆದ ಪಾದಯಾತ್ರೆ ಇದು. ಹೋರಾಟಕ್ಕೆ ಮೊದಲ ಗೆಲುವು ಸಿಕ್ಕಿದೆ. ಎಲ್ಲರ ಒತ್ತಾಯದ‌ ಮೇರೆಗೆ ಧರಣಿ ಸತ್ಯಾಗ್ರಹ ನಿಲ್ಲಿಸಿದ್ದೇವೆ. ಅಧಿವೇಶನದಲ್ಲಿ ದಾಖಲಾಗಿದೆ. ಆರು ತಿಂಗಳ ಒಳಗಾಗಿ ಈಡೇರಿಸುವ ಭರವಸೆ ನೀಡಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಲ ಶಾಸಕರ ಮಾತಿನಿಂದ ವಿಳಂಬ ಮಾಡಿದ್ದಾರೆ. ಆಗದಿದ್ದರೆ ಅ.15ರಂದು ಹೋರಾಟ ಮಾಡುತ್ತೇವೆ ಎಂದ ಅವರು, ‘ಸಮಾಜದವರು ಜಾತಿ ಗಣತಿ, ಶಾಲಾ ದಾಖಲಾತಿಯಲ್ಲಿ ಪಂಚಮಸಾಲಿ ಎಂದು ನಮೂದಿಸಿ’ ಎಂದು ಸಲಹೆ ನೀಡಿದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ‘23 ದಿನ ಧರಣಿ, 33 ದಿನ ಕಾಲ್ನಡಿಗೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದೇವೆ. ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೋರಾಟ ಗಮನಾರ್ಹ’ ಎಂದರು.

ಸಮಾಜದ ತಾಲ್ಲೂಕು ಅಧ್ಯಕ್ಷ ಪೂಜಾರ ಚಂದ್ರಶೇಖರ್, ‘ಹೋರಾಟದ ಸಂದರ್ಭದಲ್ಲಿ ಆಗಿದ್ದ ಒಗ್ಗಟ್ಟು ಮುಂದೆಯೂ ಇದೇ ರೀತಿ ಇರಬೇಕು. ಸಮಾಜದ ಹಿತದೃಷ್ಟಿಯಿಂದ ಯಾವುದೇ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸೋಣ, ಒಗ್ಗಟ್ಟಿನಲ್ಲಿ ಬಲವಿದೆ’ ಎಂದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಶಶಿಧರ ಪೂಜಾರ, ಎಂ.ಟಿ.ಸುಭಾಷ್ ಚಂದ್ರ, ಆರುಂಡಿ‌ ನಾಗರಾಜ್, ಎನ್.ಕೊಟ್ರೇಶ್, ಕುಂಚೂರು ಈರಣ್ಣ, ಭದ್ರವಾಡಿ ಚಂದ್ರಶೇಖರ್, ಅಶೋಕ ಗೌಡ, ಪುಷ್ಪಾ ದಿವಾಕರ, ಬಾಗಳಿ ಕೊಟ್ರೇಶಪ್ಪ, ಸಿದ್ದಲಿಂಗಪ್ಪ, ವಿರೂಪಾಕ್ಷಪ್ಪ, ಲೀಲಾ ಲಿಂಗರಾಜ್, ಕಾರ್ಯದರ್ಶಿ ಅಡವಿಹಳ್ಳಿ‌ ಬಸವರಾಜ್, ಷಣ್ಮುಖಪ್ಪ, ಪಂಪಣ್ಣ, ಕೆಂಪನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT