ಮಂಗಳವಾರ, ಡಿಸೆಂಬರ್ 7, 2021
20 °C
ಕಿಲ್ಪಾಡಿ ಗ್ರಾಮ ಪಂಚಾಯಿತಿ: ದೀಪಾವಳಿಯಂತೆ ಆಚರಣೆ

ಮಂಗಳೂರು: ಪುಸ್ತಕ ಮಹತ್ವ ಸಾರಲು ‘ಓದೆಂಬ ಬೆಳಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತಾಲ್ಲೂಕಿನ ಕಿಲ್ಪಾಡಿ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ದೀಪಾವಳಿ ಹಬ್ಬದಂತೆ ಸಂಭ್ರಮ ಮನೆಮಾಡಿತ್ತು. ಅದು ‘ಓದೆಂಬ ಬೆಳಕು’ ವಿಶಿಷ್ಟ ಕಾರ್ಯಕ್ರಮದ ಸಂದರ್ಭ. ಸಂಜೆ 6ರಿಂದ ರಾತ್ರಿ 9ಗಂಟೆವರೆಗೆ ನಡೆದ ಈ ಕಾರ್ಯಕ್ರಮವನ್ನು ಸಾಲು ಸಾಲು ದೀಪಗಳನ್ನು ಹೊತ್ತಿಸುವ ಮೂಲಕ ಮಕ್ಕಳೇ ಉದ್ಘಾಟಿಸಿದ್ದರು. ದೀಪಗಳಿಂದಲೇ ‘ಓದೆಂಬ ಬೆಳಕು’ ಎಂದು ಬರೆದ ಮಕ್ಕಳು ದೀಪಾವಳಿ ಆಚರಿಸಿದಂತೆ ಖುಷಿಪಟ್ಟರು.

ಪತ್ರಕರ್ತ ಪರಮಾನಂದ ಸಾಲ್ಯಾನ್ ಮಾತನಾಡಿ, ‘ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ‘ಓದೆಂಬ ಬೆಳಕು’  ಹಮ್ಮಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ. ಪುಸ್ತಕಗಳ ಮಹತ್ವ ಅರಿತುಕೊಂಡು, ಜ್ಞಾನಾರ್ಜನೆಯ ಮೂಲಕ ಜೀವನದಲ್ಲಿ  ಸಾಧನೆ ಮಾಡಿ ರಾಷ್ಟ್ರಕ್ಕೆ ಮಾದರಿಯಾಗಬೇಕು’ ಎಂದು ಅವರು ಮಕ್ಕಳಿಗೆ ಹಿತವಚನ ಹೇಳಿದರು. 

ಮುಲ್ಕಿ ನಾರಾಯಣಗುರು ಇಂಗ್ಲಿಷ್ ಮಾಧ್ಯಮ ಶಾಲೆಯ ಕನ್ನಡ ಶಿಕ್ಷಕ ಕೇಶವ ಮಾತನಾಡಿ, ‘ವಿವಿಧ ರೀತಿಯ ಅಭಿರುಚಿಯೊಂದಿಗೆ ಮಕ್ಕಳು ವಿದ್ಯಾಭ್ಯಾಸದ ಮೂಲಕ ಸಮಾಜಕ್ಕೆ ಒಳಿತು ಮಾಡುವ ತತ್ವ-ಸಿದ್ಧಾಂತಗಳ ಬಗ್ಗೆ ಗಮನ ಕೊಡಬೇಕು’ ಎಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ‘ಮಕ್ಕಳು ಮತ್ತು ಯುವ ಜನತೆಗೆ ಪುಸ್ತಕದ ಮಹತ್ವ ಸಾರುವುದರ ಜೊತೆಗೆ ಅವರಲ್ಲಿ ಓದಿನ ಹಸಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಬಿಡುವಿನ ವೇಳೆಯಲ್ಲಿ ಮೊಬೈಲ್ ಜೊತೆ ಕಾಲ ವ್ಯಯ ಮಾಡುವ ಬದಲು ಪುಸ್ತಕದ ಜೊತೆ ಕಾಲಕಳೆಯಲು ವೇದಿಕೆ ಕಲ್ಪಿಸಲಾಗಿದೆ’ ಎಂದರು. 

‘ಮುಂಬರುವ ದಿನಗಳಲ್ಲಿ ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ‘ಪುಸ್ತಕ ಗೂಡು’ ಅಳವಡಿಸುವ ಮೂಲಕ ಓದುಗರಿಗೆ ಪುಸ್ತಕಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಜನರು ತಮ್ಮ ಬಿಡುವಿನ ವೇಳೆಯಲ್ಲಿ ಆ ಪುಸ್ತಕಗಳನ್ನು ತಮ್ಮ ಓದಿಗಾಗಿ ಬಳಸಿಕೊಂಡು. ಮತ್ತೆ ಅದೇ ಗೂಡಿನಲ್ಲಿ ಸುರಕ್ಷಿತವಾಗಿಡುವಂತಹ ಜವಾಬ್ದಾರಿ ಬೆಳೆಸಿಕೊಳ್ಳಬೇಕು’ ಎಂದು ಅವರು ವಿನಂತಿಸಿದರು.

ಸುಮಾರು 3 ಗಂಟೆಗಳ ಕಾಲ ಮೊಂಬತ್ತಿ ಬೆಳಕಲ್ಲೇ ಕಾರ್ಯಕ್ರಮ ನಡೆದಿದ್ದು, ಹಿರಿಯರಿಗೆ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ  ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗೋಪಿನಾಥ ಪಡಂಗ, ಸದಸ್ಯರಾದ ವಿಕಾಸ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಮಾಜಿ ಸದಸ್ಯ ಶರೀಫ್ ಕಿಲ್ಪಾಡಿ, ದೇಹದಾರ್ಢ್ಯ ಪಟು ನಾಗೇಶ್ ಪ್ರಸಾದ್, ಲೇಖಕಿ ಅನಿತಾ ಪಿಂಟೊ, ನಿವೃತ್ತ ಶಿಕ್ಷಕಿ ಹೇಮಲತಾ ಇದ್ದರು.

ಪುಸ್ತಕ ವಿಮರ್ಶೆ ಸ್ಪರ್ಧೆ

‘ಓದೆಂಬ ಬೆಳಕು’ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಓದು ಮತ್ತು ವಿಮರ್ಶೆ ಸ್ಪರ್ಧೆಯನ್ನು ಅಯೋಜಿಸಲಾಗುತ್ತಿದ್ದು, ಆಸಕ್ತರು ಮುಂಚೆಯೇ ತಮ್ಮ ನೆಚ್ಚಿನ ಪುಸ್ತಕದ ಹೆಸರನ್ನು ಗ್ರಾಮ ಪಂಚಾಯಿತಿಯಲ್ಲಿ ನೋಂದಾಯಿಸಿ ಸ್ಪರ್ಧೆಯ ದಿನ ವಿಮರ್ಶೆಯನ್ನು ಮಂಡಿಸಬೇಕಾಗುತ್ತದೆ.  ವಿಜೇತರಿಗೆ ನವೆಂಬರ್ 14ರಂದು ಮಕ್ಕಳ ದಿನಾಚರಣೆಯಲ್ಲಿ ಅಭಿನಂದಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು