ಚನ್ನಗಿರಿ: ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣ ಮಾಡುತ್ತಿರುವ ಬೈಪಾಸ್ ರಸ್ತೆ ಕಾಮಗಾರಿಯನ್ನು ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಪಟ್ಟಣದ ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಸುಗಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ದನಗಳ ಮಾಲೀಕರ ವಿರುದ್ಧ ಹಾಗೂ ರಸ್ತೆ ಬದಿಗಳಲ್ಲಿ ಅಡಿಕೆ ಸಿಪ್ಪೆ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ರಸ್ತೆ ಬದಿಯಲ್ಲಿ ಅಡಿಕೆ ಸಿಪ್ಪೆ ಹಾಕಿ ಅದನ್ನು ಸುಟ್ಟು ಹಾಕುತ್ತಿರುವುದು ಸರಿಯಲ್ಲ. ಅಡಿಕೆ ಸಿಪ್ಪೆ ಸುಟ್ಟ ಹೊಗೆಯು ಅತ್ಯಂತ ಮಾಲಿನ್ಯಕಾರಿ. ಹಾಗಾಗಿ ಪರಿಸರ ಇಲಾಖೆಯ ನಿರ್ದೇಶನದಂತೆ ರಸ್ತೆ ಬದಿಯಲ್ಲಿ ಅಡಿಕೆ ಸಿಪ್ಪೆ ಹಾಕುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ’ ಎಂದು ಹೇಳಿದರು.
‘ಸಾರ್ವಜನಿಕರಿಗೆ ಉಪದ್ರವ ನೀಡುವಂತಹ ಯಾವುದೇ ಘಟನೆಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಪ್ರತಿ ತಿಂಗಳು ಮೂರು ಬಾರಿಯಾದರೂ ಈ ತಾಲ್ಲೂಕಿಗೆ ಭೇಟಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ನಾವು ಕೂಡಾ ರೈತರ ಮಕ್ಕಳೇ. ರೈತರು ತಮ್ಮ ಜಮೀನುಗಳಲ್ಲಿ ಅಡಿಕೆ ಸಿಪ್ಪೆ ಹಾಕಿ ಗೊಬ್ಬರ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಕೆ.ಆರ್.ರುಕ್ಮಿಣಿಬಾಯಿ, ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ, ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್, ಬಿಇಒ ಎಲ್.ಜಯಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಉಪಸ್ಥಿತರಿದ್ದರು.