ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರ ಜಿಲ್ಲಾ ಕ್ರಿಕೆಟ್‌ ಪಂದ್ಯಾವಳಿ: ದಾವಣಗೆರೆ, ತುಮಕೂರು ತಂಡಗಳ ಶುಭಾರಂಭ

ಕೆಎಸ್‌ಸಿಎ 16 ವರ್ಷದೊಳಗಿನ ಅಂತರಜಿಲ್ಲಾ ಕ್ರಿಕೆಟ್‌
Published : 8 ಸೆಪ್ಟೆಂಬರ್ 2024, 15:39 IST
Last Updated : 8 ಸೆಪ್ಟೆಂಬರ್ 2024, 15:39 IST
ಫಾಲೋ ಮಾಡಿ
Comments

ದಾವಣಗೆರೆ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿರುವ ತುಮಕೂರು ವಲಯದ 16 ವರ್ಷದೊಳಗಿನ ಅಂತರ ಜಿಲ್ಲಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾನುವಾರ ನಡೆದ ತಮ್ಮ ಮೊದಲ ಪಂದ್ಯಗಳಲ್ಲಿ ಜಯಿಸುವ ಮೂಲಕ ದಾವಣಗೆರೆ ಹಾಗೂ ತುಮಕೂರು ಜಿಲ್ಲಾ ತಂಡಗಳು ಶುಭಾರಂಭ ಮಾಡಿದವು.

ಇಲ್ಲಿನ ಎಂಬಿಎ ಕಾಲೇಜು ಟರ್ಫ್‌ ಮೈದಾನದಲ್ಲಿ ಬಳ್ಳಾರಿ ಜಿಲ್ಲಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲ ಬ್ಯಾಟಿಂಗ್‌ ಅವಕಾಶ ಪಡೆದ ದಾವಣಗೆರೆ ತಂಡ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 247 ರನ್‌ ಗಳಿಸಿತು.

ತಂಡದ ಪರ ಶತಕ ಸಿಡಿಸಿ ಗಮನ ಸೆಳೆದ ಆರಂಭಿಕ ಬ್ಯಾಟರ್‌ ಕೆ.ಅಖಿಲ್‌ 107 (143 ಎಸೆತ, 9 ಬೌಂಡರಿ) ಹಾಗೂ ನಾಯಕ ಎ.ಎ.ರೋಹಿತ್‌ ಔಟಾಗದೇ 82 (98 ಎಸೆತ, 8 ಬೌಂಡರಿ) ಉತ್ತಮ ಪ್ರದರ್ಶನ ನಿಡಿದರು. ತಂಡದ ಎ.ಜಿ. ಕಲ್ಲೇಶ್‌ 23 ರನ್‌ ಗಳಿಸಿ ಅಲ್ಪ ಕಾಣಿಕೆ ನೀಡಿದರು. ಬಳ್ಳಾರಿಯ ಬೌಲರ್‌ಗಳಾದ ಬಿ.ಪ್ರೀತಮ್‌, ಅಮಿತ್‌ ವಿಶಾಲ್ವತ್‌ ಹಾಗೂ ವಿಷ್ಣು ಸ್ವರೂಪ್‌ ತಲಾ 1 ವಿಕೆಟ್‌ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಬಳ್ಳಾರಿ ತಂಡಕ್ಕೆ ಎರಡು ಬಾರಿ ಮಳೆ ಅಡ್ಡಿಪಡಿಸಿದ್ದರಿಂದ ಪರಿಷ್ಕೃತ ಗುರಿ ಒದಗಿಸಲಾಯಿತು. ಆದರೆ, ಬಳ್ಳಾರಿ ತಂಡ ಗುರಿ ತಲುಪದೇ 5 ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ತಂಡದ ಪರ ಆರಂಭಿಕ ಬ್ಯಾಟರ್‌ ರೋಹಿತ್‌ 60, ಮಧ್ಯಮ ಕ್ರಮಾಂಕದ ಪ್ರತೀಕ್‌ ಸಾಯಿ 34 ರನ್‌ ಗಳಿಸಿ ಕೊಂಚ ಪ್ರತಿರೋಧ ಒಡ್ಡಿದರಾದರೂ ಪ್ರಯೋಜನವಾಗಲಿಲ್ಲ.

ದಾವಣಗೆರೆ ತಂಡದ ಪಾರ್ಥ ಜೋಯಿಸ್‌ 2, ಮಹಮ್ಮದ್‌ ಅಕ್ರಮ್‌, ಕೆ.ಸಿ. ವೀರೇಶ, ಕೆ.ಎ. ಅಮನ್‌ ತಲಾ 1 ವಿಕೆಟ್‌ ಗಳಿಸಿದರು.

ತುಮಕೂರಿಗೆ ಸುಲಭದ ಜಯ:

ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ತುಮಕೂರು ತಂಡ ಚಿತ್ರದುರ್ಗ ವಿರುದ್ಧ 8 ವಿಕೆಟ್‌ಗಳ ಸುಲಭದ ಜಯ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಚಿತ್ರದುರ್ಗ ತಂಡವು ಲೆಗ್‌ ಸ್ಪಿನ್ನರ್‌ ಎಂ.ಜಿ. ಕಿಶೋರ್‌ ಅವರ ಮಾರಕ ಬೌಲಿಂಗ್‌ (4 ರನ್‌ಗೆ 5 ವಿಕೆಟ್‌) ಕುಸಿದು 29.4 ಓವರ್‌ಗಳಲ್ಲಿ ಕೇವಲ 67ಕ್ಕೆ ಎಲ್ಲ ವಿಕೆಟ್‌ ಕಳೆದುಕೊಂಡಿತು. ತುಮಕೂರು ಪರ ಕೆ.ಎಸ್‌. ರೋಹಿತ್‌ ಮತ್ತು ಅಭಿ ತಲಾ 2 ವಿಕೆಟ್‌ ಪಡೆದರು.

ಉತ್ತರವಾಗಿ ತುಮಕೂರು ತಂಡವು ಲಕ್ಷಿತ್‌ (26), ಸುಜನ್‌ (ಔಟಾಗದೇ 21) ಅವರ ಉತ್ತಮ ಬ್ಯಾಟಿಂಗ್‌ ನೆರವಿನಿಂದ 10.1 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು. ಚಿತ್ರದುರ್ಗ ಪರ ನೂತನ್‌ ಸಿರಿ ಹಾಗೂ ನಾಗಾರ್ಜುನ ಪಟೇಲ್‌ ತಲಾ 1 ವಿಕೆಟ್‌ ಗಳಿಸಿದರು.

ಸೋಮವಾರ ದಾವಣಗೆರೆ ತಂಡ ಚಿತ್ರದುರ್ಗದ ವಿರುದ್ಧ, ತುಮಕೂರು ತಂಡ ಬಳ್ಳಾರಿ ವಿರುದ್ಧ ತಮ್ಮ ಎರಡನೇ ಪಂದ್ಯ ಆಡಲಿವೆ.

ಎ.ಎ.ರೋಹಿತ್‌
ಎ.ಎ.ರೋಹಿತ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT