ಸೋಮವಾರ, ಜನವರಿ 17, 2022
18 °C
ಒಂದೇ ವೇದಿಕೆಯಲ್ಲಿ ಶ್ರೀರಾಮುಲು-, ಕರುಣಾಕರ ರೆಡ್ಡಿ

ಮರುಕಳಿಸುವುದೇ ಗಣಿಧಣಿಗಳ ಒಗ್ಗಟ್ಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ವೈ.ಎಂ. ಸತೀಶ್‌ ಗೆಲ್ಲಿಸಲು ಬಳ್ಳಾರಿ–ವಿಜಯನಗರ ಜಿಲ್ಲೆಗಳ ಬಿಜೆಪಿ ಮುಖಂಡರು ಬುಧವಾರ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಪಟ್ಟಣದ ನಟರಾಜ ಕಲಾಭವನದಲ್ಲಿ ಬಿಜೆಪಿ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಬಳ್ಳಾರಿ ಗಣಿಧಣಿಗಳ ಕುಟುಂಬದ ಆಪ್ತರಾಗಿರುವ ಶ್ರೀರಾಮುಲು ಅವರು ಹಲವು ವರ್ಷಗಳ ಬಳಿಕ ಮೊದಲ ಬಾರಿ ಕರುಣಾಕರ ರೆಡ್ಡಿ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಇದು ಚರ್ಚೆಗೆ ನಾಂದಿ ಹಾಡಿದೆ.

ಇಬ್ಬರೂ ತಮ್ಮ ಭಾಷಣಗಳಲ್ಲಿ ಪರಸ್ಪರ ಹೆಸರು ಪ್ರಸ್ತಾಪಿಸಿದರು. ಹಿಂದೆ ವೈಯಕ್ತಿಕವಾಗಿ ಇಬ್ಬರ ನಡುವೆ ಉಂಟಾಗಿದ್ದ ಗೊಂದಲಗಳು ಸರಿಯಾಗಿ ಕುಟುಂಬಗಳು ಒಟ್ಟಾಗಿರುವ ಸೂಚನೆ ಕೊಟ್ಟಂತಾಯಿತು.

ಸಚಿವ ಶ್ರೀರಾಮುಲು ಮತ್ತು ಶಾಸಕ ಕರುಣಾಕರ ರೆಡ್ಡಿ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಚರ್ಚೆಯಲ್ಲಿ ಮಗ್ನರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಸಂಸದ ವೈ. ದೇವೇಂದ್ರಪ್ಪ ದನಿಗೂಡಿಸುತ್ತಿದ್ದರು. ಕರುಣಾಕರ ರೆಡ್ಡಿ ಅವರೇ ಶ್ರೀರಾಮುಲು ಅವರನ್ನು ಸನ್ಮಾನಿಸಿದರು.

ಸಚಿವ ಶ್ರೀರಾಮುಲು ಮಾತನಾಡಿ, ‘ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿರುವ ಕಾಂಗ್ರೆಸ್‌ನಿಂದ ದೇಶ ಹಿಂದುಳಿಯಲು ಕಾರಣವಾಗಿದೆ. ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿಸಿದರೆ, ಕೇಂದ್ರ, ರಾಜ್ಯ ಮತ್ತು ವಿಧಾನಪರಿಷತ್‌ನಲ್ಲೂ ಬಹುಮತ ಪಡೆದು, ಅಭಿವೃದ್ಧಿಗೆ ಸಹಕಾರಿ ಆಗುತ್ತದೆ’ ಎಂದರು.

ಶಾಸಕ ಜಿ.ಕರುಣಾಕರ ರೆಡ್ಡಿ, ‘2009ರಲ್ಲಿ ಶ್ರೀರಾಮುಲು ಮತ್ತು ನಾವೆಲ್ಲರೂ ಅಂದು ಬಿಜೆಪಿ ಗೆಲ್ಲಿಸಿದ್ದೆವು. ಈ ಬಾರಿ ಅದು ಮರುಕಳಿಸುತ್ತದೆ. ಶ್ರೀರಾಮುಲು ಆರೋಗ್ಯ ಸಚಿವರಾ
ಗಿದ್ದಾಗ, ಕೊರೊನಾ ತಡೆಗೆ ಒತ್ತುಕೊಟ್ಟು ಕೆಲಸ ಮಾಡಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ಆನಂದಸಿಂಗ್, ‘ದೇಶದ ಸ್ವಾತಂತ್ರ್ಯಕ್ಕಾಗಿ ಸಂಘಟಿತವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಹೈಜಾಕ್ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ತಾನಾಗಿಯೇ ನಿರ್ನಾಮ ಆಗುತ್ತದೆ. ಬಳ್ಳಾರಿ ಜಿಲ್ಲೆ ವಿಧಾನಪರಿಷತ್ ಟಿಕೆಟ್ ಈಗಿನ ಅಭ್ಯರ್ಥಿಗೆ ಕೊಡಬೇಡಿ ಎಂದು ಕಾಂಗ್ರೆಸ್ ಶಾಸಕರೇ ಅವರ ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ದಲಿತರಿಗೆ ಬಿ ಫಾರಂ ಕೊಡುವಂತೆ ಬರೆದ ಪತ್ರ ನಮ್ಮ ಬಳಿ ಇವೆ’ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ವಾಜಪೇಯಿ ಅವರು ಅಧಿಕಾರಕ್ಕೆ ಬಂದಾಗ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕೊಡುವ ಯೋಜನೆ ಜಾರಿಗೆ ತಂದರು. ಅನ್ಯ ಪಕ್ಷಗಳ ಆಮಿಷಕ್ಕೆ ಬಲಿಯಾಗದೇ ಬಿಜೆಪಿ ಬೆಂಬಲಿಸಬೇಕು’ ಎಂದು ಮತದಾರರಲ್ಲಿ ಮನವಿ ಮಾಡಿದರು.

ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹನುಮಂತಪ್ಪ, ಅಭ್ಯರ್ಥಿ ವೈ.ಎಂ. ಸತೀಶ್, ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕ ಅಧ್ಯಕ್ಷ ಚನ್ನಬಸವನಗೌಡ ಮಾತನಾಡಿದರು.

ದಮ್ಮೂರು ಶೇಖರ್, ಮುರಾರಿಗೌಡ, ಅನಿಲ್ ನಾಯ್ಡು, ಸಿದ್ದೇಶ ರೆಡ್ಡಿ, ಮಂಜುನಾಥ್, ಸತ್ತೂರು ಹಾಲೇಶ್, ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶ್, ಎಸ್.ಪಿ.ಲಿಂಬ್ಯನಾಯ್ಕ, ರಾಘವೇಂದ್ರ ಶೆಟ್ಟಿ, ಯು.ಪಿ.ನಾಗರಾಜ್, ಸಂತೋಷ್, ಮಲ್ಲೇಶ್, ಇಜಂತಕರ್ ಮಂಜುನಾಥ್, ಸಣ್ಣಹಾಲಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು