ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಮನೋಭಾವವಿಲ್ಲದಿದ್ದರೆ ಕಷ್ಟ

ಜಿಲ್ಲಾ ಕುರುಬ ಸಮಾಜ, ವಿವಿಧ ಸಂಘಟನೆಗಳ ಸಭೆಯಲ್ಲಿ ಕೆಂಗೋ ಹನುಮಂತಪ್ಪ
Last Updated 10 ಅಕ್ಟೋಬರ್ 2020, 14:19 IST
ಅಕ್ಷರ ಗಾತ್ರ

ದಾವಣಗೆರೆ: ಹೋರಾಟದ ಮನೋಭಾವ ಇಲ್ಲದೇ ಇದ್ದರೆ ಸಮಾಜ ಬೆಳೆಯುವುದು ಕಷ್ಟ. ಹಾಗಾಗಿ ಸಮಾಜದ ಒಳಿತಿಗಾಗಿ ಕೈಗೊಳ್ಳುವ ನಿರ್ಧಾರಗಳಿಂದ ರಾಜಕೀಯ ಮುಖಂಡರು ಹಿಂದೆ ಸರಿಯಬಾರದು. ಎಸ್‌ಟಿ ಮೀಸಲಾತಿ ಹೋರಾಟ ಯಶಸ್ವಿಯಾಗಬೇಕು ಎಂದು ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೆಂಗೋ ಹನುಮಂತಪ್ಪ ಹೇಳಿದರು.

ಎಸ್ಟಿ ಹೋರಾಟ ಹಾಗೂ ಕುರಿ ಮತ್ತು ಜಾನುವಾರು ಮೃತಪಟ್ಟಾಗ ಸರ್ಕಾರದಿಂದ ಪ್ರೋತ್ಸಾಹ ಧನ ನೀಡುವ ಬಗ್ಗೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾ ಕುರುಬ ಸಮಾಜ, ಪ್ರದೇಶ ಕುರುಬರ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ದೇಶದಲ್ಲಿ ಈಚೆಗೆ 24 ಗಂಟೆಗಳಲ್ಲಿ ಶೇ 10 ಮೀಸಲಾತಿ ನೀಡಿದ ಉದಾಹರಣೆ ನಮ್ಮ ಮುಂದಿದೆ. ಇದಕ್ಕೆ ರಾಜಕೀಯ ಹಿತಾಸಕ್ತಿ ಕಾರಣ. ನಮ್ಮ ಸಮಾಜ ತೊಂದರೆಗೀಡಾದಾಗ ದಾವಣಗೆರೆಯಿಂದ ಬೆಂಗಳೂರುವರೆಗೆ ಹೋರಾಟ ನಡೆಸಿದ್ದೇವೆ. ಈಗ ರಾಜ್ಯದ ಜನರಲ್ಲಿ ಹೋರಾಟ ಮನೋಭಾವ ಬಂದಿದೆ. ಈ ಹೋರಾಟದಿಂದ ಹಿಂದೆ ಸರಿಯದೆ ನಮ್ಮ ಹಕ್ಕು ಪಡೆಯಬೇಕು’ ಎಂದು ತಿಳಿಸಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಕಷ್ಟು ಸವಲತ್ತುಗಳಿಂದ ಕುರುಬ ಸಮಾಜ ವಂಚಿತವಾಗಿದೆ. ಈ ಬಗ್ಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಜನಪ್ರತಿನಿಧಿಗಳ ಸಭೆಗೆ ಜಿಲ್ಲೆಯಿಂದ ಸಾವಿರಾರು ಜನ ಭಾಗವಹಿಸಬೇಕು ಎಂದು ಎಸ್ಟಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಕೊಳೇನಹಳ್ಳಿ ಸತೀಶ್, ಪಿ. ರಾಜ್‌ಕುಮಾರ್ ಕೋರಿದರು.

‘ನಾವು ಬೇರೊಬ್ಬರ ಮೀಸಲಾತಿಯನ್ನು ಪಡೆಯಲು ಹೋರಾಟ ಮಾಡುತ್ತಿಲ್ಲ. ನಮ್ಮ ಹಕ್ಕು ನಮಗೆ ನೀಡಬೇಕೆಂದು ಹೋರಾಟ ಮಾಡುತ್ತಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎಚ್. ಪರಶುರಾಮಪ್ಪ, ಜಿ.ಸಿ. ನಿಂಗಪ್ಪ, ಕೆ.ಆರ್. ಜಯಶೀಲ ಹೇಳಿದರು.

ಜಿಲ್ಲಾ ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ‘2012ರಲ್ಲಿ ದಾವಣಗೆರೆಯಲ್ಲಿ ನಡೆದ ಕುರುಬ ಸಮಾಜ ಜಾಗೃತಿ ಸಮಾವೇಶ ದೇಶದ ಕಣ್ಣನ್ನು ತೆರೆಸಿದೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಜಾಗೃತಿ ಮೂಡಿಸಿ ಸ್ವಾಮೀಜಿ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಚ್.ಬಿ. ಪರಶುರಾಮಪ್ಪ, ಜೆ.ಕೆ. ಕೊಟ್ರಬಸಪ್ಪ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೈ. ವಿರೂಪಾಕ್ಷಪ್ಪ, ಗೌಡ್ರು ಚನ್ನಬಸಪ್ಪ, ಎಸ್. ವೆಂಕಟೇಶ್, ಹೊನ್ನಾಳಿ ಸಿದ್ದಪ್ಪ, ದೀಟೂರು ಚಂದ್ರು, ಎಚ್.ಬಿ. ಗೋಣೆಪ್ಪ, ಎಚ್.ಎನ್. ಗುರುನಾಥ್, ಸೊಕ್ಕೆ ನಾಗರಾಜ್, ರಾಜಶೇಖರ್, ಬಸವರಾಜಪ್ಪ, ಕುಂದುವಾಡ ಗಣೇಶ್, ಎನ್.ಜೆ. ನಿಂಗಪ್ಪ, ಎಚ್.ಜಿ. ಸಂಗಪ್ಪ, ಬಳ್ಳಾರಿ ಷಣ್ಮುಖಪ್ಪ, ಹೊಳಲ್ಕೆರೆ ಪ್ರಕಾಶ್, ಕೆ. ಪರಶುರಾಮ್, ಜಮ್ನಳ್ಳಿ ನಾಗರಾಜ್, ಶ್ರೀನಿವಾಸ್, ಬಿ.ಟಿ. ಹನುಮಂತಪ್ಪ, ಎಸ್.ಎಸ್. ರವಿಕುಮಾರ್, ಸುಭಾಷ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT