ಜಗಳೂರು: ಅಕ್ರಮ ಮದ್ಯ ಮಾರಾಟದಿಂದಾಗಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಇದರಿಂದ ಬೇಸತ್ತ ತಾಲ್ಲೂಕಿನ ಕೊಡದಗುಡ್ಡ ಗ್ರಾಮಸ್ಥರು ಗ್ರಾಮದಲ್ಲಿ ಸಭೆ ನಡೆಸುವ ಜೊತೆಗೆ ಮದ್ಯ ಮಾರಾಟಗಾರರಿಂದ ದೇವರ ಮೇಲೆ ಆಣೆ–ಪ್ರಮಾಣ ಮಾಡಿಸಿ ಮದ್ಯ ಮಾರಾಟ ಮಾಡದಂತೆ ತಾಕೀತು ಮಾಡಿದ್ದಾರೆ.
ಗ್ರಾಮದಲ್ಲಿ ಒಟ್ಟು 50 ಮನೆಗಳಿವೆ. ಈ ಪೈಕಿ ನಾಲ್ಕೈದು ಮನೆಗಳಲ್ಲಿ ಮಹಿಳೆಯರು ಹಲವು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಕುಡುಕರಿಂದಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗಿತ್ತು. ಕಳ್ಳತನಗಳು, ಗಲಭೆಗಳು ಹೆಚ್ಚಾಗಿದ್ದವು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಭೆಗೆ ಕರೆಸಿ ಛೀಮಾರಿ ಹಾಕಿದ್ದಾರೆ.
ಗ್ರಾಮದ ಮುಖಂಡರು ನೀಡಿದ ದೂರಿನ ಮೇರೆಗೆ ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಶೀಲಾ ಹಾಗೂ ಬಿಳಿಚೋಡು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಓಂಕಾರನಾಯ್ಕ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಅವರು ಮದ್ಯ ಮಾರಾಟ ಮಾಡದಂತೆ ಮಹಿಳೆಯರಿಗೆ ಸೂಚಿಸಿದರು. ಒಂದೊಮ್ಮೆ ಮಾರಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಗಡಿಪಾರು ಮಾಡುವುದಾಗಿ ಎಚ್ಚರಿಸಿದರು.
ಗ್ರಾಮದ ಮುಖಂಡರಾದ ಅನಂತಮೂರ್ತಿ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ರವಿಚಂದ್ರ ಬಸವಾಪುರ ಹಾಗೂ ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರಕಾಶ್ ಅವರ ಸಮ್ಮುಖದಲ್ಲಿ ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ಮೇಲೆ ಆಣೆ ಮಾಡಿಸಲಾಗಿದೆ.
‘ರಾಜ್ಯದ ಪ್ರಖ್ಯಾತ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ನಮ್ಮ ಗ್ರಾಮಕ್ಕೆ ಪ್ರತಿನಿತ್ಯ ವಿವಿಧೆಡೆಯಿಂದ ನೂರಾರು ಭಕ್ತರು ಬಂದು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮದ್ಯ ಮಾರಾಟದಿಂದ ಅಶಾಂತಿ ಮೂಡುತ್ತಿದ್ದು, ಗ್ರಾಮದಲ್ಲಿ ಕಾನೂನು ಸುವ್ಯಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿಕೊಂಡು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದು ಮುಖಂಡ ಅನಂತಮೂರ್ತಿ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.